ಕ್ರೈಂ ಸುದ್ದಿ
Murder case: ಅತ್ತೆ, ಮಾವನ ಕೊಲೆ ಪ್ರಕರಣ | ಅಳಿಯ ಎಸ್ಕೇಪ್ | ಇಬ್ಬರ ಬಂಧನ


CHITRADURGA NEWS | 22 SEPTEMBER 2024
ಚಿತ್ರದುರ್ಗ: ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಹನುಮಂತಪ್ಪ (46), ಪತ್ನಿ ತಿಪ್ಪಮ್ಮ (42) ದಂಪತಿ ಕೊಲೆ ಪ್ರಕರಣದ ಸಂಬಂಧ ಪೊಲೀಸರು ಶನಿವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿಯಾದ ಅಳಿಯ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ.
ಮಲ್ಲಿಕಾರ್ಜುನ್, ರಘು ಬಂಧಿತರು. ಬೊಮ್ಮಕ್ಕನ ಹಳ್ಳಿ ಗ್ರಾಮದ ಬಳಿ ಶುಕ್ರವಾರ ಕತ್ತು ಸೀಳಿದ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿತ್ತು. ದಂಪತಿಯನ್ನು ಅವರ ಅಳಿಯ ಮಂಜುನಾಥ್ ಹಾಗೂ ಆತನ ಕುಟುಂಬ ಸದಸ್ಯರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ಮಗಳು ಹರ್ಷಿತಾ ನೀಡಿದ ದೂರಿನ ಆಧಾರದ ಮೇಲೆ, ಮಂಜುನಾಥ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶನಿವಾರ ಇಬ್ಬರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮಂಜುನಾಥ್ ಹಾಗೂ ಇತರರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ.

ಗುರುವಾರ ಈರುಳ್ಳಿ ಹೊಲಕ್ಕೆ ತೆರಳಿದ್ದ ದಂಪತಿ ಅವರು ಮನೆಗೆ ಬಂದಿರಲಿಲ್ಲ. ರಾತ್ರಿ ಕತ್ತು ಸೀಳಿ ಭೀಕರವಾಗಿ ಕೊಲೆಯಾದ ರೀತಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದವು. ವರ್ಷದ ಹಿಂದೆ ಮಂಜುನಾಥ್ ಹಾಗೂ ಹರ್ಷಿತಾ ಮದುವೆಯಾಗಿತ್ತು. ಕುಡಿದು ಬರುತ್ತಿದ್ದ ಪತಿ, ಪತ್ನಿಯ ಮೇಲೆ ನಿತ್ಯವೂ ಹಲ್ಲೆ ಮಾಡುತ್ತಿದ್ದ. ತಿಂಗಳ ಹಿಂದಷ್ಟೇ ಮಗಳನ್ನು ತಿಪ್ಪಮ್ಮ ಹಾಗೂ ಹನುಮಂತಪ್ಪ ಅವರು ತವರು ಮನೆಗೆ ಕರೆಸಿಕೊಂಡಿದ್ದರು. ಈ ಕಾರಣಕ್ಕೆ ಅತ್ತೆ, ಮಾವನ ಮೇಲೆ ಮಂಜುನಾಥ್‌ಗೆ ದ್ವೇಷವಿತ್ತು. ಇದೇ ದ್ವೇಷದಿಂದ ಕೊಲೆ ಮಾಡಿದ್ದಾನೆ ಎಂದು ಹರ್ಷಿತಾ ದೂರಿನಲ್ಲಿ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ | ನೋಂದಣಿಗೆ ಅವಕಾಶ
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ತುರುವನೂರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
