CHITRADURGA NEWS | 28 APRIL 2026
ಚಿತ್ರದುರ್ಗ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-2026) ಮೇ 3 ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿಕೆಗೆ ಡಿ.ಸುಧಾಕರ್ ಪುತ್ರ ಸುಹಾಸ್ ಬೇಸರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೀಟ್ ಪರೀಕ್ಷೆ-2026 ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಡೆಸ್ಕ್, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು.
ಬೇಸಿಗೆಯ ತಾಪ ಹೆಚ್ಚಿರುವುದರಿಂದ ಪರೀಕ್ಷೆಯ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಯಾವುದೇ ಸಿಬ್ಬಂದಿ ಗೈರುಹಾಜರಾದಲ್ಲಿ ಅಥವಾ ಕರ್ತವ್ಯದಲ್ಲಿ ಲೋಪವೆಸಗಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರೀಕ್ಷಾ ದಿನದಂದು ಓಎಂಆರ್ ಭರ್ತಿ ಮಾಡಲು, ಉತ್ತರಗಳನ್ನು ತುಂಬಲು ವಿದ್ಯಾಥಿಗಳಿಗೆ ಪರೀಕ್ಷಾ ಸಂಸ್ಥೆ ವತಿಯಿಂದ ಕಪ್ಪು ಬಾಲ್ ಪೆನ್ ನೀಡಲಾಗುವುದು. ವಿದ್ಯಾರ್ಥಿಗಳು ಈ ಪೆನ್ ಮಾತ್ರ ಬಳಸಬೇಕು. ಬೇರೆ ಯಾವುದೆ ರೀತಿಯ ಜೆಲ್ ಪೆನ್ ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಈ ಯಾವುದೇ ವಸ್ತುಗಳು ಅಭ್ಯರ್ಥಿಯ ಬಳಿ ಕಂಡುಬಂದಲ್ಲಿ, ಅದನ್ನು ‘ಅಕ್ರಮ ಮಾರ್ಗಗಳ ಬಳಕೆ’ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರ ನೇಮಕ:
5 ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪರೀಕ್ಷೆ ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು, ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಪರೀಕ್ಷೆ ನಡೆಯುವ ದಿನ, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗವುದು. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಜೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳು ನಿಷೇಧಾಜ್ಞೆ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
5 ಪರೀಕ್ಷಾ ಕೇಂದ್ರ 2835 ವಿದ್ಯಾರ್ಥಿಗಳು:
ನೀಟ್ ಪರೀಕ್ಷೆ ನೋಡಲ್ ಅಧಿಕಾರಿ ನಾಗಭೂಷಣ್ ಮಾತನಾಡಿ, ಜಿಲ್ಲೆಯಲ್ಲಿ ಚಿತ್ರದುರ್ಗ 3 ಮತ್ತು ಚಳ್ಳಕೆರೆ 2 ಸೇರಿ ಒಟ್ಟು 5 ಪರೀಕ್ಷಾ ಕೇಂದ್ರಗಳಿವೆ. ಒಟ್ಟು 2,835 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಬೆಳಿಗ್ಗೆ 11 ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಹುದು.
ಮಧ್ಯಾಹ್ನ 1:30 ಗಂಟೆಯ ನಂತರ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಿಲು ಅವಕಾಶ ನೀಡುವುದಿಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಒಂದು ಸ್ಥಳದಲ್ಲಿ ಮಾತ್ರ ಪ್ರವೇಶ ಅವಕಾಶ ಕಲ್ಪಿಸಿಕೊಡಲಾಗುವುದು.
ಇದನ್ನೂ ಓದಿ: KSRTC ಬಸ್ ಪಲ್ಟಿ | ಪ್ರಯಾಣಿಕರು ಪಾರು
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಡೆಯಿಂದ ಮೆಟಲ್ ಡಿಡೆಕ್ಟರ್ ಅಳವಡಿಸಲಾಗುತ್ತದೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಿಸ್ಕಿಂಗ್ ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಜೊತೆಗೆ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋಗ್ರಫಿ ಮಾಡಲಾಗುವುದು.
ಮದುವೆಯಾದ ಹೆಣ್ಣು ಮಕ್ಕಳಿಗೆ ತಾಳಿ ಹಾಗೂ ಕಾಲುಂಗುರ ಧರಿಸಿ ಪರೀಕ್ಷೆ ಹಾಜರಾಗಲು ಅವಕಾಶವಿದೆ. ಇದೇ ರೀತಿ ಜನಿವಾರಕ್ಕೂ ವಿನಾಯಿತಿಯಿದೆ. ಬೇಸಿಗೆ ಕಾಲವಾದ್ದರಿಂದ ಹಾಗೂ ವಿದ್ಯುತ್ ಅಭಾವ ಉಂಟಾಗದಂತೆ ಪ್ರತಿ ಕೇಂದ್ರಕ್ಕೆ ರೂ.10,000 ಅನುದಾನದಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದರು.
ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್‌ಗಳು ನಗರದ ರಾಷ್ಟ್ರೀಕೃತ ಬ್ಯಾಂಕ್‌ಗೆ ಆಮಿಸುತ್ತವೆ. ಇಲ್ಲಿಂದ ಪರೀಕ್ಷೆಯ ದಿನದಂದು ಜಿಲ್ಲಾಡಳಿತದ ಮಾರ್ಗಾಧಿಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲಿದ್ದಾರೆ. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಸ್ವೀಕರಿಸಲು ನಗರದ ಕಲಾ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಗಾನಯೋಗಿ ಸಂಗೀತ ಬಳಗದಿಂದ ಸಾಧಕರಿಗೆ ಸನ್ಮಾನ
ಸಭೆಯಲ್ಲಿ ಡಿಡಿಪಿಐ ಮಂಜುನಾಥ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಸಮಾಜ ಕಲ್ಯಾಣ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಹೆಚ್.ದಿವಾಕರ್ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
