CHITRADURGA NEWS | 03 October 2026
ಚಿತ್ರದುರ್ಗ: ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ಉತ್ಸವವು ಯಶಸ್ವಿಯಾಗಿ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಯುವಜನರಲ್ಲಿ ಉತ್ಸಾಹ, ಚೈತನ್ಯ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಸಾಮಾಜಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್ ಹೇಳಿದರು.
ಇದನ್ನೂ ಓದಿ: ನಾಳೆ ಚಿತ್ರದುರ್ಗಕ್ಕೆ ಕೇಂದ್ರ ಬರ ಅಧ್ಯಯನ ತಂಡ | ಬೆಳೆ ಹಾನಿ ಪರಿಶೀಲನೆ
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಯೋಜಿಸಿದ್ದ ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಗಣೇಶ ಮತ್ತು ಹನುಮಂತ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಇವರು ಸಮಸ್ತ ಸಮಾಜವನ್ನು ಒಗ್ಗೂಡಿಸುವ ಸಂಕೇತಗಳಾಗಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ವೈಚಾರಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳ ನಡುವೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡು ಪ್ರಾಣಪ್ರತಿಷ್ಠೆ ನೆರವೇರಿರುವುದು ಭಾರತದ ಸ್ವಾಭಿಮಾನದ ಜಾಗೃತಿಗೆ ಸಾಕ್ಷಿಯಾಗಿದೆ ಎಂದರು.
ಕರ್ನಾಟಕದಲ್ಲಿಯೂ ಸಾಂಸ್ಕೃತಿಕ ಜಾಗೃತಿ ಮತ್ತಷ್ಟು ಬಲಗೊಳ್ಳಬೇಕಿದೆ. ಗಣೇಶೋತ್ಸವ ಹಾಗೂ ಶೋಭಾಯಾತ್ರೆಗಳಿಗೆ ಅನುಮತಿ ಪಡೆಯಲು ಜನಪ್ರತಿನಿಧಿಗಳ ಮಧ್ಯಪ್ರವೇಶ ಅಗತ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿರುವ ಕುರಿತು ಮಾತನಾಡಿದ ಅವರು, ಇಂತಹ ವಿಚಾರಗಳಿಗೆ ಕಾನೂನು ಮತ್ತು ನ್ಯಾಯಾಲಯದ ಮೂಲಕ ಉತ್ತರ ನೀಡಲಾಗುವುದು ಎಂದರು.
ಇದನ್ನೂ ಓದಿ: ಕೂದಲಿಗೆ ಅರಿಶಿನ ಹಚ್ಚಿದರೆ ಏನಾಗುತ್ತದೆ ಗೊತ್ತಾ?
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಹಿತವೇ ಸಂಘಟನೆಯ ಪ್ರಮುಖ ಆದ್ಯತೆಯಾಗಿದೆ. ಯುವಜನತೆ ಜಾಗೃತರಾಗಿ ಸಮಾಜ ಮತ್ತು ದೇಶದ ಪರವಾಗಿ ನಿಲ್ಲಬೇಕು. ಗಣೇಶೋತ್ಸವವು ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ರಾಷ್ಟ್ರೀಯ ಜಾಗೃತಿಯ ಸಂಕೇತವಾಗಿದೆ ಎಂದರು.
ಶೋಭಾಯಾತ್ರೆ ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಜಾತಿ, ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬದಿಗಿಟ್ಟು ಹಿಂದೂ ಬಾಂಧವರು ಒಂದಾಗುವ ಭಾವನೆ ಮೂಡಿಸುವಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಲೋಕಮಾನ್ಯ ತಿಲಕರು ಸಂಘಟನಾತ್ಮಕ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದು, ಇದು ಸ್ವಾತಂತ್ರ್ಯ ಚಳವಳಿಗೆ ವೇಗ ನೀಡಿತ್ತು. ಅದೇ ಪರಂಪರೆಯಲ್ಲಿ ಚಿತ್ರದುರ್ಗದಲ್ಲೂ ಕಳೆದ 19 ವರ್ಷಗಳಿಂದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್ಸಿ–ಎಸ್ಟಿ ರೋಗಿಗಳಿಗೆ ಸರ್ಕಾರದ ವಿಶೇಷ ಆರೋಗ್ಯ ಸೌಲಭ್ಯ | ದಾಖಲೆ ಸಲ್ಲಿಸಲು ಮನವಿ
ದೇಶದ ಭದ್ರತೆ ಹಾಗೂ ಆಧುನಿಕ ಸವಾಲುಗಳ ಕುರಿತು ಮಾತನಾಡಿದ ಅವರು, ಭಾರತೀಯ ಯೋಧರು ಮತ್ತು ಪೈಲಟ್‌ಗಳ ಸಮಯಪ್ರಜ್ಞೆ, ಧೈರ್ಯ ಹಾಗೂ ಸಾಮರ್ಥ್ಯದಿಂದ ಹಲವು ಸಂದರ್ಭಗಳಲ್ಲಿ ಅನಾಹುತಗಳು ತಪ್ಪಿವೆ ಎಂದು ಹೇಳಿದರು. ಧರ್ಮ, ದೇಶ ಹಾಗೂ ಸಮಾಜದ ರಕ್ಷಣೆಗಾಗಿ ಹಿಂದೂ ಸಮಾಜ ಒಗ್ಗಟ್ಟಿನಿಂದ ನಿಲ್ಲಬೇಕಾದ ಅಗತ್ಯವಿದೆ ಎಂದರು.
ಗಣೇಶೋತ್ಸವದ ಮೂಲಕ ಸಮಾಜಕ್ಕೆ ಧರ್ಮ ಮತ್ತು ದೇಶಕ್ಕಾಗಿ ಬದುಕಬೇಕೆಂಬ ಸಂದೇಶವನ್ನು ನೀಡಲಾಗುತ್ತಿದೆ ಎಂದು ಅರುಣ್ ಶ್ಯಾಮ್ ಹೇಳಿದರು.
ಇದೇ ಸಂದರ್ಭದಲ್ಲಿ ಹಿಂದೂ ಮಹಾಗಣಪತಿಯ ಧ್ವಜ, ಹಾರ, ಏಲಕ್ಕಿ ಹಾರ, ಲಡ್ಡು, ಉಯ್ಯಾಲೆ ಗಣಪತಿ, ಗಣಪತಿಯ ಚಿತ್ರಪಟ ಹಾಗೂ ಹಣ್ಣಿನ ಪುಟ್ಟಿಯನ್ನು ಹರಾಜು ಮಾಡಲಾಯಿತು.
ಗಣಪತಿಯ ಧ್ವಜವನ್ನು ಬಿಜೆಪಿ ಮುಖಂಡ ಹನುಮಂತೇಗೌಡ ಅವರು ₹4 ಲಕ್ಷಕ್ಕೆ, ಗಣಪತಿಯ ಕೂರಳಿಯ ಹಾರವನ್ನು ಲವಕುಮಾರ್ ₹1.30 ಲಕ್ಷಕ್ಕೆ, ಲಡ್ಡುವನ್ನು ಮಧು ಅವರು ₹60 ಸಾವಿರಕ್ಕೆ, ಏಲಕ್ಕಿ ಹಾರವನ್ನು ಸಮಿತಿ ಅಧ್ಯಕ್ಷ ಜಿ.ಆರ್. ಸುಧೀರ್ ₹50 ಸಾವಿರಕ್ಕೆ, ಗಣಪತಿಯ ಚಿತ್ರಪಟವನ್ನು ಮಂಜಣ್ಣ ₹50 ಸಾವಿರಕ್ಕೆ ಪಡೆದರು. ಉಯ್ಯಾಲೆ ಗಣಪತಿಯನ್ನು ಪಲ್ಲವಿ ಪ್ರಸನ್ನ ₹1.30 ಲಕ್ಷಕ್ಕೆ, ಹಣ್ಣಿನ ಪುಟ್ಟಿಯನ್ನು ಚಳ್ಳಕೆರೆಯ ಡಾ. ಮಂಜುನಾಥ್ ₹1.10 ಲಕ್ಷಕ್ಕೆ ಪಡೆದರು.
ಇದನ್ನೂ ಓದಿ: 2030ರೊಳಗೆ ಕ್ಷಯ ಮುಕ್ತ ಭಾರತ | ಮೊದಲು ಚಿತ್ರದುರ್ಗ ಕ್ಷಯ ಮುಕ್ತಗೊಳಿಸಲು ಕರೆ
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಡಾ. ಎಂ. ಚಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಸಿ.ಟಿ. ರವಿ, ವಿಹಿಂಪ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಜಿ.ಆರ್. ಸುಧೀರ್, ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

