CHITRADURGA NEWS | 25 JULY 2026
ಚಿತ್ರದುರ್ಗ: ಮುಂಗಾರು ಮಳೆ ಅಭಾವದಿಂದಾಗಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಶನಿವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಪ್ರಜಾಸೇವೆ ನೂತನ ಇಲಾಖೆ ಪ್ರಾರಂಭ | ಸಿಎಂ ಡಿಕೆಶಿ
ಹಿರಿಯೂರು ತಾಲೂಕು ವ್ಯಾಪ್ತಿಯ ಯರಬಳ್ಳಿ, ವದ್ದಿಕೆರೆ ತಾಳವಟ್ಟಿ, ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಖುದ್ದು ತೆರಳಿ, ಬರ ಪರಿಸ್ಥಿತಿಯಿಂದ ಒಣಗಿರುವ ಬೆಳೆ ಹಾಗೂ ರೈತರ ಸಮಸ್ಯೆ ಆಲಿಸಿದರು.
ಹಿರಿಯೂರಿನಿಂದ ನೇರವಾಗಿ ಯರಬಳ್ಳಿಯ ರೈತ ಮಹಲಿಂಗಯ್ಯ ಅವರ ಜಮೀನಿಗೆ ಭೇಟಿ ನೀಡಿ, ಭೂಮಿ ಸಿದ್ಧತೆ ಮಾಡಿಕೊಂಡಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗದಿರುವುದನ್ನು ವೀಕ್ಷಿಸಿದರು.
ಯರಬಳ್ಳಿ ಗ್ರಾಮದಲ್ಲಿ ಒಟ್ಟು 3,705 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಲ್ಲದೆ ಕೇವಲ 350 ರಿಂದ 400 ಎಕರೆ ಸುಮಾರು ಶೇ.10 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದ ಶೇ.90ರಷ್ಟು ಕ್ಷೇತ್ರದಲ್ಲಿ ಬಿತ್ತನೆ ಮಾಡಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕೋಟೆ ನಾಡಲ್ಲಿ ಸಿಎಂ ರೌಂಡ್ಸ್ | ಜಮೀನುಗಳಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್
ಬಳಿಕ ವದ್ದೀಕೆರೆ ತಾಳವಟ್ಟಿ ಗ್ರಾಮದ ರೈತ ಪಿ.ಕೆ.ಪಾಂಡುರಂಗರೆಡ್ಡಿ ಅವರ ಜಮೀನಿಗೆ ಭೇಟಿ ನೀಡಿದ ಮುಖ್ಯಂತ್ರಿಗಳು, ಅಲ್ಲಿ ಬಿತ್ತನೆಯಾಗಿದ್ದ 48 ದಿನಗಳ ಸೂರ್ಯಕಾಂತಿ ಬೆಳೆ ವೀಕ್ಷಿಸಿದರು.
ಮಳೆಯ ಅಭಾವದಿಂದಾಗಿ ಸಂಪೂರ್ಣ ಭೂಮಿ ಒಣಗಿ ಬಿರುಕು ಬಿಟ್ಟಿದ್ದು, ಬೆಳೆ ಬೆಳವಣಿಗೆ ಕುಂಠಿತಗೊಂಡಿರುವುದು ಕಣ್ಣಾರೆ ಕಂಡರು. ಸ್ಥಳದಲ್ಲಿದ್ದ ರೈತರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಯಾರೂ ಎದೆಗುಂದಬೇಕಾದ ಅಗತ್ಯವಿಲ್ಲ, ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದು ಅಭಯ ನೀಡಿದರು.
ಬೆಳೆ ವಿಮೆ ನೋಂದಣಿಗೆ ರೈತರಿಗೆ ಸಲಹೆ:
ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ಬೆಳೆ ವಿಮೆ ಮಾಡಿಸುವುದರಿಂದ ನಷ್ಟ ಪರಿಹಾರ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರೈತರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 25 | ಹತ್ತಿ ರೇಟ್ ಎಷ್ಟಿದೆ?
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ, ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ನಿಗಮ ಮಂಡಳಿ ಅದ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು, ಜಿ.ಎಸ್.ಮಂಜುನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಮಾಜಿ ಶಾಸಕಿ ಪೂರ್ಣಿಮಾ ಇತರರಿದ್ದರು.
ನೀರು ಕೊಡಿ ಸ್ವಾಮಿ ಸಾಕು:
ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ತೋಟ ಉಳಿಸಿಕೊಳ್ಳಲು ಸಾವಿರಾರು ರೂ. ಖರ್ಚು ಮಾಡುತ್ತಿದ್ದೇವೆ. ನಮಗೆ ಏನಾದರೂ ಮಾಡಿ ಭದ್ರಾ ಮೇಲ್ದಂಡೆ ನೀರು ಕೊಡಿ ಸ್ವಾಮಿ ಎಂದು ವದ್ದಿಕೆರೆಯಲ್ಲಿ ರೈತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಬೆಳೆ ಬೆಳೆಯಲು ಎಷ್ಟು ವೆಚ್ಚವಾಗುತ್ತೆ?
ವದ್ದಿಕೆರೆ ಬಳಿ ರೈತರ ಜಮೀನಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ ವೀಕ್ಷಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರೈತನ ಬಳಿ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಸಿಗಬೇಕೆಂದು ಬರಗೇರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸಂಪೂರ್ಣ ಬಾಡಿ ಹೋಗಿದ್ದ ಸೂರ್ಯಕಾಂತಿಗೆ ಈಗ ಮಳೆ ಬಂದರೆ ಅನುಕೂಲವಾಗುತ್ತದೆಯೇ ಎಂದು ಕೇಳಿದಾಗ ರೈತ ಇಲ್ಲ ಸ್ವಾಮಿ ಕಾಲ ಮುಗಿದು ಹೋಗಿದೆ ಎಂದು ನಿರಾಸೆಯಿಂದ ಪ್ರತಿಕ್ರಿಯಿಸಿದರು.
ಆನಂತರ ಬೆಳೆ ಬೆಳೆಯಲು ಎಷ್ಟು ವೆಚ್ಚವಾಗುತ್ತದೆ ಎಂಬ ಮಾಹಿತಿ ಪಡೆದು, ಬೆಳೆ ವಿಮೆ ಪಾವತಿಸಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿ, ಧೈರ್ಯಗೆಡಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೆಗಲ ಮೇಲೆ ಕೈ ಇಟ್ಟು ಧೈರ್ಯ ಹೇಳಿದರು.
ವದ್ದಿಕೆರೆ ದೇಗುಲಕ್ಕೆ ಸಿಎಂ ಭೇಟಿ:
ವದ್ದಿಕೆರೆಗೆ ತೆರಳಿದ್ದ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪ್ರಸಿದ್ಧ ದೇಗುಲ ವದ್ದಿಕೆರೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ: ಬಾಲ್ಯ ವಿವಾಹ, ಬಲವಂತದ ಅತ್ಯಾಚಾರ | ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಭವರೋಗ ವೈದ್ಯ ಎಂದೇ ಹೆಸರಾಗಿರುವ ವದ್ದಿಕೆರೆ ಸಿದ್ದಪ್ಪನ ದೇವಸ್ಥಾನದ ಮಹಿಮೆ ಕೇಳಿ ಸಿಎಂ ಭಕ್ತಿಯಿಂದ ಪ್ರಾರ್ಥಿಸಿ ತೆರಳಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

