CHITRADURGA NEWS | 02 OCTOBER 2026
ಚಿತ್ರದುರ್ಗ: ಗಾಂಧೀಜಿಯವರ ಸರಳತೆಯ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸರಳ ಜೀವನಕ್ಕೆ ಬುದ್ದ, ಮಹಾವೀರ ಹಾಗೂ ಗಾಂಧಿಜೀ ‘ಅಪರಿಗ್ರಹ’ ಮಾರ್ಗ ತೋರಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ತಿಳಿಸಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ವೈದ್ಯಕೀಯ ಸೇವೆಗೆ ಮತ್ತಷ್ಟು ಬಲ | 18 ವೈದ್ಯರ ನೇಮಕ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ’ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಿಗ್ರಹ ಎಂದರೆ ನಮ್ಮ ಆಸೆ ಮತ್ತು ಆಶೋತ್ತರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿದೆ. ದೊಡ್ಡ ಮನೆ ಅಥವಾ ದುಬಾರಿ ವಸ್ತುಗಳ ವ್ಯಾಮೋಹಕ್ಕೆ ಬೀಳದೆ ಅಗತ್ಯಕ್ಕೆ ತಕ್ಕಂತೆ ಸರಳ ಜೀವನ ನಡೆಸುವುದು ಅಪರಿಗ್ರಹದ ಭಾಗವಾಗಿದೆ. ಮಹಾತ್ಮ ಗಾಂಧೀಜಿಯವರು ಈ ತತ್ವದ ಉನ್ನತ ಹಂತವನ್ನು ತಲುಪಿದ್ದರು. ಕೇವಲ ಒಂದು ಜೋಡಿ ವಸ್ತ್ರ ಧರಿಸಿ ಇಡೀ ದೇಶಕ್ಕೆ ಮಾರ್ಗದರ್ಶಿಯಾದರು ಎಂದು ಸ್ಮರಿಸಿದರು.
ವೈಯಕ್ತಿಕ ಆಸೆ, ಕೋಪ ಹಾಗೂ ಭಾವನೆಗಳಿಗೆ ನಿಯಂತ್ರಣ ಅತ್ಯಗತ್ಯ. ನಮ್ಮ ಮನಸ್ಸೇ ನಮಗೆ ಕನ್ನಡಿ. ನಾವು ಮಾಡುತ್ತಿರುವುದು ಸರಿಯೋ, ತಪ್ಪೋ ಎಂಬುದು ನಮ್ಮಂತರಂಗಕ್ಕೆ ಸ್ಪಷ್ಟವಾಗಿ ತಿಳಿದಿರುತ್ತದೆ. ಆದ್ದರಿಂದ ಜಂಬ, ದುಂದುವೆಚ್ಚ ಹಾಗೂ ಅನಗತ್ಯ ಕೋಪವನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಾ, ಆತ್ಮಸಂಯಮ ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ನಾಳೆ KSRTC ಬಸ್ ನಿಲ್ದಾಣ APMC ಮಾರುಕಟ್ಟೆಗೆ ಶಿಫ್ಟ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಸತ್ಯಾಗ್ರಹ ಮತ್ತು ಸೇವಾ ಮನೋಭಾವದ ತತ್ವಗಳು ಇಂದಿಗೂ ಸಾರ್ವಕಾಲಿಕವಾಗಿದ್ದು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅವರ ಜೀವನವೇ ದಿಕ್ಸೂಚಿಯಾಗಿವೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಾತು ಪ್ರತಿಯೊಬ್ಬರಿಗೂ ಪ್ರೇರಣೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಪುಸ್ತಕ ಓದುವುದನ್ನು ಕಡಿಮೆ ಮಾಡಿ ಮೊಬೈಲ್, ಟಿವಿಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿಯವರ ತತ್ವಗಳನ್ನು ಅರ್ಥೈಸಲು, 1982ರಲ್ಲಿ ರಿಚರ್ಡ್ ಅಟನ್‍ಬರೋ ನಿರ್ದೇಶನದ ಮತ್ತು ಬೆನ್ ಕಿಂಗ್ಸ್‍ಲಿ ಅಭಿನಯದ ‘ಗಾಂಧಿ’ ಚಲನಚಿತ್ರ ಪ್ರದರ್ಶಿಸಬೇಕು. ದೃಶ್ಯ ಮಾಧ್ಯಮದ ಮೂಲಕ ಮಕ್ಕಳಿಗೆ ಇತಿಹಾಸ ಮತ್ತು ಮೌಲ್ಯಗಳು ಸುಲಭವಾಗಿ ತಲುಪುತ್ತವೆ ಎಂದು ಸಲಹೆ ನೀಡಿದರು.
ಶಾಸ್ತ್ರೀಜಿಯವರು ಅತ್ಯಂತ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದರೂ, ದೇಶದ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಅಧಿಕಾರದ ಮದವಿಲ್ಲದೆ ಅತ್ಯಂತ ಸರಳ ಜೀವನ ನಡೆಸಿದವರು ಎಂದರು. ಸಾರ್ವಜನಿಕ ಸೇವೆಯಲ್ಲಿರುವ ನಾವೆಲ್ಲರೂ ಈ ಇಬ್ಬರೂ ಮಹಾನ್ ನಾಯಕರ ದಿವ್ಯ ಜೀವನದ ಗುಣಗಳನ್ನು ನಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಂಡು, ಜನಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ ಎಂದರು.
ಇದನ್ನೂ ಓದಿ: ಶರಣಸಂಸ್ಕೃತಿ ಉತ್ಸವಕ್ಕೆ ವಿವಿಧ ಸ್ಪರ್ಧೆಗಳ ಆಯೋಜನೆ, ನೋಂದಣಿ ಆರಂಭ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ನೈತಿಕತೆಯನ್ನು ಮರುಕಟ್ಟಲು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಮತ್ತೆ ಮನನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ನಾವು ಶಾಲಾ-ಕಾಲೇಜು ದಿನಗಳಲ್ಲಿ ಗಾಂಧೀಜಿಯವರನ್ನು ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರೆಂದು ಓದಿದ್ದೇವೆ. ಆದರೆ, ಅವರ ತತ್ವ-ಸಿದ್ದಾಂತಗಳನ್ನು ಆಳವಾಗಿ ಗಮನಿಸಿದಾಗ ಅವರು ಶ್ರೇಷ್ಠ ಸಮಾಜ ಸುಧಾರಕ, ರಾಜನೀತಿಜ್ಞ ಹಾಗೂ ನೈತಿಕತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾತ್ಮ ಎಂಬುದು ತಿಳಿಯುತ್ತದೆ. ಇದೇ ರೀತಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸರಳತೆ ಮತ್ತು ಪ್ರಾಮಾಣಿಕತೆ ಪ್ರತಿಯೊಬ್ಬರಿಗೂ ಮಾದರಿ. ದೇಶದ ಪ್ರಧಾನಿಯಾದ ಮೇಲೂ ಅತ್ಯಂತ ಸರಳ ಬದುಕು ನಡೆಸಿದ ಇಂತಹ ಮಹನೀಯರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಾಗತಿಕ ಸಂಕಟಗಳಿಗೆ ಗಾಂಧಿ ತತ್ವಗಳೇ ದಾರಿದೀಪ: ಇಂದಿನ ಜಾಗತಿಕ ಸಂಘರ್ಷ, ಯುದ್ಧದ ಭೀತಿ ಹಾಗೂ ಭಯೋತ್ಪಾದನೆಯಂತಹ ಪ್ರಚಲಿತ ಬಿಕ್ಕಟ್ಟುಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಹಾಗೂ ಶಾಂತಿ ತತ್ವಗಳೇ ಪ್ರಸ್ತುತ ಮತ್ತು ಶಾಶ್ವತ ಪರಿಹಾರವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ | ಕಟ್ಟಡಗಳ ಮೇಲೇರದಂತೆ ಬೆಸ್ಕಾಂ ಎಚ್ಚರಿಕೆ
ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಕುರಿತು ಉಪನ್ಯಾಸ ನೀಡಿದ ಅವರು, ನಾವು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಕೇವಲ ಒಂದು ಆಚರಣೆಯಾಗಿ ನೋಡದೆ, ಅವರ ಬದುಕು, ತತ್ವ, ಸಿದ್ಧಾಂತ ಹಾಗೂ ಸಮಾಜಮುಖಿ ಆಲೋಚನೆಗಳ ಕುರಿತು ಸಂವಾದ ನಡೆಸಬೇಕಿದೆ. ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ನಡೆದುಕೊಂಡ ರೀತಿ ಮತ್ತು ಅವರು ನೀಡಿರುವ ಚಿಂತನೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಅವು ವಿಶ್ವವ್ಯಾಪಿಯಾಗಿವೆ. ಗಾಂಧಿ ಚಿಂತನೆಗಳಿಗೆ ತನ್ನದೇ ಆದ ಅಂತರ್ಗತ ಜೀವಂತಿಕೆ ಹಾಗೂ ಮಹತ್ವವಿದೆ ಎಂದು ಹೇಳಿದರು.
ಇಂದಿನ ಜಾಗತೀಕರಣದ ಯುಗದಲ್ಲಿ ಜಗತ್ತು ಒಂದು ಸಣ್ಣ ಹಳ್ಳಿಯಂತಾಗಿದೆ. ವಿಶ್ವದ ಯಾವುದೋ ಮೂಲೆಯಲ್ಲಿ ಯುದ್ಧ ನಡೆದರೂ ಅದರ ಪ್ರಭಾವ ಹಾಗೂ ಭಯ ನಮ್ಮನ್ನೂ ಆವರಿಸಿಕೊಳ್ಳುತ್ತದೆ. ತಂತ್ರಜ್ಞಾನ ಬೆಳೆದಂತೆ ಯುದ್ಧ ಮತ್ತು ಸಾವಿನ ದೃಶ್ಯಗಳನ್ನು ನಾವು ನೇರವಾಗಿ ನೋಡುತ್ತಾ ಆತಂಕಕ್ಕೊಳಗಾಗುತ್ತಿದ್ದೇವೆ. ಇಂತಹ ಸವಾಲುಗಳು ಹಾಗೂ ಬಿಕ್ಕಟ್ಟುಗಳನ್ನು ಎದುರಿಸಲು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಶಾಂತಿ ಹಾಗೂ ಮಾತುಕತೆಯ ಮಾರ್ಗವೇ ದಾರಿದೀಪ ಎಂದರು.
ಗಾಂಧೀಜಿ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಜೀವಂತ ವಿಚಾರಧಾರೆ. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೆ, ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ತಮ್ಮ ಸ್ವಾರ್ಥವನ್ನು ಬಲಿ ಕೊಟ್ಟು ಸಮಾಜದ ಸಂಕಟಗಳಿಗೆ ಸ್ಪಂದಿಸಿದ ಮಹಾನ್ ಮಾನವತಾವಾದಿ ಅವರು. ಅವರ ಈ ಅರ್ಪಣಾ ಮನೋಭಾವವೇ ಗಾಂಧಿ ತತ್ವಗಳನ್ನು ಇಂದಿಗೂ ಪ್ರಸ್ತುತವಾಗಿಸಿದೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿಸರ್ಜನೆಗೆ 4 ಸಾವಿರ ಪೊಲೀಸರ ಭಾರಿ ಬಂದೋಬಸ್ತ್
ಮಾನವೀಯ ಮೌಲ್ಯಗಳನ್ನು ಮತ್ತು ಗಾಂಧೀಜಿಯವರ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಡೆ-ನುಡಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂದಿನ ಜಾಗತಿಕ ಆತಂಕಗಳಿಂದ ಮುಕ್ತಿ ಹೊಂದಲು ಸಾಧ್ಯ. ಪ್ರಸ್ತುತ 21ನೇ ಶತಮಾನದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಬಿಕ್ಕಟ್ಟುಗಳಿಗೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಚಿಂತನೆಗಳಲ್ಲೇ ಸಮಾಧಾನ ಮತ್ತು ಪರಿಹಾರವಿದೆ. ಇಬ್ಬರ ತತ್ವಗಳು ಕೇವಲ ಒಂದು ಕ್ಷಣಕ್ಕಷ್ಟೇ ಅಲ್ಲ, ಇಡೀ ಮಾನವ ಕುಲ ಇರುವವರೆಗೂ ಶಾಶ್ವತಯಾಗಿರುತ್ತವೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಹಾಗೂ ಸಹಬಾಳ್ವೆ ಮೂಡಿಸಲು ಪ್ರತಿಯೊಬ್ಬರೂ ತಾಳ್ಮೆ, ಸಹನೆ ಮತ್ತು ಕ್ಷಮಾ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಸಂತಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್ ಮತ್ತು ಸಂಗಡಿಗರು ಗಾಂಧೀಜಿಯವರ ಪ್ರಿಯವಾದ ಭಜನೆಗಳನ್ನು ಹಾಡಿದರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಅವರು ನಿರೂಪಿಸಿದರು.
ಇದನ್ನೂ ಓದಿ: ಬಟಾಣಿಗಳು ಹಸಿರಾಗಿವೆಯೇ?.ಅಥವಾ ಬಣ್ಣ ಬಳಿದಿದ್ದಾರೆಯೇ ಎಂಬುದನ್ನು ತಿಳಿಯಿರಿ
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

