CHITRADURGA NEWS | 13 AUGUST 2026
ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (CMCRI)ಯಲ್ಲಿ 2026–27ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ (MD/MS) ವೈದ್ಯಕೀಯ ಕೋರ್ಸ್‌ಗಳನ್ನು ಆರಂಭಿಸಲು ಮಂಜೂರಾತಿ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.
ಇದನ್ನೂ ಓದಿ: HAL | ಅಪ್ರೆಂಟಿಸ್ ತರಬೇತಿಗೆ ಅರ್ಜಿ ಅಹ್ವಾನ
ಚಿತ್ರದುರ್ಗ ಜಿಲ್ಲೆಯಲ್ಲಿ ತಜ್ಞ ವೈದ್ಯಕೀಯ ಸೇವೆಗಳ ಅಗತ್ಯ ಹೆಚ್ಚಿದ್ದು, ಸ್ಥಳೀಯವಾಗಿಯೇ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತಾಗಲು CMCRIಯಲ್ಲಿ PG ವೈದ್ಯಕೀಯ ಶಿಕ್ಷಣ ಆರಂಭಿಸುವುದು ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಸಂಗಮ ಪ್ರದೇಶವಾಗಿರುವ ಚಿತ್ರದುರ್ಗದಲ್ಲಿ ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. CMCRI ಗೆ ಪ್ರತಿ ತಿಂಗಳು 525ಕ್ಕೂ ಹೆಚ್ಚು ಟ್ರಾಮಾ ಪ್ರಕರಣಗಳು ದಾಖಲಾಗುತ್ತಿದ್ದು, ಹಾವು ಕಡಿತ, ನಾಯಿ ಕಡಿತ, ವಿಷ ಸೇವನೆ ಸೇರಿದಂತೆ ವಿವಿಧ ತುರ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
CMCRI ಬೋಧನಾ ಆಸ್ಪತ್ರೆಯಲ್ಲಿ ಪ್ರತಿದಿನ 1,200ಕ್ಕೂ ಹೆಚ್ಚು OPD ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 690 ಹಾಸಿಗೆಗಳ ಆಸ್ಪತ್ರೆ ಸುಮಾರು ಶೇ.100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ 16,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಹಾಗೂ ಟ್ರಾಮಾ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 100 ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್‌ಗೂ ಮಂಜೂರಾತಿ ದೊರೆತಿದೆ.
ಇದನ್ನೂ ಓದಿ: ಮೊಬೈಲ್, ರೀಲ್ಸ್‌ಗಿಂತ ಆದರ್ಶ ವ್ಯಕ್ತಿಗಳ ಬದುಕು ಅರಿಯಿರಿ | ರಘುಚಂದನ್
ಸಂಸ್ಥೆಯ ಬೋಧನಾ ಸಾಮರ್ಥ್ಯ ಬಲಪಡಿಸಲು ಕರ್ನಾಟಕ ಸರ್ಕಾರವು 123 ಹೆಚ್ಚುವರಿ ಬೋಧಕ ಹುದ್ದೆಗಳಿಗೆ ಮಂಜೂರಾತಿ ನೀಡಿದ್ದು, ಈ ಪೈಕಿ 97 ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಿದೆ.
CMCRIಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ PG ಕೋರ್ಸ್‌ಗಳಿಗೆ Consent of Affiliation ದೊರೆತಿದೆ. ಒಟ್ಟು 10 ವಿಭಾಗಗಳಲ್ಲಿ 40 PG ಸೀಟುಗಳನ್ನು ಪ್ರಸ್ತಾಪಿಸಲಾಗಿದ್ದು, 2026–27ನೇ ಸಾಲಿಗೆ 7 ವಿಭಾಗಗಳ 23 PG ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಶುಲ್ಕ ಪಾವತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಪ್ರಸ್ತಾವಿತ 23 PG ಸೀಟುಗಳು:
– MD ಅನಸ್ತೀಷಿಯಾಲಜಿ – 3
– MS ಜನರಲ್ ಸರ್ಜರಿ – 5
– MD ಪೀಡಿಯಾಟ್ರಿಕ್ಸ್ – 3
– MD ಜನರಲ್ ಮೆಡಿಸಿನ್ – 5
– MS ಆರ್ಥೋಪೆಡಿಕ್ಸ್ – 3
– MD ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ – 2
– MS ಪ್ರಸೂತಿ ಮತ್ತು ಸ್ತ್ರೀರೋಗ – 2
ಒಟ್ಟು – 23 ಸೀಟುಗಳು
PG ಕೋರ್ಸ್‌ಗಳು ಆರಂಭವಾದರೆ ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಹೆಚ್ಚುವುದರ ಜೊತೆಗೆ ಟ್ರಾಮಾ, ತುರ್ತು ಚಿಕಿತ್ಸೆ ಮತ್ತು ಕ್ರಿಟಿಕಲ್ ಕೇರ್ ಸೇವೆಗಳು ಮತ್ತಷ್ಟು ಬಲಗೊಳ್ಳಲಿವೆ. ವಿಶೇಷ ಚಿಕಿತ್ಸೆಗಾಗಿ ಬೆಂಗಳೂರು ಹಾಗೂ ಇತರೆ ನಗರಗಳಿಗೆ ತೆರಳಬೇಕಾಗಿರುವ ರೋಗಿಗಳ ಸಮಸ್ಯೆಯೂ ಕಡಿಮೆಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಇದನ್ನೂ ಓದಿ: ಆತ್ಮರಕ್ಷಣೆಗಾಗಿ ಟೇಕ್ವಾಂಡೋ ಕಲಿಯುವುದು ಅಗತ್ಯ
ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, NMC ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, 2026–27ನೇ ಶೈಕ್ಷಣಿಕ ಸಾಲಿನಿಂದಲೇ PG ಕೋರ್ಸ್‌ಗಳಿಗೆ ಮಂಜೂರಾತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ PG ಕೋರ್ಸ್‌ಗಳ ಮಂಜೂರಾತಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಂಸದರ ಕಚೇರಿ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

