
CHITRADURGA NEWS | 14 JULY 2026
ಚಳ್ಳಕೆರೆ: ಮುದ್ರಣ ಮಾಧ್ಯಮದ ಬಗ್ಗೆ ಎಲ್ಲರೂ ಅಭಿಮಾನವಿಟ್ಟುಕೊಳ್ಳಬೇಕು. ಅತ್ಯಂತ ಜವಾಬ್ದಾರಿಯುತ ರಂಗ ಎಂದರೆ ಅದು ಪತ್ರಿಕಾ ರಂಗ. ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಆಷಾಢ ಮಾಸದ ಅಮಾವಾಸ್ಯೆ ಪ್ರಯುಕ್ತ ಕೋಟೆಯ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಅವರು ಇಲ್ಲಿನ ತಾಲೂಕು ಪಂಚಾಯತಿ ನೂತನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ – ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಮತ್ತು ಚಳ್ಳಕೆರೆ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ.
ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಕಾರ್ಯವೈಖರಿಗಳು ವಿಫಲವಾಗದಂತೆ ಕಾಯುವ ಮತ್ತು ಎಚ್ಚರಿಸುವ ರಂಗ ಪತ್ರಿಕಾ ರಂಗವಾಗಿರುವುದರಿಂದ ಪತ್ರಕರ್ತರು ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಣಕ್ಷಣಕ್ಕೂ ಸುದ್ದಿ ನೋಡುತ್ತಿರುವ ಈ ಕಾಲಘಟ್ಟದಲ್ಲಿಯೂ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸದಾ ನೆನಪಿನಲ್ಲಿ ಉಳಿಯುವಂತೆ ಮುನ್ನಡೆಯುತ್ತಿರುವುದಕ್ಕೆ ಟಿ. ರಘುಮೂರ್ತಿ ಮುದ್ರಣ ಮಾಧ್ಯಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚೋಳಗುಡ್ಡದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭೂಮಿಪೂಜೆ
ಪತ್ರಕರ್ತರು ಯಾವಾಗಲು ಸದುದ್ದೇಶದಿಂದ ಕೂಡಿದ ವರದಿಗಳನ್ನು ಮಾಡಿದಾಗ ಎಂದೆಂದಿಗೂ ಗೌರವ ಸಿಗುತ್ತದೆ. ದುರುದ್ದೇಶಗಳಿಂದ ಕೂಡಿದ ವರದಿಗಳಿಗೆ ತಾತ್ಸಾರ ಹೆಚ್ಚಾಗುತ್ತದೆ. ಸಾರ್ವಜನಿಕರ ಕುಂದು ಕೊರತೆಗಳಿಗೆ ಪತ್ರಿಕೆಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರ ಸಮಸ್ಯೆಗಳ ನಿವಾರಣೆಗೆ ತಾವು ಒತ್ತು ಕೊಡುವುದಲ್ಲದೇ, ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಕ್ಕೆ, ಜನಹಿತಕ್ಕೆ ದುಡಿಯುವ ಪತ್ರಕರ್ತರು ನಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಸವಲತ್ತುಗಳು ನಿಜವಾದ ಪತ್ರಕರ್ತರಿಗೆ ಲಭ್ಯವಾಗುತ್ತಿಲ್ಲ.
ನಿಜವಾದ ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿಯೂ ಕೂಡಾ ಸಂಬಂಧಪಟ್ಟ ಇಲಾಖೆ ಇಲ್ಲಸಲ್ಲದ ಮಾನದಂಡಗಳನ್ನು ವಿಧಿಸುತ್ತಿರುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಇಲಾಖೆಗೆ ನ್ಯಾಯಾಲಯದ ಮೂಲಕವಾದರೂ ಸಂಘ ಉತ್ತರ ಕೊಡಲು ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 14 | ಹತ್ತಿ ರೇಟ್ ಎಷ್ಟಿದೆ?
ಪತ್ರಕರ್ತರಿಗೆ ಅವಮಾನ ಮಾಡಿದವರೇ ನಮ್ಮ ಮಾರ್ಗದರ್ಶಕರು. ಮೂರೂ ಅಂಗಗಳನ್ನು ತಿದ್ದುವ ಶಕ್ತಿ ಪತ್ರಿಕಾ ರಂಗಕ್ಕೆ ಮಾತ್ರ ಇದೆ. ಪ್ರಾಮಾಣಿಕ ಪತ್ರಕರ್ತರಿಗೆ ಪ್ರಾಮಾಣಿಕವಾಗಿ ಸಿಗಬೇಕಾದ ಸೌಲಭ್ಯಗಳಿಗಾಗಿ ನಮ್ಮ ಸಂಘದ ಹೋರಾಟ ನಿರಂತರವಾಗಿರಲಿದೆ ಎಂದು ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದರು.
ಚಿತ್ರದುರ್ಗದ ಸುದ್ದಿ ಗಿಡುಗ ಪತ್ರಿಕೆ ಸಂಪಾದಕ ಹಾಗೂ ಕರ್ನಾಟಕ ರಾಜ್ಯ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ. ಮಂಜುನಾಥ ಅವರು, ಮಂಕುತಿಮ್ಮನ ಕಗ್ಗ ಖ್ಯಾತಿಯ ಡಿ.ವಿ. ಗುಂಡಪ್ಪ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಪತ್ರಿಕಾ ದಿನಾಚರಣೆ ಆಚರಿಸುತ್ತಿರುವ ಮಹತ್ವ, ಸಂವಿಧಾನ ತಜ್ಞ, ವಿಶ್ವಜ್ಞಾನಿ, ಡಾ. ಅಂಬೇಡ್ಕರ್ ಅವರು ದನಿಯಿಲ್ಲದವರಿಗೆ, ಸರ್ವರ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಆರಂಭಿಸಿದ ಐದೂ ಪತ್ರಿಕೆಗಳು ಹಾಗೂ ಡಿ.ವಿ. ಗುಂಡಪ್ಪ ಅವರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಹುಬ್ಬಳ್ಳಿಯ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಸಂಪಾದಕ ಎಸ್.ಎಸ್. ಪಾಟೀಲ, ಉಪನ್ಯಾಸಕ ನಾಗರಾಜ್ ಬೆಳಗಟ್ಟ ಅವರಿಗೆ ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್ ಗೆ ಬೋರಪ್ಪಾಜಿ ಶಿಕ್ಷಣ ಸೇವಾ ಪ್ರಶಸ್ತಿ, ಗಿರಿಮಲ್ಲಿಗೆ ವಾರಪತ್ರಿಕೆ ಸಂಪಾದಕ ಸಿ.ರಾಜಗಿರಿಗೆ ಖ್ಯಾತ ಪತ್ರಕರ್ತರಾಗಿದ್ದ ರವಿ ಬೆಳಗೆರೆ ರಾಜ್ಯ ಪ್ರಶಸ್ತಿ, ಸೂರನಹಳ್ಳಿ ಕೆ. ಜಗದೀಶ್ ಅವರಿಗೆ ಕರ್ನಾಟಕ ಸಹಕಾರ ರತ್ನ ರಾಜ್ಯ ಪ್ರಶಸ್ತಿ, ಜಿ.ಜೆ. ಸತ್ಯನಾರಾಯಣ ಅವರಿಗೆ ಸರ್ವೋತ್ತಮ ಸೇವಾ ರಾಜ್ಯ ಪ್ರಶಸ್ತಿ, ನಾವೆಲ್ಲಾ ವಾರಪತ್ರಿಕೆ ಸಂಪಾದಕ ಎನ್. ಮಹೇಶ್ ಅವರಿಗೆ ಲಂಕೇಶ್ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪತ್ರಿಕಾ ದಿನಾಚರಣೆ ಅಂಗವಾಗಿ ಐವತ್ತಕ್ಕೂ ಹೆಚ್ಚು ಕಡುಬಡವರಿಗೆ ಉತ್ತಮ ಹೊದಿಕೆಗಳನ್ನು ವಿತರಣೆ ಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ನಿರ್ಮಲಾ, ಶಿಲ್ಪಾ, ಹರೀಶ್, ಕೃಷ್ಣಮೂರ್ತಿ, ಸಂಗನಗೌಡ ಹೊನ್ನಾವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಎಚ್.ಹನುಮಂತಪ್ಪ ಅಂತಿಮ ವಿದಾಯ | ಸಿಎಂ ಡಿಕೆಶಿ ಗೌರವ ನಮನ
ಕಾರ್ಯಕ್ರಮದಲ್ಲಿ ಭೂ ಸರ್ವೇ ಇಲಾಖೆಯ ಎಸ್. ಬೋರಯ್ಯ, ಉದ್ಯಮಿ ವೀರಭದ್ರಪ್ಪ, ಮರ್ಚೆಂಟ್ಸ್ ಬ್ಯಾಂಕಿನ ನಿವೃತ್ತ ನೌಕರ ಶ್ರೀನಿವಾಸ್ ಕೋರಿ ಸೇರಿದಂತೆ ಇತರರಿದ್ದರು.
ಕಾರ್ಯಕ್ರಮ ಉದ್ಘಾಟಿನೆಗೂ ಮುನ್ನ ಗಾಯಕಿ ಎಸ್. ಜಾನಕಿ ಅವರಿಗೆ ಒಂದು ನಿಮಿಷ ಶ್ರದ್ಧಾಂಜಲಿ ಅರ್ಪಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

