CHITRADURGA NEWS | 13 AUGUST 2026
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ ಮತ್ತು ಸಾಧನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಇಂದಿಗೂ ಹಲವು ತಪ್ಪು ಗ್ರಹಿಕೆಗಳಿವೆ. ಅವರನ್ನು ಕೇವಲ ‘ಸಂವಿಧಾನ ಶಿಲ್ಪಿ’, ‘ಮೀಸಲಾತಿಯ ಹರಿಕಾರ’ ಹಾಗೂ ‘ದಲಿತರ ಆಶಾಕಿರಣ’ ಎಂಬ ಸಿದ್ಧ ಸೂತ್ರಗಳಿಗೆ ಕಟ್ಟಿಹಾಕುತ್ತೇವೆ. ಆದರೆ, ಅಂಬೇಡ್ಕರ್ ಅವರು ಈ ಎಲ್ಲ ವಿಶ್ಲೇಷಣೆಗಳನ್ನೂ ಮೀರಿ ಬೆಳೆದ ಅಪರೂಪದ ನಾಯಕ ಎಂದು ಚಳ್ಳಕೆರೆ ಹೆಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಪ್ರೊ.ಎಂ.ವಿ.ನಾಗರಾಜ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 12 | ರಾಗಿ, ಶೇಂಗಾ ರೇಟ್…..
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಬದುಕು ಬರಹ, ಸಾಧನೆ ಕುರಿತು ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರು ದೇಶದ ಕಾರ್ಮಿಕರು ಮತ್ತು ಮಹಿಳೆಯರ ಜೀವನ ಸುಧಾರಣೆಗೆ ಹಲವು ಕೋನಗಳಲ್ಲಿ ಯೋಚಿಸಿದವರು. ತಮ್ಮ ನಂಬಿಕೆ ಹಾಗೂ ಆದರ್ಶಗಳಿಗೆ ಕೊನೆಯವರೆಗೂ ಬದ್ಧರಾಗಿದ್ದ ಅವರು, ಅಸ್ಪøಶ್ಯತೆ ನಿವಾರಣೆಯನ್ನು ಬದುಕಿನ ಮುಖ್ಯ ಧ್ಯೇಯವಾಗಿಸಿಕೊಂಡಿದ್ದರು. ಅಸ್ಪøಶ್ಯತೆಯ ಈ ದೇಶವನ್ನು ಕಾಡುತ್ತಿರುವ ದೊಡ್ಡ ಪಿಡುಗು ಎಂದು ಪ್ರತಿಪಾದಿಸಿದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರನ್ನು ಇಂದಿಗೂ ಸೂಕ್ತ ನೆಲೆಯಲ್ಲಿ ಗ್ರಹಿಸಿಲ್ಲ. ಅವರಲ್ಲೊಬ್ಬ ಶ್ರೇಷ್ಠ ಪ್ರಬುದ್ಧ ಚಿಂತಕ ಹಾಗೂ ಬರಹಗಾರ. ಅವರ ಬರಹದ ಹಿಂದೆ ಇದ್ದ ಆಳವಾದ ಅಧ್ಯಯನ ಮತ್ತು ಸಂಶೋಧನಾ ಶಕ್ತಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೂ ಓದಿ: ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಮಾತ್ರೆ ಸೇವಿಸುವುದು ಅತ್ಯಗತ್ಯ
ವೇದ ಹಾಗೂ ವೇದಪೂರ್ವ ಕಾಲದಲ್ಲಿ ನಡೆದ ಅನೇಕ ಅಪಸವ್ಯಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ, ಹೊಸ ಚರಿತ್ರೆಯನ್ನೇ ಕಟ್ಟಿಕೊಟ್ಟರು. ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಅವರು, ಜಾತಿ ಪದ್ಧತಿಯು ಮೇಲ್ವರ್ಗದವರ ಯೋಜಿತ ಸಂಚಿನ ಫಲ ಎಂಬುದನ್ನು ತಮ್ಮ ಅಪೂರ್ವ ಒಳನೋಟಗಳ ಮೂಲಕ ಬರಹದಲ್ಲಿ ತೆರೆದಿಟ್ಟಿದ್ದಾರೆ ಎಂದು ನಾಗರಾಜ್ ವಿಶ್ಲೇಷಿಸಿದರು.
ಇಂದಿನ ವಿದ್ಯಾರ್ಥಿಗಳು ಸಾವಿರಾರು ರೂಪಾಯಿ ಹಣ ಕೊಟ್ಟು ‘ವ್ಯಕ್ತಿತ್ವ ವಿಕಸನ’ ತರಬೇತಿಗೆ ಹೋಗುವ ಅಗತ್ಯವಿಲ್ಲ. ಬದಲಾಗಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಚಿಂತನೆಗಳನ್ನು ಓದಿದರೆ ಸಾಕು, ಜೀವನಕ್ಕೆ ಬೇಕಾದ ದಾರಿ ಮತ್ತು ಆತ್ಮವಿಶ್ವಾಸ ತಾನಾಗಿಯೇ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಆಕಾಶವಾಣಿಯ ನಿರೂಪಕ ಡಾ.ನವೀನ್ ಮಸ್ಕಲ್ ಪ್ರತಿಕ್ರಿಯಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: ಹೊಸದುರ್ಗ | ಭಾರತ್ ಜೋಡೊ ಯುವ ಸಂಘ ಸ್ಥಾಪಿಸಲು ಅರ್ಜಿ ಅಹ್ವಾನ
ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ, ಪ್ರಬಂಧ, ಆಶುಭಾಷಣ, ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಆರ್.ತಾರಿಣಿ ಶುಭದಾಯಿನಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ವಿ.ಪ್ರಸಾದ್, ಸಹ ಪ್ರಾಧ್ಯಾಪಕರಾದ ಜಿ.ರಹಮತ್, ಪ್ರೊ.ಎ.ವೀರಭದ್ರಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

