CHITRADURGA NEWS | 03 October 2026
ಹಿರಿಯೂರು: ರೈತರ ಕಣ್ಣೀರು ಒರೆಸುವ ಬದಲು ರಾಜ್ಯ ಸರ್ಕಾರ ರೈತರನ್ನೇ ಬೀದಿಗೆ ತಳ್ಳಿದೆ. ರೈತರ ಕಣ್ಣೀರ ಶಾಪ ಸರ್ಕಾರಕ್ಕೆ ತಟ್ಟಲಿದೆ. ರೈತರನ್ನು ಎದುರು ಹಾಕಿಕೊಂಡ ಯಾವ ಸರ್ಕಾರವೂ ಉಳಿದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ನಾಳೆ ಚಿತ್ರದುರ್ಗಕ್ಕೆ ಕೇಂದ್ರ ಬರ ಅಧ್ಯಯನ ತಂಡ | ಬೆಳೆ ಹಾನಿ ಪರಿಶೀಲನೆ
ಪಟ್ಟಣದಲ್ಲಿ ಶನಿವಾರ ನಡೆದ ರೈತ ಸ್ವಾಭಿಮಾನ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಆದರೆ ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ವಾಣಿ ವಿಲಾಸ ಸಾಗರಕ್ಕೆ 23 ಟಿಎಂಸಿ ನೀರು ನೀಡಿ
ವಾಣಿ ವಿಲಾಸ ಜಲಾಶಯಕ್ಕೆ 23 ಟಿಎಂಸಿ ನೀರು ಹರಿಸಿ, ಹಿರಿಯೂರು ತಾಲ್ಲೂಕಿನ 57 ಕೆರೆಗಳನ್ನು ಶಾಶ್ವತವಾಗಿ ತುಂಬಿಸುವ ಕೆಲಸವಾಗಬೇಕು. ಭದ್ರಾ ಮೇಲ್ದಂಡೆ ಯೋಜನೆಯಿಂದ ರೈತರ ಹೊಲಗಳಿಗೆ ಹಾಗೂ ಕೆರೆಗಳಿಗೆ ನೀರು ತಲುಪಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ ಅಡಿಪಾಯ ಹಾಕಲಾಗಿತ್ತು. ವಾಣಿ ವಿಲಾಸ ಜಲಾಶಯದಲ್ಲಿ ನೀರು ಸಂಗ್ರಹಿಸಿ ಮಧ್ಯ ಕರ್ನಾಟಕದ ಬರಡು ಭೂಮಿಯನ್ನು ಹಸಿರಾಗಿಸುವ ಕನಸಿತ್ತು. ಆದರೆ ಗೋನೂರುವರೆಗೆ ಟ್ರಯಲ್ ರನ್ ನಡೆಸಿರುವುದಾಗಿ ಹೇಳಿಕೊಳ್ಳಲಾಗುತ್ತಿದೆ. ಇದು ಚುನಾವಣಾ ಗಿಮಿಕ್ ಆಗಬಾರದು. ಕೊನೆಯ ಕೆರೆಗೂ ನೀರು ತಲುಪಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೂದಲಿಗೆ ಅರಿಶಿನ ಹಚ್ಚಿದರೆ ಏನಾಗುತ್ತದೆ ಗೊತ್ತಾ?
ಎಕರೆಗೆ ₹2,500 ಬರ ಪರಿಹಾರ ಸಾಕೇ?
ಸರ್ಕಾರ ಎಕರೆಗೆ ₹2,500 ಬರ ಪರಿಹಾರ ನೀಡುತ್ತಿದೆ. ಈ ಮೊತ್ತದಿಂದ ರೈತ ತನ್ನ ಜೀವನ ನಿರ್ವಹಣೆ ಮಾಡುವುದು ಸಾಧ್ಯವೇ? ರೈತ ಭಿಕ್ಷುಕನಲ್ಲ, ಆತನಿಗೆ ಸ್ವಾಭಿಮಾನವಿದೆ. ರೈತರ ಸ್ವಾಭಿಮಾನವನ್ನು ಕೆಣಕಬಾರದು ಎಂದು ಹೇಳಿದರು.
ಈ ಉಪಚುನಾವಣೆ ಅನಿರೀಕ್ಷಿತವಾಗಿ ಬಂದಿದ್ದು, ಪ್ರತಿ ತಾಲ್ಲೂಕಿಗೆ ಒಬ್ಬೊಬ್ಬ ಸಚಿವರನ್ನು ನೇಮಿಸಲಾಗಿದೆ. ಬಣ್ಣ ಬಣ್ಣದ ಮಾತುಗಳನ್ನು ನಂಬದೆ ಸರ್ಕಾರದ ಕಾರ್ಯವೈಖರಿಯನ್ನು ಜನರು ಪ್ರಶ್ನಿಸಬೇಕು. ಈ ಉಪಚುನಾವಣೆ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಕೆ.ಆರ್. ಹಳ್ಳಿಯ ರೈತ ರಾಜಣ್ಣ ಅವರ ತೆಂಗಿನ ತೋಟಕ್ಕೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು. ಬಳಿಕ ಪಿಟ್ಲಾಲಿ ಗ್ರಾಮಕ್ಕೆ ಭೇಟಿ ನೀಡಿ, ಗಾಂಧಿ ವೃತ್ತದಿಂದ ನೆಹರು ಮಾರುಕಟ್ಟೆ ಮಾರ್ಗವಾಗಿ ತಾಲ್ಲೂಕು ಕಚೇರಿವರೆಗೆ ರೈತರೊಂದಿಗೆ ಪಾದಯಾತ್ರೆ ನಡೆಸಿದರು.
ಇದನ್ನೂ ಓದಿ: ಎಸ್ಸಿ–ಎಸ್ಟಿ ರೋಗಿಗಳಿಗೆ ಸರ್ಕಾರದ ವಿಶೇಷ ಆರೋಗ್ಯ ಸೌಲಭ್ಯ | ದಾಖಲೆ ಸಲ್ಲಿಸಲು ಮನವಿ
ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ರವೀಂದ್ರಪ್ಪ, ಮಂಜಣ್ಣ, ಯಶೋಧರ್, ಶಿವಣ್ಣ ಚಿಲ್ಲಹಳ್ಳಿ, ಶಂಕರ್ ಮೂರ್ತಿ, ಅಭಿನಂದನ್, ಜಯರಾಮಯ್ಯ, ಶಿವಪ್ರಸಾದ್, ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ರೈತ ಘಟಕದ ಅಧ್ಯಕ್ಷ ಕಸವನಹಳ್ಳಿ ರಮೇಶ್, ರೈತ ಮುಖಂಡರಾದ ರಂಗನಾಥ್, ಶಿವಕುಮಾರ್, ತೂಪಲ್ಲಿ ಚೌಡರೆಡ್ಡಿ ಸೇರಿದಂತೆ ನೂರಾರು ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

