CHITRADURGA NEWS | 11 SEPTEMBER 2206
ಹೊಸದುರ್ಗ: ಕಾಡುಗೊಲ್ಲರು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ತಮ್ಮ ವಿಶಿಷ್ಟ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಗೌರವದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ, ಮೀಸಲಾತಿ ಸೇರಿದಂತೆ ಅವರಿಗೆ ದೊರೆಯಬೇಕಾದ ಸ್ಥಾನಮಾನಗಳು ದೊರೆಯದಿರುವುದು ಸಮುದಾಯದ ಹಿನ್ನಡೆಗೆ ಕಾರಣವಾಗಿದೆ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಪುರಪ್ರವೇಶ | ಭರ್ಜರಿ ಸ್ವಾಗತಕೋರಿದ ಕೋಟೆನಾಡು
ನಗರದಲ್ಲಿ ನಡೆದ ‘ಸುಜ್ಞಾನ ಸಂಗಮ’ ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರನ್ನು ಗೌರವಿಸಿ ಮಾತನಾಡಿದ ಅವರು, ಕಾಡುಗೊಲ್ಲರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಅವರ ಎಲ್ಲ ಹೋರಾಟಗಳಲ್ಲಿಯೂ ಶ್ರೀಮಠದ ಸಹಭಾಗಿತ್ವವಿರಲಿದೆ ಎಂದು ಭರವಸೆ ನೀಡಿದರು.
ಶಿಕ್ಷಣದಿಂದ ವಂಚಿತವಾಗಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು. ಕಾಡುಗೊಲ್ಲರ ಸಂಘಟನೆಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಜೊತೆಗೆ ಹಟ್ಟಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಕಾಡುಗೊಲ್ಲರು ಸಾಮಾಜಿಕ ನ್ಯಾಯ ಪಡೆಯಲು ಶಿಕ್ಷಣವೇ ಮೂಲಮಂತ್ರವಾಗಬೇಕು. ಸಂಘಟನೆಯ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು. ಸಮುದಾಯದ ಅಭಿವೃದ್ಧಿ ಹಾಗೂ ಅರಿವಿನ ಆಂದೋಲನಕ್ಕೆ ಶ್ರೀಮಠ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 11 | ಸೂರ್ಯಕಾಂತಿ, ಶೇಂಗಾ ರೇಟ್ ಎಷ್ಟಿದೆ?
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಡಿಡಿಪಿಐ ರಾಮಪ್ಪ ಮಾತನಾಡಿ, ಕಾಡುಗೊಲ್ಲರನ್ನು ಮಠಕ್ಕೆ ಆಹ್ವಾನಿಸಿ ಗೌರವಿಸಿರುವುದು ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಧೈರ್ಯ ತುಂಬಿದಂತಾಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ಸಣ್ಣ ಸಮುದಾಯಗಳನ್ನು ಪ್ರತಿ ತಿಂಗಳು ಮಠಕ್ಕೆ ಕರೆಸಿ ಸುಜ್ಞಾನ ಬಿತ್ತುವ ಹಾಗೂ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು ಎಂದರು.
ಕಾಡುಗೊಲ್ಲರಿಗೆ ತಮ್ಮದೇ ಆದ ಸುಸಜ್ಜಿತ ಮಠ ಹಾಗೂ ಶಿಕ್ಷಣ ಸಂಸ್ಥೆಯ ಅಗತ್ಯವಿದೆ. ಮುಖ್ಯವಾಹಿನಿಗೆ ಬರಲು ಎಲ್ಲ ಸಮಾಜಗಳ ಸಹಕಾರ ಅಗತ್ಯವಿದ್ದು, ಕಾಡುಗೊಲ್ಲರನ್ನು ಸಮಾಜದ ಒಂದು ಭಾಗವೆಂದು ಪರಿಗಣಿಸುವ ಮನೋಭಾವ ಬೆಳೆಸಬೇಕು. ಆ ಕೆಲಸವನ್ನು ಶಾಂತವೀರ ಶ್ರೀಗಳು ಆರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧನಂಜಯ್ ಮೇಂಗಸಂದ್ರ ಉಪನ್ಯಾಸ ನೀಡಿ, ಸರ್ವರನ್ನು ಸಮಾನವಾಗಿ ಕಾಣುವುದು, ಅಜ್ಞಾನಿಗಳಲ್ಲಿ ಸುಜ್ಞಾನ ಬಿತ್ತುವುದು ಹಾಗೂ ನಿರ್ಲಕ್ಷ್ಯಕ್ಕೊಳಗಾದವರನ್ನು ಮಮತೆಯಿಂದ ನೋಡುವುದು ಬಸವಾದಿ ಶರಣರ ಅನುಭವಮಂಟಪದ ಆಶಯವಾಗಿದೆ. ಅದೇ ಪಥದಲ್ಲಿ ಶಾಂತವೀರ ಶ್ರೀಗಳು ಕುಂಚಿಟಿಗ ಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಬೆಳೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸೆ.15ರವರೆಗೆ ಚಿತ್ರದುರ್ಗದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
ಚಿಕ್ಕ ಸಮುದಾಯಗಳಲ್ಲಿ ಸಂಘಟನೆ, ಸಂಸ್ಕಾರ ಹಾಗೂ ಸ್ವಾಭಿಮಾನದ ಬೀಜ ಬಿತ್ತುವ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಕಾಡುಗೊಲ್ಲರ ಪರವಾಗಿ ಧಾರ್ಮಿಕ ನೇತಾರರಾಗಿ ನಿಂತಿರುವುದು ಸಮುದಾಯಕ್ಕೆ ಹೊಸ ಆತ್ಮವಿಶ್ವಾಸ ನೀಡಿದೆ ಎಂದು ಹೇಳಿದರು.
ಜಿಲ್ಲಾ ಗೊಲ್ಲರ ಸಂಘದ ಉಪಾಧ್ಯಕ್ಷ ರಾಮಲಿಂಗ ಯಾದವ್ ಮಾತನಾಡಿ, ಗೊಲ್ಲರಹಟ್ಟಿಗಳಲ್ಲಿ ಶಿಕ್ಷಣ ಹಾಗೂ ಸುಜ್ಞಾನದ ಅರಿವು ಮೂಡಿಸುವ ಕೆಲಸ ನಡೆಯಬೇಕು. ಕುಂಚಿಟಿಗರು ಮತ್ತು ಗೊಲ್ಲರು ಬುಡಕಟ್ಟು ಸಂಪ್ರದಾಯಗಳನ್ನು ಪಾಲಿಸಿಕೊಂಡು ಜೊತೆಯಾಗಿ ಬೆಳೆದು ಬಂದ ಸಮುದಾಯಗಳಾಗಿವೆ ಎಂದರು.
ಯಾವುದೇ ಮಠಗಳು ಕಾಡುಗೊಲ್ಲರನ್ನು ಈ ರೀತಿಯಾಗಿ ಆಹ್ವಾನಿಸಿ ಗೌರವಿಸದ ಸಂದರ್ಭದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠವು ಅವರನ್ನು ಕರೆಸಿ ಗೌರವಿಸಿರುವುದು ಅಭಿನಂದನಾರ್ಹ. ಅಂದು ಜುಂಜಪ್ಪನಿಗೆ ನೆರವಾದ ಕುಂಚಿಟಿಗರು ಇಂದು ಕಾಡುಗೊಲ್ಲರ ಅಭಿವೃದ್ಧಿಗೂ ಬೆಂಬಲ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಇದನ್ನೂ ಓದಿ: ಹೊಸದುರ್ಗ–ಹಿರಿಯೂರು ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮಾನುಸಾರ
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ, ಸುಜ್ಞಾನ ಸಂಗಮವು ಜ್ಞಾನದ ಸಂಗಮವಾಗಿದ್ದು, ಸಮಾಜಗಳ ನಡುವೆ ಸೌಹಾರ್ದತೆ ಮತ್ತು ಭ್ರಾತೃತ್ವ ಬೆಳೆಸುವ ವೇದಿಕೆಯಾಗಿದೆ. ಸಣ್ಣ ಸಮುದಾಯಗಳ ಕುಂದುಕೊರತೆಗಳ ಕುರಿತು ಚರ್ಚಿಸಿ, ಅವರಲ್ಲಿ ಹೊಸ ಭರವಸೆ ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯೂ ಶಾಂತವೀರ ಶ್ರೀಗಳ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಮಾತನಾಡಿ, ಕುಂಚಿಟಿಗರು ಮತ್ತು ಗೊಲ್ಲರು ದೆಹಲಿಯಿಂದ ಜೊತೆಯಾಗಿ ವಲಸೆ ಬಂದ ಸೋದರ ಸಮುದಾಯಗಳಾಗಿದ್ದು, ಎರಡು ಸಮುದಾಯಗಳ ನಡುವೆ ಅನ್ಯೋನ್ಯ ಬಾಂಧವ್ಯವಿದೆ ಎಂದರು.
ಸುಜ್ಞಾನ ಸಂಗಮದಲ್ಲಿ ಕಾಡುಗೊಲ್ಲರನ್ನು ಗೌರವಿಸಿರುವುದು ಸಮಾಜಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಶಾಂತವೀರ ಶ್ರೀಗಳು ಸರ್ವರನ್ನು ತನ್ನವರೆಂದು ಭಾವಿಸಿ ಕಾರ್ಯನಿರ್ವಹಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆನ್ನು ನೋವು ಇದ್ದರೆ ಯಾವ ಎಣ್ಣೆ ಹಚ್ಚಬೇಕು? ತಿಳಿಯಿರಿ
ಸಮಾರಂಭದಲ್ಲಿ ಕಾಡುಗೊಲ್ಲ ಸಮಾಜ ಹೊಸದುರ್ಗದ ಪ್ರಧಾನ ಉಪಾಧ್ಯಕ್ಷ ಎಮ್ಮ ಮೂರ್ತಿ, ಪ್ರಧಾನ ಕಾರ್ಯದರ್ಶಿ ಚಿತ್ತಪ್ಪ, ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಯಶವಂತ ಗೌಡ, ಯುವ ಘಟಕದ ಅಧ್ಯಕ್ಷ ಅಂಜನ್ ಕುಮಾರ್, ನಿವೃತ್ತ ಶಿಕ್ಷಕ ಪ್ರಕಾಶ್, ಗೊಲ್ಲರಟ್ಟಿ ನಿವೃತ್ತ ಶಿಕ್ಷಕ ಗೋಪಾಲಪ್ಪ ಹೊನ್ನೇಕೆರೆ, ಬಡ್ತಿ ಮುಖ್ಯ ಶಿಕ್ಷಕ ಗೋಪಾಲಪ್ಪ ಅಗಸರಹಳ್ಳಿ ಸೇರಿದಂತೆ ತಾಲೂಕಿನ ಕಾಡುಗೊಲ್ಲ ಸಮಾಜದ ಪದಾಧಿಕಾರಿಗಳು, ಮುಖಂಡರು ಹಾಗೂ ವಿವಿಧ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಕಾಡುಗೊಲ್ಲರ ಸಂಘದ ವತಿಯಿಂದ ಶ್ರೀ ಶಾಂತವೀರ ಮಹಾಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

