CHITRADURGA NEWS | 29 APRIL 2026
ಚಿತ್ರದುರ್ಗ: ಹಳೆಯ ನೆನಪುಗಳ ಮೆಲುಕು, ಸಾಧನೆಯ ಹಾದಿಯಲ್ಲಿರುವ ಪುಟ್ಟ ಪಾದಗಳಿಗೆ ಹಿರಿಯರ ಬೆಂಬಲ ಹಾಗೂ ಗ್ರಾಮದ ತುಂಬೆಲ್ಲ ಪಸರಿಸಿದ ಸಾಂಸ್ಕೃತಿಕ ಕಂಪಿನ ನಡುವೆ ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ‘ಗೆಳೆತನದ ಗಂಗೋತ್ರಿ’ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ-2026’ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಇದನ್ನೂ ಓದಿ: KSRTC ಬಸ್ ಪಲ್ಟಿ | ಪ್ರಯಾಣಿಕರು ಪಾರು
ಕಾರ್ಯಕ್ರಮಕ್ಕೂ ಮುನ್ನ ಬೆಳಗಟ್ಟ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇಗುಲದಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮಂಗಳವಾದ್ಯಗಳ ಘೋಷದೊಂದಿಗೆ ಆರಂಭವಾದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವಾಗ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದು ಕೇವಲ ಮೆರವಣಿಗೆಯಾಗಿರದೆ, ಅಕ್ಷರ ಸಂಸ್ಕೃತಿಯ ವಿಜಯಯಾತ್ರೆಯಂತೆ ಕಂಡುಬಂದಿತು.
ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ದಾರಿಯಾಗಲಿ:
ಗ್ರಾಮದ ಶ್ರೀ ನರಹರಿ ಸದ್ಗುರು ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂಪತ್ ಕುಮಾರ್ ಉದ್ಘಾಟಿಸಿ ಮಾತನಾಡಿ, “ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಗೆಳೆತನದ ಗಂಗೋತ್ರಿ ಸಂಘಟನೆಯು ಜಾತ್ಯತೀತವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಇದನ್ನೂ ಓದಿ: ಒಳಮೀಸಲಾತಿ ಗೊಂದಲ | ಸರ್ಕಾರದ ವಿರುದ್ಧ ಅಸಮಧಾನ
ಕಾರ್ಯಕ್ರಮದ ಸಂಚಾಲಕ ನಾಗರಾಜ್ ಬೆಳಗಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, 1990-91ನೇ ಸಾಲಿನ ವಿದ್ಯಾರ್ಥಿಗಳ ಈ ಸಂಘಟನೆಯು ಸಮಾಜಮುಖಿಯಾಗಿ ಬೆಳೆಯುತ್ತಿದೆ. ನಮ್ಮ ಶಾಲೆಯ ಮಣ್ಣಿನ ಋಣ ತೀರಿಸುವ ಒಂದು ಸಣ್ಣ ಪ್ರಯತ್ನವಿದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ನೀಡುವ ಪುರಸ್ಕಾರ ಅವರ ಮುಂದಿನ ಉನ್ನತ ಸಾಧನೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಡಿ.ಎಲ್. ತಿಮ್ಮಾರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ, ನಗದು ಬಹುಮಾನ ಹಾಗೂ ಪುಸ್ತಕ ವಿತರಿಸಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಮರಳಿ ಬಂದು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಅವರು ಹಾರೈಸಿದರು.
ಸಂಸ್ಕøತಿ-ಶಿಕ್ಷಣ ಅವಿಭಾಜ್ಯ ಅಂಗ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಸಂಸ್ಕೃತಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಗೆಳೆತನದ ಗಂಗೋತ್ರಿ ಸಂಘಟನೆಯು ಸ್ನೇಹದ ಮೂಲಕ ಸಮಾಜದಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚುತ್ತಿದೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರತಿಭೆಗಳಿಗೆ ಆನೆಬಲ ನೀಡುತ್ತವೆ ಎಂದು ಹೇಳಿದರು.
ಇದನ್ನೂ ಓದಿ: ಮೇ.3 ರಂದು ನೀಟ್ ಪರೀಕ್ಷೆ: ಬಿ.ಟಿ. ಕುಮಾರಸ್ವಾಮಿ ಸೂಚನೆ
ಕಾರ್ಯಕ್ರಮದಲ್ಲಿ ಬೆಳಗಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಿ.ಲೋಕೇಶ್, ಮುಖ್ಯೋಪಾಧ್ಯಾಯ ಎಸ್.ಮಂಜುನಾಥ, ಉಪನ್ಯಾಸಕರಾದ ಮಹಮದ್ ಶಕೀಲ್, ಸಂತೋಷ್ ಕುಮಾರ್, ರಾಮು, ಅಜ್ಜಣ್ಣ, ಗೆಳೆತನದ ಗಂಗೋತ್ರಿ ಬಳಗದ ಸದಸ್ಯರು, ಪೋಷಕರು, ಪಿಯು ಕಾಲೇಜು ಮತ್ತು ಪ್ರೌಢಶಾಲೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

