CHITRADURGA NEWS | 12 APRIL 2026
ಹೊಳಲ್ಕೆರೆ: ಅನಾದಿ ಕಾಲದಿಂದಲೂ ಬೇರೂರಿದ್ದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ ವಿರುದ್ಧ ಜನಾಂದೋಲನ ರೂಪಿಸಿ ಕ್ರಾಂತಿಕಾರಿ ಚಳವಳಿ ನಡೆಸಿದ 12ನೇ ಶತಮಾನದ ಬಸವಾದಿ ಶರಣ ಸಿದ್ಧಾಂತವನ್ನು ಪಾಲಿಸುವಲ್ಲಿ ಜನ ನಿರಾಸಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ಸಿದ್ಧಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಬೇಸರಿಸಿದರು.
ಇದನ್ನೂ ಓದಿ: ಪೊಲೀಸ್ ಎಂದು ಹೇಳಿ ಮೊಬೈಲ್ ಕದ್ದಿದ್ದ ವ್ಯಕ್ತಿ ನ್ಯಾಯಾಂಗ ಬಂಧನಕ್ಕೆ
ಪಟ್ಟಣದಲ್ಲಿ ಆಯೋಜಿಸಿದ್ದ ಮಾದಿಗ ಸಮುದಾಯದ ಮುಖಂಡ ಭಾನುಮೂರ್ತಿ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನ ಯುಗದಲ್ಲಿ ಬೇಡುವವರು ಇರಲಿಲ್ಲ, ನೀಡುವವರು ಇದ್ದರು. ಆದರೆ, ಈಗ ಅಂತಹ ಪರಿಸ್ಥಿತಿ ಬದಲಾಗಿದೆ ಎಂದರು.
ಜಗತ್ತಿನಲ್ಲಿ ಅನೇಕರು ಹುಟ್ಟಿ ಕಣ್ಮರೆ ಆಗಿದ್ದಾರೆ. ಆದರೆ, ನಿಸ್ವಾರ್ಥ ಸೇವೆ ಮೂಲಕ ಬದುಕಿದವರು ನಿಧನದ ಬಳಿಕವೂ ಜೀವಂತವಾಗಿದ್ದಾರೆ. ಆದರೆ, ಈಗಿನ ಜನರಲ್ಲಿ ಬಹುತೇಕ ಬದ್ಧತೆ, ಸೇವಾ ಮನೋಭಾವ, ಪರೋಪಕಾರಿ ಗುಣ ಕಣ್ಮರೆ ಆಗುತ್ತಿದೆ ಎಂದು ಬೇಸರಿಸಿದರು.
ಯಾರೂ ತಮಗಾಗಿ ಜೀವನ ಕಟ್ಟಿಕೊಳ್ಳುತ್ತಾರೆ ಅವರು ನೆಮ್ಮದಿ ಆಗಿರುತ್ತಾರೆ. ಅವರ ಕುರಿತು ಆಕ್ಷೇಪಣೆ ಇಲ್ಲ. ಆದರೆ, ಮತ್ತೊಬ್ಬರ ಬದುಕಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ನಡೆಸುವವರು ಅತ್ಯಂತ ಅಪಾಯಕಾರಿಗಳು. ಇವರ ಕುರಿತು ಸದಾ ಎಚ್ಚರಿಕೆಯಿಂದರಬೇಕೆಂದು ಬಸವಾದಿ ಶರಣರು ಸೇರಿ ಎಲ್ಲ ಮಹಾತ್ಮರು ಎಚ್ಚರಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ರಸ್ತೆ ಸುರಕ್ಷತಾ ಸಮಿತಿ ಸಭೆ | ಅಪಘಾತಗಳ ತಡೆಗೆ ವೈಜ್ಞಾನಿಕ ಕ್ರಮ ಅಗತ್ಯ | ಜಿಲ್ಲಾಧಿಕಾರಿ ವೆಂಕಟೇಶ್
ಮತ್ತೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವವರು ಸದಾ ಜನ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಭಾನುಮೂರ್ತಿ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜೊತೆಗೆ ಮಾದಿಗ ಹಾಗೂ ಇತರ ಎಲ್ಲ ಸಮುದಾಯಗಳ ಪ್ರಗತಿಗೆ ಶ್ರಮಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಈಗಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ, ಜನಪರ ಚಿಂತನೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನ ನಶ್ವರ ಎಂದು ಹೇಳಿದರು.
ಭಾನುಮೂರ್ತಿ ತೆರಿಗೆ ಇಲಾಖೆಯಲ್ಲಿ ಅಧಿಕಾರಿ ಆಗಿದ್ದರೂ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಅನೇಕ ಜನಪರ ಚಳವಳಿಗೆ ಬೆನ್ನೆಲುಬು ಆಗಿದ್ದರು. ಜನಪರ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯದ ಜೊತೆಗೆ ನೈತಿಕವಾಗಿ ಬೆಂಬಲವಾಗಿ ನಿಲ್ಲುವ ಗುಣ ಮಾದರಿ ಆಗಿತ್ತು ಎಂದು ಸ್ಮರಿಸಿದರು.
ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ತೇಗನೂರು ಮಾತನಾಡಿ, ನಮ್ಮ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಭಾನುಮೂರ್ತಿ ಅವರ ಸೇವಾಮನೋಭಾವ ಮಾದರಿ. ಅವರು ಸದಾ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು ಎಂದರು.
ಇದನ್ನೂ ಓದಿ: ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಅನೇಕ ಸಂಘಟನೆಗಳ ಚಳವಳಿಗೆ ಆರ್ಥಿಕ ಸಹಾಯದ ಜೊತೆಗೆ ಹೋರಾಟವನ್ನು ಹೇಗೆ ಮುನ್ನಡಿಸಿಕೊಂಡು ಹೋಗಿ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶೋಕ್ ಕುಮಾರ್ ಸೇರಿ ವಿವಿಧ ಕ್ಷೇತ್ರದ ಮುಖಂಡರು, ಹೋರಾಟಗಾರರು ಪಾಲ್ಗೊಂಡಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

