CHITRADURGA NEWS | 09 AUGUST 2026
ಹೊಳಲ್ಕೆರೆ: ಕಳ್ಳಬೆಕ್ಕಿನಂತೆ ಓಡಾಡುವ ರಾಜಕಾರಣಿಯಲ್ಲ. ಸಾರ್ವಜನಿಕರ ಮಧ್ಯೆಯೇ ಇದ್ದುಕೊಂಡು ಧೈರ್ಯವಾಗಿ ಎದೆತಟ್ಟಿಕೊಂಡು ಚುನಾವಣೆಯಲ್ಲಿ ಮತ ಕೇಳುವ ಯೋಗ್ಯತೆಯನ್ನು ಅಭಿವೃದ್ಧಿ ಕೆಲಸಗಳ ಮೂಲಕ ಪಡೆದುಕೊಂಡಿದ್ದೇನೆ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.
ಇದನ್ನೂ ಓದಿ: ಮಳೆ ಕೊರತೆ | ಬೆಳೆ ಹಾನಿ ಪ್ರದೇಶಗಳಿಗೆ ಸಚಿವ ಟಿ.ರಘುಮೂರ್ತಿ ಭೇಟಿ | ಬೆಳೆ ವಿಮೆಗೆ ಸೂಚನೆ
ತಾಲ್ಲೂಕಿನ ಇಸಾಮುದ್ರ ಹೊಸಹಟ್ಟಿಯಿಂದ ಅಜ್ಜಪ್ಪನಹಳ್ಳಿವರೆಗೆ ಸುಮಾರು 1.5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಾನು ಶಾಸಕನಾಗಿ 32 ವರ್ಷಗಳಾಗಿವೆ. ಪ್ರಥಮ ಬಾರಿಗೆ ಭರಮಸಾಗರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಹಳ್ಳಿಗಳಿಗೆ ತೆರಳಿ ಮತ ಕೇಳಲು ಸರಿಯಾದ ರಸ್ತೆಗಳೇ ಇರಲಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲ ಹಳ್ಳಿಗಳಿಗೂ ರಸ್ತೆ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದೆ. ಇದರಿಂದ ಜನರು ನನಗೆ ‘ರಸ್ತೆ ರಾಜ’ ಎಂಬ ಬಿರುದು ನೀಡಿ, ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ ಎರಡನೇ ಬಾರಿಯೂ ಚುನಾವಣೆಯಲ್ಲಿ ಗೆಲ್ಲಿಸಿದರು ಎಂದು ಸ್ಮರಿಸಿದರು.
ಕ್ಷೇತ್ರದ 493 ಹಳ್ಳಿಗಳಲ್ಲಿ ಯಾರು ಏನು ಕೇಳುತ್ತಾರೆ ಎಂಬುದಕ್ಕಿಂತಲೂ, ಯಾವ ಪ್ರದೇಶದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದರೆ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿದುಕೊಂಡು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಸಮಗ್ರ ಕೃಷಿ ಪದ್ಧತಿಯಿಂದ ವರ್ಷವಿಡೀ ನಿರಂತರ ಆದಾಯ
ಚುನಾವಣೆ ಸಂದರ್ಭದಲ್ಲಿ ಹೊರಗಿನಿಂದ ಬಂದು ಜನರ ತಲೆ ಕೆಡಿಸುವವರ ಮಾತುಗಳಿಗೆ ಮರುಳಾಗಬಾರದು. ಮತ ಹಾಕುವುದು ಒಂದು ನಿಮಿಷದ ಕೆಲಸವಾಗಿದ್ದರೂ, ಯಾರಿಂದ ಜನರ ಶ್ರೇಯಸ್ಸಾಗುತ್ತದೆ, ಯಾರು ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ ಎಂಬುದನ್ನು ಆಲೋಚಿಸಿ ಮತದಾನ ಮಾಡಬೇಕು. ಗ್ರಾಮಗಳಲ್ಲಿ ಗದ್ದಲ-ಗಲಾಟೆಗಳಾದಾಗ ಜನರನ್ನು ಪೊಲೀಸ್ ಠಾಣೆ ಮೆಟ್ಟಿಲೇರಲು ಬಿಡದೆ ರಾಜಿ-ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವವರ ಬಗ್ಗೆ ಜನರು ಚಿಂತಿಸಬೇಕು ಎಂದರು.
ಮತ ಹಾಕಿದವರು ಹಾಗೂ ಮತ ಹಾಕದವರು ಎಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಶಾಸಕ ಚಂದ್ರಪ್ಪ ತಿಳಿಸಿದರು.
ಹಿರಿಯೂರಿನ 137 ಕಿ.ಮೀ. ದೂರದಲ್ಲಿರುವ ವಾಣಿವಿಲಾಸಸಾಗರದಿಂದ ನೀರು ತಂದು ಇನ್ನು ಮೂರ್ನಾಲ್ಕು ತಿಂಗಳೊಳಗೆ ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಪ್ರತಿ ಎರಡನೇ, ನಾಲ್ಕನೇ ಮಂಗಳವಾರ ಉಚಿತ ಗ್ಯಾಸ್ಟ್ರೋ ಚಿಕಿತ್ಸಾ ಶಿಬಿರ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳನ್ನು ಪ್ರತಿದಿನ ಮನೆಯಿಂದ ಶಾಲೆಗೆ ಕರೆತಂದು ಬಾಳೆಹಣ್ಣು, ಮೊಟ್ಟೆ, ಹಾಲು, ಮಧ್ಯಾಹ್ನದ ಬಿಸಿಯೂಟ ಹಾಗೂ ಸಂಜೆ ಪೌಷ್ಟಿಕಾಂಶಯುಕ್ತ ಕಾಳುಗಳನ್ನು ನೀಡಲಾಗುತ್ತಿದೆ. ಕಂಪ್ಯೂಟರ್ ಸೌಲಭ್ಯದೊಂದಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುವುದರ ಜತೆಗೆ, ಸಂಜೆ ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ. ಬಸಣ್ಣ, ಶೈಲೇಶ್, ಕೋಗುಂಡೆ ಮಂಜಣ್ಣ, ಕಲ್ಲೇಶ್, ಪ್ರಾಣೇಶಪ್ಪ, ವೆಂಕಟೇಶ್ನಾಯ್ಕ, ಸಿದ್ದಬಸಣ್ಣ, ರಾಮನಾಯ್ಕ, ಪಾಪನಾಯ್ಕ, ಬುಡೇನ್ಸಾಬ್, ಸಿದ್ದಪ್ಪ, ಅರುಣ್ಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ, ಶಿವಕುಮಾರ್, ರುದ್ರೇಶ್, ಅಂಜಿನಪ್ಪ, ಶಿವಣ್ಣ, ತಿಪ್ಪಣ್ಣ, ಮಂಜುನಾಥ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

