CHITRADURGA NEWS | 08 AUGUST 2026
ಚಿತ್ರದುರ್ಗ: ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಜೇನುಕೃಷಿ, ಕೋಳಿ ಹಾಗೂ ಕುರಿ-ಮೇಕೆ ಸಾಕಾಣಿಕೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೈತರು ವರ್ಷವಿಡೀ ನಿರಂತರ ಆದಾಯ ಗಳಿಸಿ ಸ್ವಾವಲಂಬಿ ಜೀವನ ನಡೆಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಆರ್. ಹೇಳಿದರು.
ಇದನ್ನೂ ಓದಿ: ಮಳೆ ಕೊರತೆ | ಬೆಳೆ ಹಾನಿ ಪ್ರದೇಶಗಳಿಗೆ ಸಚಿವ ಟಿ.ರಘುಮೂರ್ತಿ ಭೇಟಿ | ಬೆಳೆ ವಿಮೆಗೆ ಸೂಚನೆ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.5ರಿಂದ 7ರವರೆಗೆ ಪರಿಶಿಷ್ಟ ಪಂಗಡದ ಆಸಕ್ತ ರೈತರಿಗಾಗಿ ಆಯೋಜಿಸಿದ್ದ ಮೂರು ದಿನಗಳ ವಸತಿಯುಕ್ತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಸಮಗ್ರ ಕೃಷಿ ಪದ್ಧತಿಯು ರೈತರ ಆದಾಯವನ್ನು ಒಂದೇ ಬೆಳೆ ಅಥವಾ ಚಟುವಟಿಕೆಗೆ ಸೀಮಿತಗೊಳಿಸದೆ, ವಿವಿಧ ಅವಧಿಗಳಲ್ಲಿ ಆದಾಯ ದೊರೆಯುವಂತೆ ಮಾಡುತ್ತದೆ ಎಂದು ತಿಳಿಸಿದರು.
ಹೈನುಗಾರಿಕೆಯಿಂದ ಪ್ರತಿದಿನ, ಸೊಪ್ಪು ಮತ್ತು ತರಕಾರಿಗಳಿಂದ ನಿಯಮಿತವಾಗಿ, ರೇಷ್ಮೆ, ಕೋಳಿ ಸಾಕಾಣಿಕೆ ಹಾಗೂ ಅಲ್ಪಾವಧಿ ಬೆಳೆಗಳಿಂದ ಮೂರು ತಿಂಗಳಿಗೊಮ್ಮೆ ಆದಾಯ ಪಡೆಯಬಹುದು.
ಹತ್ತಿ, ತೊಗರಿ ಹಾಗೂ ಕುರಿ-ಮೇಕೆ ಸಾಕಾಣಿಕೆಯಿಂದ ಸುಮಾರು ಆರು ತಿಂಗಳಿಗೊಮ್ಮೆ, ಪಪ್ಪಾಯ ಮತ್ತು ಬಾಳೆಯಿಂದ ಒಂಬತ್ತು ತಿಂಗಳಿಗೊಮ್ಮೆ ಹಾಗೂ ಅಡಿಕೆ, ತೆಂಗು ಮತ್ತು ಮಾವಿನಿಂದ ವಾರ್ಷಿಕವಾಗಿ ಆದಾಯ ಗಳಿಸಬಹುದು. ಸಾಗುವಾನಿ, ಶ್ರೀಗಂಧ, ಹೆಬ್ಬೇವು ಮತ್ತು ಸಿಲ್ವರ್ ಓಕ್‌ನಂತಹ ಕೃಷಿ ಅರಣ್ಯ ಮರಗಳಿಂದ ದೀರ್ಘಾವಧಿಯಲ್ಲಿ ಆದಾಯ ಪಡೆಯುವ ಅವಕಾಶವಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 08 | ಹತ್ತಿ ರೇಟ್ ಎಷ್ಟಿದೆ?
ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ತೇವಾಂಶ, ಫಲವತ್ತತೆ ಹಾಗೂ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಿಸಿ ಸುಸ್ಥಿರ ಇಳುವರಿ ಪಡೆಯಲು ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೆಚ್ಚು ನೀರು ಬೇಡುವ ಮುಸುಕಿನ ಜೋಳಕ್ಕೆ ಪರ್ಯಾಯವಾಗಿ ರಾಗಿ, ಸಾಮೆ, ನವಣೆ ಹಾಗೂ ಸಜ್ಜೆಯಂತಹ ಕಡಿಮೆ ನೀರು ಬೇಡುವ ಸಿರಿಧಾನ್ಯಗಳನ್ನು ಬೆಳೆಯಬಹುದು. ಸಿರಿಧಾನ್ಯಗಳೊಂದಿಗೆ ಹೆಸರು ಅಥವಾ ಅಲಸಂದಿಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಾಪಾಡುವುದರ ಜೊತೆಗೆ ಹೆಚ್ಚುವರಿ ಆದಾಯ ಗಳಿಸಬಹುದು ಎಂದರು.
ಹಿರಿಯೂರಿನ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಅವರು ವೈಜ್ಞಾನಿಕ ಹೈನುಗಾರಿಕೆ ಹಾಗೂ ಕುರಿ-ಮೇಕೆ ಸಾಕಾಣಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಬ್ಯಾಡರಹಳ್ಳಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಇಂದೂಧರ ಅವರು ಸುಸ್ಥಿರ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಹನುಮಂತನಾಯ್ಕ್ ಅವರು ಎರೆಗೊಬ್ಬರ, ವಿವಿಧ ಬಗೆಯ ಕಾಂಪೋಸ್ಟ್ ತಯಾರಿಕೆ ಹಾಗೂ ಜೇನುಕೃಷಿ ಕುರಿತು ತರಬೇತಿ ನೀಡಿದರು.
ಇದನ್ನೂ ಓದಿ: ಶಿಶುಮರಣ ತಡೆಗೆ ಜನನದ ಮೊದಲ ಗಂಟೆಯಲ್ಲೇ ಸ್ತನ್ಯಪಾನ ಅಗತ್ಯ
ಅಕ್ಷಯಕಲ್ಪ ಸಮಗ್ರ ಕೃಷಿ ತಾಕಿಗೆ ಕ್ಷೇತ್ರ ಭೇಟಿ
ತರಬೇತಿಯ ಮೂರನೇ ದಿನ ತಿಪಟೂರು ಸಮೀಪದ ಅಕ್ಷಯಕಲ್ಪ ಸಾವಯವ ಸುಸ್ಥಿರ ಸಮಗ್ರ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆ ತಾಕಿಗೆ ರೈತರನ್ನು ಕ್ಷೇತ್ರಭೇಟಿಗೆ ಕರೆದೊಯ್ಯಲಾಯಿತು. ಹೈನುಗಾರಿಕೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ರೂಪಿಸಿರುವ ಸಮಗ್ರ ಕೃಷಿ ಮಾದರಿಯ ವಿವಿಧ ಆಯಾಮಗಳನ್ನು ರೈತರು ಪ್ರಾಯೋಗಿಕವಾಗಿ ವೀಕ್ಷಿಸಿದರು.
ಹೈನುಗಾರಿಕೆಯೊಂದಿಗೆ ಕೋಳಿ ಸಾಕಾಣಿಕೆ, ಏರುಮಡಿ ಮಾದರಿಯ ಸಾವಯವ ತರಕಾರಿ ಕೃಷಿ, ಜೇನುಕೃಷಿ ಹಾಗೂ ತೆಂಗು, ಬಾಳೆ, ಸಪೋಟ, ಮಾವು, ಹಲಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಅಂತರಬೆಳೆ, ಮಿಶ್ರಬೆಳೆ ಮತ್ತು ಬಹುಪದರ ಕೃಷಿ ಪದ್ಧತಿಯನ್ನು ಅಳವಡಿಸುವ ಮೂಲಕ ಭೂಮಿ, ನೀರು ಮತ್ತು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂಬುದನ್ನು ರೈತರು ಕ್ಷೇತ್ರಭೇಟಿಯಲ್ಲಿ ಅರಿತುಕೊಂಡರು.
ಇದನ್ನೂ ಓದಿ: ಎನ್.ಜಿ. ಹಳ್ಳಿ ನೂತನ ವಿದ್ಯುತ್ ಮಾರ್ಗ ಚೇತನ | ಸಾರ್ವಜನಿಕರಿಗೆ ಎಚ್ಚರಿಕೆ
ಸಮಗ್ರ ಕೃಷಿ ಪದ್ಧತಿಯ ಮೂಲಕ “ಒಂದೇ ಜಮೀನಿನಿಂದ ವಿವಿಧ ಮೂಲಗಳ, ವಿವಿಧ ಅವಧಿಗಳ ಆದಾಯ” ಪಡೆಯಬಹುದಾಗಿದ್ದು, ಇದು ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗಲಿದೆ ಎಂದು ತರಬೇತಿಯಲ್ಲಿ ತಿಳಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

