CHITRADURGA NEWS | 02 OCTOBER 2026
ಚಿತ್ರದುರ್ಗ: 2030ರ ವೇಳೆಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಮೊದಲು ಚಿತ್ರದುರ್ಗ ಜಿಲ್ಲೆಯನ್ನು ಕ್ಷಯ ಮುಕ್ತಗೊಳಿಸಲು ಎಲ್ಲರೂ ಒಗ್ಗೂಡಬೇಕೆಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ವಿ. ತುಳಸಿರಂಗನಾಥ್ ಹೇಳಿದರು.
ಇದನ್ನೂ ಓದಿ: ಗಾಂಧೀಜಿ–ಶಾಸ್ತ್ರಿಜಿ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ
ಇಲ್ಲಿನ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಚೆಗೆ ಎಸ್.ವಿ.ವೈ.ಎಮ್. ಸಂಸ್ಥೆ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ತಾಲೂಕಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ‘ಮಕ್ಕಳಲ್ಲಿ ಕ್ಷಯ ರೋಗ ಪತ್ತೆ ಹಚ್ಚುವಿಕೆ’ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗದ ಪತ್ತೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ರೋಗ ದೃಢಪಟ್ಟಲ್ಲಿ ಅಪೂರ್ಣ ಚಿಕಿತ್ಸೆಯಾಗದಂತೆ ಆರೋಗ್ಯ ಸಿಬ್ಬಂದಿ ನಿಗಾವಹಿಸಬೇಕು. ಸೂಕ್ತ ಚಿಕಿತ್ಸೆಯ ಜೊತೆಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿ, ಯಾವುದೇ ಸಾವು-ನೋವುಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ತರಬೇತಿ ನೀಡಿದ ಮಕ್ಕಳ ತಜ್ಞ ಡಾ. ಸಿ.ಜೆ. ಶ್ರೀರಾಮ್ ಮಾತನಾಡಿ, ಮಕ್ಕಳಲ್ಲಿ ಕ್ಷಯ ರೋಗ ಕಂಡುಹಿಡಿಯುವುದು ಸವಾಲಿನ ಕೆಲಸ. ನಾಲ್ಕು ವರ್ಷದೊಳಗಿನ ಮಕ್ಕಳು ತಮ್ಮ ಅನಾರೋಗ್ಯವನ್ನು ಹೇಳಿಕೊಳ್ಳಲಾರರು. ಹಸಿವಾಗದಿರುವುದು, ಆಹಾರದಲ್ಲಿ ಆಸಕ್ತಿ ಕೊರತೆ, ರಾತ್ರಿ ವೇಳೆ ಬೆವರುವುದು, ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಹಾಗೂ ಆಟದಲ್ಲಿ ಆಸಕ್ತಿ ಇಲ್ಲದಿರುವುದು ಮಕ್ಕಳಲ್ಲಿ ಕಂಡುಬರುವ ಪ್ರಮುಖ ಲಕ್ಷಣಗಳು ಎಂದರು.
ಇದನ್ನೂ ಓದಿ: ಜೀವನದಲ್ಲಿ ಸರಳತೆ, ಆತ್ಮಸಂಯಮ ಬೆಳೆಸಿಕೊಳ್ಳಿ | ಡಿಸಿ
ಪ್ರಾಥಮಿಕ ಮಟ್ಟದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರು ತಕ್ಷಣವೇ ಸಮೀಪದ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರ ಬಳಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಕಳುಹಿಸಬೇಕು. ಶೀಘ್ರ ಪತ್ತೆ ಮತ್ತು ತ್ವರಿತ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಎಂದು ಅವರು ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿಯಾದ ಡಾ. ಬಿ.ವಿ. ಗಿರೀಶ್ ಮಾತನಾಡಿ, ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರಕ್ಕಾಗಿ ಚಿಕಿತ್ಸಾ ಅವಧಿಯಲ್ಲಿ ಸರ್ಕಾರದಿಂದ ಪ್ರತಿ ತಿಂಗಳು 1,000 ರೂಪಾಯಿಗಳನ್ನು ನೇರವಾಗಿ ರೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ರೋಗಿಗಳು ಸಂಪೂರ್ಣ ಚಿಕಿತ್ಸೆ ಪಡೆದು, ಇತರರಿಗೆ ರೋಗ ಹರಡದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ವೈದ್ಯಕೀಯ ಸೇವೆಗೆ ಮತ್ತಷ್ಟು ಬಲ | 18 ವೈದ್ಯರ ನೇಮಕ
ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ನಿರೂಪಿಸಿದರು. ಕಾರ್ಯಾಗಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಕ ಕಾಂತಪ್ಪ, ಎನ್‍ಟಿಇಪಿ ಸಿಬ್ಬಂದಿಯವರಾದ ಮಹೇಂದ್ರ, ಮಾರುತಿ, ನಾಗರಾಜ, ಯತೀಶ್, ನಂದನ್, ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

