CHITRADURGA NEWS | 28 APRIL 2026
ಚಿತ್ರದುರ್ಗ: ನಾವು ಉತ್ಸಾಹಿಗಳಾಗಿದ್ದರೆ ಜೀವನದ ಸವಾಲುಗಳನ್ನು ಸೂಕ್ತವಾಗಿ ನಿಭಾಯಿಸಬಹುದು. ಯಾವತ್ತಿಗೂ ನಮ್ಮಲ್ಲಿನ ಸ್ಫೂರ್ತಿಯನ್ನು ಕಳೆದುಕೊಳ್ಳಬಾರದು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೇ.3 ರಂದು ನೀಟ್ ಪರೀಕ್ಷೆ: ಬಿ.ಟಿ. ಕುಮಾರಸ್ವಾಮಿ ಸೂಚನೆ
ಎಸ್.ಜೆ.ಎಂ.ಐ.ಟಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸ್ಫೂರ್ತಿ-2026 ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಏನಾದರೂ ಸಮಸ್ಯೆ ಬರಬಹುದು. ಮನಸ್ಸು ಮಾಡಿದಲ್ಲಿ ಈ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಇದಕ್ಕೆ ನಮ್ಮಲ್ಲಿ ಉತ್ಸಾಹ ಇರಬೇಕು. ಇದನ್ನೇ ಜೀವಕಳೆ ಎನ್ನುತ್ತಾರೆ. ಜೀವನೋತ್ಸಾಹ ಕಡಿಮೆಯಾಗದಂತೆ ಬದುಕನ್ನು ಕಾಪಾಡಿಕೊಳ್ಳಬೇಕು ಎಂದರು.
ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸೋಲು-ಗೆಲುವನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸಬೇಕು. ಲವಲವಿಕೆ, ಆರೋಗ್ಯದಾಯಿಕವಾಗಿ, ಆಶಾವಾದಿಗಳಾಗಿ ಬದುಕಬೇಕು. ವಿದ್ಯಾರ್ಥಿ ಜೀವನದಲ್ಲಿ ಓದಿನ ಜವಾಬ್ದಾರಿ ಮಾತ್ರ ನಿಮ್ಮ ಮೇಲಿರುತ್ತದೆ. ತಂದೆ ತಾಯಿ ಉಳಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತಾರೆ.
ಶಾಲೆ-ಕಾಲೇಜಿನಲ್ಲಿ ಕಲಿತರಷ್ಟೇ ಕಲಿಕೆಯಲ್ಲ. ಮುಂದೆ ಕಲಿಯುವುದು ಇನ್ನು ಇದೆ. ಪ್ರತಿಭೆಯುಳ್ಳವವರು ಸಮರ್ಪಣಾ ಮನೋಭಾವದವರಾಗಿರುತ್ತಾರೆ. ಇದರಿಂದಲೇ ಅವರು ಸಾಧನೆ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿಕೆಗೆ ಡಿ.ಸುಧಾಕರ್ ಪುತ್ರ ಸುಹಾಸ್ ಬೇಸರ
ನಮ್ಮಲ್ಲಿಯೂ ಪ್ರತಿಭೆಗಳಿವೆ. ಆದರೆ, ಅದಕ್ಕೆ ತಕ್ಕ ಸಾಮಾಜಿಕ ಸಂದರ್ಭಗಳು ಒದಗಿ ಬಂದಿರುವುದಿಲ್ಲ. ಇಂತಹ ಉತ್ಸವಗಳು ನಿಮಗೆ ಉತ್ತಮ ವೇದಿಕೆಯಾಗಿ ಸಂದರ್ಭ ಒದಗಿ ಬರುತ್ತದೆ. ಆಗ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ನಮ್ಮ ಅಭಿರುಚಿ, ಸಂತೋಷಗಳಿಗೆ ಕಾರಣ ಕಂಡುಕೊಂಡು ಉತ್ಸಾಹಿಗಳಾಗಿ ಬದುಕಬೇಕು.
ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಧ್ಯ ಕರ್ನಾಟಕದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಿ ಈ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶ್ರೀಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯವು ಈ ವರ್ಷದಿಂದ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಭರತ್ ಪಿ.ಬಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ಸಾಹದ ಅವಶ್ಯಕತೆಯಿರಬೇಕು. ನಾವು ಸ್ಫೂರ್ತಿ ಯಾವುದರಿಂದ ಪಡೆಯಬೇಕೆನ್ನುವುದು ಪ್ರಶ್ನೆಯಾಗುತ್ತದೆ. ಅನೇಕ ದಾರ್ಶನಿಕರ, ಮಹನೀಯರ ಸಾಧನೆ ನಮಗೆ ಸ್ಫೂರ್ತಿಯಾಗಬೇಕು. ನಮ್ಮಲ್ಲಿನ ಸ್ಫೂರ್ತಿ ಸೆಲೆ ಬತ್ತಬಾರದು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ನಾಲ್ಕು ಗೋಡೆ ನಡುವೆ ಕಲಿತದ್ದು ಜೀವನಕ್ಕೆ ಸಾಕಾಗುವುದಿಲ್ಲ. ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ನಿಮ್ಮಲ್ಲಿನ ನಾಯಕತ್ವ ಗುಣ, ಸಂಘಟನಾ ಶಕ್ತಿ ಇಂತಹ ಕಾರ್ಯಕ್ರಮಗಳಿಂದ ಹೊರಹೊಮ್ಮುತ್ತವೆ. ಇದು ನಿಮ್ಮ ಮುಂದಿನ ಭವಿಷ್ಯದ ಹಾದಿಗೆ ಸಹಕಾರಿಯಾಗುತ್ತದೆ. ವರ್ಷವಿಡೀ ಪಠ್ಯಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡಕ್ಕೆ ಒಳಗಾಗಿರುತ್ತಾರೆ.
ಈ ಒತ್ತಡವನ್ನು ನಿವಾರಿಸಲು ಹಾಗೂ ವಿದ್ಯಾರ್ಥಿಗಳಲ್ಲಿನ ಕ್ರೀಡೆ ಮತ್ತು ಸಾಂಸ್ಕøತಿಕ ಪ್ರತಿಭೆಗಳನ್ನು ಅನಾವರಣಗೊಳಿಸಲು ಸ್ಫೂರ್ತಿ ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರ ಮೂಡಿಸುವುದು, ನಾಯಕತ್ವದ ಗುಣಗಳನ್ನು ಬೆಳೆಸುವುದಾಗಿದೆ. ಸ್ಫೂರ್ತಿ ಕಾರ್ಯಕ್ರಮದ ನೆನಪುಗಳು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಅವಿಸ್ಮರಣೀಯವಾಗಿರಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ಪೂರ್ತಿ-2026ರ ಸಂಚಾಲಕ ಡಾ.ಕೃಷ್ಣಾರೆಡ್ಡಿ, ಕೆ.ಆರ್, ಸಹ ಸಂಚಾಲಕ ಡಾ.ಅರವಿಂದ ಟಿ.ವಿ, ಡಾ.ಕುಮಾರಸ್ವಾಮಿ ಕೆ, ಪ್ರೊ.ಸುಷ್ಮಿತಾ ದೇಬ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದನ್ನೂ ಓದಿ: KSRTC ಬಸ್ ಪಲ್ಟಿ | ಪ್ರಯಾಣಿಕರು ಪಾರು
ವಿದ್ಯಾರ್ಥಿನಿಯರಾದ ಪ್ರಣತಿ ಪಿ.ಕೆ ಪ್ರಾರ್ಥಿಸಿದರು. ಪ್ರೊ.ಜಯದೇವಪ್ಪ ಆರ್ ಎಸ್ ಸ್ವಾಗತಿಸಿ, ಚಿನ್ಮಯ್, ಬಿ.ಬಿ.ಹಾಜಿರಾ ನಿರೂಪಿಸಿದರು. ಪ್ರೊ.ಧನುಷ್ ಎಸ್ ವಂದಿಸಿದರು.
ಸಾಂಪ್ರದಾಯಿಕ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಪಂಚೆ, ಶಲ್ಯ, ಪೇಟ, ಜುಬ್ಬಾ, ಪೈಜಾಮು, ರೇಷ್ಮೆ ಸೀರೆ, ಮೊಗ್ಗಿನ ಜಡೆ ಧರಿಸಿ ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ನಾರಿಯರಂತೆ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ಕುಣಿದು ನಲಿದು ಕ್ಯಾಂಪಸ್‍ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

