CHITRADURGA NEWS | 25 MAY 2026
ಹೊಸದುರ್ಗ: ಸೋಲು ಎಂಬುದು ಗೆಲುವಿನ ಮೂಲ. ಪಂದ್ಯದಲ್ಲಿ ಸೋತೆವೆಂದು ಯುವಕರು ಹಿಂಜರಿಯುವ ಅಗತ್ಯವಿಲ್ಲ, ಅದು ಮುಂದಿನ ಗೆಲುವಿಗೆ ಪ್ರೇರಣೆಯಾಗಬೇಕು” ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ನಿಮ್ಮ ಜೀವನದಲ್ಲಿ ನೀವೇ ಚಾಲಕರಾದರೆ ಗುರಿ ತಲುಪಲು ಸಾಧ್ಯ
ಸಾಣೇಹಳ್ಳಿಯ ಬಸವೇಶ್ವರ ಬ್ರಾಂಡ್ ಬಾಯ್ಸ್ ಸಂಘದ ವತಿಯಿಂದ ಆಯೋಜಿಸಲಾಗಿದ್ದ 22 ವರ್ಷ ವಯೋಮಿತಿಯೊಳಗಿನ ಯುವಕರ ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅಂತಿಮ ಪಂದ್ಯ ವೀಕ್ಷಿಸಿ, ಕ್ರೀಡಾಪಟುಗಳನ್ನು ಆಶೀರ್ವದಿಸಿ ಅವರು ಮಾತನಾಡಿದರು.
ಮರಳಿ ಯತ್ನವ ಮಾಡು ಎನ್ನುವಂತೆ ಕ್ರೀಡಾಪಟುಗಳು ನಿರಂತರ ಪ್ರಯತ್ನ ಪಟ್ಟರೆ ಮುಂದೆ ಯಶಸ್ಸು ಖಂಡಿತ ಸಾಧ್ಯ. ಮುಂದಿನ ದಿನಗಳಲ್ಲಿ ಶ್ರೀಮಠ ಮತ್ತು ಬಸವೇಶ್ವರ ಯುವಕ ಸಂಘದ ಸಹಯೋಗದೊಂದಿಗೆ ಮತ್ತಷ್ಟು ಉತ್ತಮವಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು.
ದೂರದ ಊರುಗಳಿಂದ ಬರುವ ಕ್ರೀಡಾಪಟುಗಳಿಗೆ ಉತ್ತಮ ಪ್ರಸಾದ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ಹೆಚ್ಚಿಸುವುದರಿಂದ ಇನ್ನು ಹೆಚ್ಚಿನ ಮತ್ತು ಪ್ರಖ್ಯಾತ ತಂಡಗಳು ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ಭರವಸೆ ನೀಡಿದರು.
ಇದನ್ನೂ ಓದಿ: ಹೊಳಲ್ಕೆರೆ | ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಅಹ್ವಾನ
ಇದೇ ಸಂದರ್ಭದಲ್ಲಿ ಯುವ ಪೀಳಿಗೆಯು ದುಶ್ಚಟಗಳಿಗೆ ಬಲಿಯಾಗುತ್ತಿರುವುದರ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ಶ್ರೀಗಳು, ಕ್ರೀಡಾಪಟುಗಳು ತಮ್ಮ ದೇಹದ ಆರೋಗ್ಯ ಮತ್ತು ನೈತಿಕತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಗೊತ್ತಿದ್ದೋ, ಗೊತ್ತಿಲ್ಲದೆಯೋ ದುಶ್ಚಟಗಳಿಗೆ ಒಳಗಾಗಿದ್ದರೆ, ಈ ಕ್ಷಣದಿಂದಲೇ ಅದರಿಂದ ಮುಕ್ತರಾಗುತ್ತೇನೆ ಎಂಬ ದೃಢ ಸಂಕಲ್ಪವನ್ನು ಪ್ರತಿಯೊಬ್ಬ ಯುವಕನೂ ತನ್ನ ಮನಸ್ಸಿನಲ್ಲಿ ಮಾಡಬೇಕು ಎಂದು ಪ್ರಬಲ ಸಂದೇಶ ನೀಡಿದರು.
ಮಂಗಳೂರು ತಂಡಕ್ಕೆ ಗೆಲುವು:
ಶನಿವಾರ ಸಂಜೆಯಿಂದ ಆರಂಭವಾಗಿದ್ದ ಈ ಪ್ರಸಿದ್ಧ ಪಂದ್ಯಾವಳಿಯಲ್ಲಿ ಒಟ್ಟು 36 ತಂಡಗಳು ಭಾಗವಹಿಸಿದ್ದವು. ಭಾನುವಾರ ನಡೆದ ಅಂತಿಮ ಪಂದ್ಯವು ಮಂಗಳೂರು ಮತ್ತು ತರೀಕೆರೆ ತಾಲೂಕಿನ ಬಾವಿಕೆರೆ ತಂಡಗಳ ನಡುವೆ ಅತ್ಯಂತ ರೋಮಾಂಚನಕಾರಿಯಾಗಿ ನಡೆಯಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮಂಗಳೂರು ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಬಹುಮಾನದ ವಿವರ:
ಪ್ರಥಮ ಬಹುಮಾನ (ರೂ. 15,000) ಮಂಗಳೂರು ತಂಡ, ದ್ವಿತೀಯ ಬಹುಮಾನ (ರೂ. 10,000) ಬಾವಿಕೆರೆ ತಂಡ (ತರೀಕೆರೆ ತಾಲೂಕು), ತೃತೀಯ ಬಹುಮಾನ (ರೂ. 5,000): ನವಣಕೆರೆ ತಂಡ.
ಇದನ್ನೂ ಓದಿ: ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
ವಿಜೇತ ತಂಡಗಳ ನಾಯಕರು ಮತ್ತು ಆಟಗಾರರು ಪೂಜ್ಯ ಶ್ರೀಗಳಿಂದ ಭಕ್ತಿಪೂರ್ವಕವಾಗಿ ಟ್ರೋಫಿಯನ್ನು ಸ್ವೀಕರಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ 36 ತಂಡಗಳ ಕ್ರೀಡಾಪಟುಗಳಿಗೆ ಶ್ರೀಮಠದಿಂದ ಪ್ರಸಾದ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
