ಮುಖ್ಯ ಸುದ್ದಿ
Taralabalu mata sirigere: ತರಳಬಾಳು ಮಠ ಸರ್ವಜನಾಂಗದ ಶಾಂತಿಯ ತೋಟ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

CHITRADURGA NEWS | 22 SEPTEMBER 2024
ಚಿತ್ರದುರ್ಗ: ಸಿರಿಗೆರೆ ತರಳಬಾಳು ಮಠ ಒಂದು ಜಾತಿಗೆ ಸೇರಿದ್ದರೂ, ಎಲ್ಲಾ ಸಂಕೋಲೆಗಳನ್ನು ಮೀರಿ ಮಠವನ್ನು ಕಟ್ಟಿದ ಕೀರ್ತಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಆಶಯದಂತೆ ಸಮಾಜವನ್ನು ಕಟ್ಟುವ ಕನಸು ಅವರದ್ದಾಗಿತ್ತು ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀ ಶ್ರದ್ಧಾಂಜಲಿ ಕಾರ್ಯಕ್ರಮದ 2ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ‘ಶಿವಕುಮಾರ ಶ್ರೀಗಳು ಬಸವಣ್ಣನವರ ಆಶಯಗಳನ್ನು ಗಟ್ಟಿಗೊಳಿಸಿದವರು. ಅದರ ಪ್ರಯೋಗಕ್ಕಾಗಿ ಸಿರಿಗೆರೆಯನ್ನು ಆಯ್ಕೆ ಮಾಡಿಕೊಂಡರು. ದೇಶದಲ್ಲಿ ಸಂವಿಧಾನ ಜಾರಿಗೆ ಬರುವ ಮೊದಲೇ ಸಿರಿಗೆರೆ ಮಠದಲ್ಲಿ ಎಲ್ಲಾ ಜಾತಿ ಜನಾಂಗದ ಮಕ್ಕಳನ್ನು ಒಟ್ಟುಗೂಡಿಸಿ ಸಹಪಂಕ್ತಿ ಭೋಜನ ಮಾಡಿದ್ದರು’ ಎಂದು ತಿಳಿಸಿದರು.
‘ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಎಂಬ ಭಿನ್ನತೆ ನಮ್ಮಲ್ಲಿಲ್ಲ. ನಮ್ಮ ಕಾರ್ಯಗಳನ್ನು ಮೆಚ್ಚಿಕೊಂಡು ಎಲ್ಲಾ ಸರ್ಕಾರಗಳೂ ನಮ್ಮ ಯೋಜನೆಗಳನ್ನು ಪುರಸ್ಕರಿಸಿ ಹಣಕಾಸಿನ ನೆರವು ನೀಡಿವೆ. ತತ್ವ ಮತ್ತು ಸಿದ್ಧಾಂತಗಳನ್ನು ಮುಂದೆ ಮಾಡಿಕೊಂಡು ಮಠ ಕೆಲಸ ಮಾಡುತ್ತಿದೆ’ ಎಂದರು.

ಕ್ಲಿಕ್ ಮಾಡಿ ಓದಿ: ಘೋಷಣೆಯಾಯ್ತು ದಸರಾ ರಜೆ | ಯಾವಾಗಿಂದ ಆರಂಭ, ಎಷ್ಟು ದಿನ ?
ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ರೈತರು ಅನುಭವಿಸುತ್ತಿರುವ ಸಂಕಷ್ಟಗಳದ್ದೇ ಚಿಂತೆಯಾಗಿದೆ. ಅವರು ರೈತರ ಅಭಿವೃದ್ಧಿಯ ಕನಸುಗಳನ್ನೇ ಕಾಣುತ್ತಿದ್ದಾರೆ. ಅವರ ಕಷ್ಟಗಳನ್ನು ನಿವಾರಿಸುತ್ತಿದ್ದಾರೆ’ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರು
‘ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡಿರುವ ಭರಮಸಾಗರ ಏತ ನೀರಾವರಿ ಯೋಜನೆಯ ಲಾಭ ಕಳೆದ ಎರಡು ವರ್ಷಗಳಿಂದ ರೈತರಿಗೆ ದೊರೆಯುತ್ತಿದೆ. ಆ ಯೋಜನೆ ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಇದಕ್ಕೆಲ್ಲಾ ಶ್ರೀಗಳ ಇಚ್ಛಾಶಕ್ತಿ ಕಾರಣ. 1946ರಷ್ಟು ಹಿಂದೆಯೇ ಶಿಕ್ಷಣ ಸಂಸ್ಥೆ ಆರಂಭ ಮಾಡುವ ಮೂಲಕ ಸರ್ವ ಜನಾಂಗದ ಮಕ್ಕಳಿಗೆ ಅನ್ನದಾಸೋಹ, ಅಕ್ಷರ ದಾಸೋಹ ಮಾಡಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. ಬಸವಾದಿ ಶಿವಶರಣರ ಸಮಕಾಲೀನರು ಸಂಕಲ್ಪಿಸಿದ ಸಾಮಾಜಿಕ ಕ್ರಾಂತಿಯ ತೇರನ್ನು ಶಿವಕುಮಾರ ಶ್ರೀಗಳು ಎಳೆದರು. ಆ ಕೆಲಸದಿಂದ ತರಳಬಾಳು ಗುರುಪರಂಪರೆಗೆ ಕೀರ್ತಿ ಸಂದಿದೆ’ ಎಂದರು.
ಕ್ಲಿಕ್ ಮಾಡಿ ಓದಿ: ಏಕಾಏಕಿ ಕುಸಿದ ಕಲ್ಲಿನ ದ್ವಾರ | ನೀರುಗಂಟಿ ಮೇಲೆ ಮೇಲೆ ಬಿದ್ದ ಕಲ್ಲು
ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಮಾತನಾಡಿ, ‘ತರಳಬಾಳು ಮಠಕ್ಕೆ ಸಾಂಸ್ಕೃತಿಕ ಶಕ್ತಿಯಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ. ಅವರ ಅಪಾರ ವಿದ್ವತ್ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಗಮನದಲ್ಲಿದೆ. ಆ ಕಾರಣದಿಂದಲೇ ಅವರ ಯೋಜನೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. 56 ಕಿ.ಮೀ ದೂರದ ಭರಮಸಾಗರ ಏತನೀರಾವರಿ ಪೈಪ್ ಲೈನ್ ಯೋಜನೆ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಪೂರ್ಣಗೊಂಡು ರೈತ ಸಮುದಾಯಕ್ಕೆ ನೀರು ದೊರೆಯುವಂತಾಗಿದೆ’ ಎಂದರು.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮತ್ತು ಶಿಕ್ಷಣದ ಪರಿಕಲ್ಪನೆಯಲ್ಲಿ ಹೋರಾಟ ಮಾಡಿದರೆ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಗ್ರಾಮೀಣರ ಶಿಕ್ಷಣಕ್ಕಾಗಿ ಹೋರಾಡಿದ್ದರು. ಮಠದ ಪರಂಪರೆ, ವಿಶಾಲತೆ ಎಲ್ಲಾ ಸಮುದಾಯಗಳ ಕೈಹಿಡಿದಿದೆ. ದುಗ್ಗಾಣಿ ಮಠವೆಂಬ ಅಪಕೀರ್ತಿ ಹೊಂದಿದ್ದ ಮಠಕ್ಕೆ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೊಟ್ಟಿದ್ದಾರೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್ | ಇಬ್ಬರ ಬಂಧನ
ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಬೆಳ್ಳಿಪ್ರಕಾಶ್ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ ಶ್ರೀಗಳ ಕಲೋಪಾಸನೆ ಕುರಿತು ಉಪನ್ಯಾಸ ನೀಡಿದರು. ದಾವಣಗೆರೆ ಪಂಚಾಕ್ಷರ ಸಂಗೀತ ಶಾಲೆಯ ಶಿವಕುಮಾರ ಸ್ವಾಮಿ ತಂಡದವರು ವಚನ ಹಾಡಿದರು. ತರಳಬಾಳು ಕಲಾಸಂಘದ ಬಾಲಕಿಯರು ಭರತನಾಟ್ಯ ಪ್ರಸ್ತುತಪಡಿಸಿದರು.
