CHITRADURGA NEWS | 16 NOVEMBER 2026
ಚಿತ್ರದುರ್ಗ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಾವಯವ ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ರೈತರು ಸಾಧಿಸಿರುವ ಪ್ರಗತಿಗೆ ರಾಜ್ಯಪಾಲೆ ಡಾ.ಸುಧಾ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯದ ದೃಷ್ಟಿಯಿಂದ ಜಲ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಮತ್ತು ನೀರಿನ ಮಿತಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಬುಡಕಟ್ಟು ಕಿಲಾರಿಗಳ ಜೊತೆಗೆ ರಾಜ್ಯಪಾಲರ ಸಂವಾದ
ಜಿಲ್ಲೆಯ ಮೂಲಕ ಬಳ್ಳಾರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಭಾನುವಾರ ಹಿರಿಯೂರು ಸರ್ಕ್ಯೂಟ್ ಹೌಸ್ನಲ್ಲಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಮಧ್ಯಾಹ್ನದ ಭೋಜನದ ಸಂವಾದ ನಡೆಸಿ ಅವರು ಮಾತನಾಡಿದರು.
ಸಿರಿಧಾನ್ಯ ಸಂಸ್ಕರಣೆ, ಸಾವಯವ ಕೃಷಿ, ರೈತ ಉತ್ಪಾದಕ ಕಂಪನಿಗಳು, ಹೈನುಗಾರಿಕೆ, ಸ್ವಸಹಾಯ ಸಂಘಗಳ ಉದ್ಯಮ, ಕನ್ನಡ ಸಾಹಿತ್ಯ, ಗ್ರಾಮೀಣ ಕಲೆ ಹಾಗೂ ರಂಗಭೂಮಿ ಕ್ಷೇತ್ರಗಳ ಸಾಧಕರಿಂದ ಅವರ ಅನುಭವ ಮತ್ತು ಸಾಧನೆಗಳ ಕುರಿತು ಮಾಹಿತಿ ಪಡೆದರು.
ಯುವಜನರು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಅನುಭವದ ಮೂಲಕ ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಬೇಕು. ಜಲ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸಿ, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಚಿತ್ರದುರ್ಗದ ಇತಿಹಾಸ ಉಳಿಸಲು ಸಂಶೋಧಕರು, ಸಾಹಿತಿಗಳ ಕೊಡುಗೆ ಸ್ಮರಿಸಬೇಕು | ಸಚಿವ ರಘುಮೂರ್ತಿ
ಸಂವಾದದಲ್ಲಿ ಹೊಸದುರ್ಗದ ಶ್ರೀರಾಂಪುರ ದುರ್ಗದ ಸಿರಿಧಾನ್ಯ ರೈತ ಉತ್ಪಾದಕ ಸಂಸ್ಥೆಯ ಗಿರೀಶ್ ಮಾತನಾಡಿ, ರೈತರಿಂದ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ, ಸುಮಾರು ಒಂದು ಕೋಟಿ ರೂ. ವೆಚ್ಚದ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ. ‘ಹೊಸಸಿರಿ’ ಬ್ರ್ಯಾಂಡ್ ಮೂಲಕ ಬೆಂಗಳೂರಿನ ಮಾಲ್ಗಳು ಹಾಗೂ ಮಳಿಗೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದರು.
ಪ್ರಗತಿಪರ ರೈತ ಕೋನರೆಡ್ಡಿ ಮಾತನಾಡಿ, 2010ರಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸದೆ ಜೀವಾಮೃತ, ಸಗಣಿ, ಗೋಮೂತ್ರ ಹಾಗೂ ಸಸ್ಯ ಕಷಾಯಗಳ ಮೂಲಕ ಸಾವಯವ ಕೃಷಿ ಮಾಡುತ್ತಿದ್ದು, ಉತ್ತಮ ಆದಾಯ ಪಡೆಯುತ್ತಿದ್ದೇವೆ. ಇತರ ರೈತರಿಗೂ ಸಾವಯವ ಕೃಷಿ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಸಹಾಯ ಸಂಘದ ಮೂಲಕ ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಶ್ರೀದೇವಿ, 25ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಿಎಂಎಫ್ಎಂಇ ಯೋಜನೆಯಡಿ ಉದ್ಯಮ ವಿಸ್ತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಗಾಯತ್ರಿ ಜಲಾಶಯದ ಬಳಿ ನೂತನ ಗೋಶಾಲೆ | ಜಿಲ್ಲಾಧಿಕಾರಿ ರಮ್ಯಾ ಚಾಲನೆ
ಪ್ರಗತಿಪರ ಕೃಷಿಕ ಕೆ.ನರಸಿಂಹಮೂರ್ತಿ ಮಾತನಾಡಿ, ಎನ್ಎಲ್ಎಂ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಹಸುಗಳನ್ನು ಖರೀದಿಸಲಾಗಿದೆ. ಇದರಿಂದ ಹಾಲಿನ ಸಂಗ್ರಹ ದಿನಕ್ಕೆ 140ರಿಂದ 150 ಲೀಟರ್ನಿಂದ 650ರಿಂದ 700 ಲೀಟರ್ಗೆ ಹೆಚ್ಚಿದ್ದು, ವಾರ್ಷಿಕ 1.50ರಿಂದ 1.75 ಕೋಟಿ ರೂ. ವಹಿವಾಟು ನಡೆಯುತ್ತಿದೆ ಎಂದರು.
ಲೇಖಕ ಎಂ.ಜಿ.ರಂಗಸ್ವಾಮಿ ಮಾತನಾಡಿ, ಯುವಜನರಲ್ಲಿ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ. ಪುಸ್ತಕಗಳ ಬದಲಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿವ್ಯಕ್ತಿಪಡಿಸುತ್ತಿದ್ದಾರೆ ಎಂದು ತಿಳಿಸಿದರು. ಡಾ.ಫ್ರಾನ್ಸಿಸ್ ಬುಕಾನನ್ ಅವರ ಹಳೆಯ ಮೈಸೂರು ಪ್ರವಾಸದ ಐತಿಹಾಸಿಕ ವರದಿಗಳ ಅನುವಾದ ಕಾರ್ಯದ ಬಗ್ಗೆಯೂ ಮಾಹಿತಿ ನೀಡಿದರು.
90 ವರ್ಷದ ಹಿರಿಯ ರಂಗಕರ್ಮಿ, ಹಾರ್ಮೋನಿಯಂ ವಾದಕ ಹಾಗೂ ನಾಟಕ ನಿರ್ದೇಶಕ ಜಿ.ಡಿ.ತಿಮ್ಮಯ್ಯ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ರಾಜ್ಯಪಾಲರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಳೆಗಾಗಿ ನಿವೃತ್ತ ನೌಕರರಿಂದ ಗೋ ಪೂಜೆ
ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ದಾವಣಗೆರೆ ಪೂರ್ವ ವಲಯ ಐಜಿಪಿ ಎನ್.ಸತೀಶ್ ಕುಮಾರ್, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಸಿದ್ದೇಶ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ಜಲತಜ್ಞ ದೇವರಾಜರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

