CHITRADURGA NEWS | 01 OCTOBER 2026
ಚಿತ್ರದುರ್ಗ: ನಗರದದಲ್ಲಿ ಅಕ್ಟೋಬರ್ 3ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಈ ಬಾರಿ ಸುಮಾರು 3ರಿಂದ 4 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ವಿಸರ್ಜನೆ | ನಗರದಲ್ಲಿ ಬೃಹತ್ ಬೈಕ್ ರ್ಯಾಲಿ
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 6 ಐಪಿಎಸ್ ಅಧಿಕಾರಿಗಳು, 4 ಹೆಚ್ಚುವರಿ ಎಸ್ಪಿಗಳು, 6 ಪ್ರೊಬೇಷನರಿ ಎಎಸ್ಪಿಗಳು, 15 ಡಿವೈಎಸ್ಪಿಗಳು, 50 ಇನ್ಸ್ಪೆಕ್ಟರ್ಗಳು ಹಾಗೂ 68 ಪಿಎಸ್ಐಗಳು ಸೇರಿದಂತೆ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿರುವ 218 ಪಿಎಸ್ಐಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಶಿವಮೊಗ್ಗ, ಹಾಸನ ಹಾಗೂ ತುಮಕೂರು ಬೆಟಾಲಿಯನ್ಗಳಿಂದ 16 ಕೆಎಸ್ಆರ್ಪಿ ತುಕಡಿಗಳು, 14 ಡಿಆರ್ ತುಕಡಿಗಳು ಹಾಗೂ 3 ಕ್ಯೂಆರ್ಟಿ ತಂಡಗಳನ್ನು ನಿಯೋಜಿಸಲಾಗಿದೆ.
ಭದ್ರತೆಗಾಗಿ 159 ಸಿಸಿಟಿವಿ ಕ್ಯಾಮೆರಾಗಳು, 5 ಡ್ರೋನ್ಗಳು, 26 ವಾಚ್ ಟವರ್ಗಳು ಹಾಗೂ 49 ಸ್ಕೈ ಸೆಂಟ್ರಿಗಳನ್ನು ಅಳವಡಿಸಲಾಗಿದೆ. 67 ವೀಡಿಯೊ ಕ್ಯಾಮೆರಾಗಳ ಮೂಲಕ ಶೋಭಾಯಾತ್ರೆಯ ಚಟುವಟಿಕೆಗಳನ್ನು ದಾಖಲಿಸಲಾಗುವುದು. ಎಸ್ಜೆಎಂ ಡೆಂಟಲ್ ಕಾಲೇಜಿನ ಲೈಬ್ರರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಿ, ರಿಯಲ್ಟೈಮ್ ದೃಶ್ಯಾವಳಿ ಹಾಗೂ ಅನಾಲಿಟಿಕ್ಸ್ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮೊಬೈಲ್ ಕಮಾಂಡ್ ಸೆಂಟರ್ ವಾಹನವನ್ನು ಸಹ ತರಿಸಲಾಗಿದೆ.
ಇದನ್ನೂ ಓದಿ: ಲಾರಿಗೆ ರಾಜಹಂಸ ಬಸ್ ಡಿಕ್ಕಿ | ಚಾಲಕ ಸಾವು, 15 ಮಂದಿಗೆ ಗಾಯ
ಮೆರವಣಿಗೆ ಮಾರ್ಗವನ್ನು 18 ಸೆಕ್ಟರ್ಗಳಾಗಿ ವಿಂಗಡಿಸಲಾಗಿದ್ದು, ಸಂಚಾರ ನಿಯಂತ್ರಣಕ್ಕೆ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ವಾಹನಗಳಿಗಾಗಿ 10 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸಿದ್ದು, 10 ಅಂಬ್ಯುಲೆನ್ಸ್ಗಳು ಹಾಗೂ 6 ಅಗ್ನಿಶಾಮಕ ವಾಹನಗಳನ್ನು ಸಿದ್ಧವಾಗಿರಿಸಲಾಗಿದೆ.
ಡಿಜೆ, ಪಟಾಕಿಗೆ ನಿರ್ಬಂಧ
ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕಗಳಿಗೂ ಅವಕಾಶವಿಲ್ಲ. ಅಗ್ನಿ ಅವಘಡಗಳ ಮುನ್ನೆಚ್ಚರಿಕೆಯಾಗಿ ಪಟಾಕಿ ಹಾಗೂ ಪೇಪರ್ ಬ್ಲಾಸ್ಟರ್ಗಳ ಬಳಕೆಯನ್ನೂ ನಿಷೇಧಿಸಲಾಗಿದೆ.
ಅ.2ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಒಣ ದಿನವಾಗಿದ್ದು, ಅ.3ರಂದು ಸಹ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅ.1ರ ರಾತ್ರಿಯಿಂದ ಅ.4ರ ಬೆಳಗ್ಗೆಯವರೆಗೆ ಮದ್ಯದ ಅಂಗಡಿಗಳು ಬಂದ್ ಇರಲಿವೆ. ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ತಡೆಗೆ ದಾಳಿ ಮತ್ತು 9 ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಯಲಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 01 | ಹತ್ತಿ ರೇಟ್ ಎಷ್ಟಿದೆ?
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 3 ಸೆಕ್ಟೋರಲ್ ಮ್ಯಾಜಿಸ್ಟ್ರೇಟ್ಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಿ, ಶಾಂತಿಯುತವಾಗಿ ಶೋಭಾಯಾತ್ರೆಯಲ್ಲಿ ಭಾಗವಹಿಸುವಂತೆ ಎಸ್ಪಿ ಕುಶಾಲ್ ಚೌಕ್ಸೆ ಮನವಿ ಮಾಡಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

