ಮುಖ್ಯ ಸುದ್ದಿ
Competitive Exam; ಆ.27 ರಂದು ಗೆಜೆಟೆಡ್ ಪ್ರೊಬೆಷನರ್ಸ್ ಸ್ಪರ್ಧಾತ್ಮಕ ಪರೀಕ್ಷೆ | ಸಿ.ಸಿ ಕ್ಯಾಮೆರಾ, ಮೊಬೈಲ್ ಜಾಮರ್ ಅಳವಡಿಕೆ

CHITRADURGA NEWS | 21 AUGUST 2024
ಚಿತ್ರದುರ್ಗ: ಸ್ಪರ್ಧಾತ್ಮಕ ಪರೀಕ್ಷೆ(Competitive Exam) ನಿರ್ವಹಣೆ ಕಾರ್ಯ ಅತಿ ಸೂಕ್ಷ್ಮವಾದದ್ದು, ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಇದರಲ್ಲಿ ಅಡಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆಯಿಂದ, ಪ್ರಾಮಾಣಿಕವಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.
ಕ್ಲಿಕ್ ಮಾಡಿ ಓದಿ: Rain problem: ಆಯಿಲ್‌ಸಿಟಿಗೆ ವರುಣಾಘಾತ | ನೀರಿನಲ್ಲೇ ನಿಂತು ರಾತ್ರಿ ಕಳೆದ ಜನರು

ಆಗಸ್ಟ್ 27 ರಂದು ಕೆ.ಪಿ.ಎಸ್.ಸಿ ವತಿಯಿಂದ ನಡೆಯಲಿರುವ ಗೆಜೆಟೆಡ್ ಪ್ರೊಬೆಷನರ್ಸ್ ಸ್ಪರ್ಧಾತ್ಮಕ ಪರೀಕ್ಷೆ ಕುರಿತು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತಮವಾಗಿ ನಡೆಸಲಾಗಿದೆ. ಈ ಬಾರಿಯೂ ಯಾವುದೇ ಲೋಪದೋಷಗಳು ಬಾರದಂತೆ ಪರೀಕ್ಷೆ ಕಾರ್ಯ ನಿರ್ವಹಿಸಬೇಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಆಸನ, ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು.
ಮಳೆಗಾಲವಾದ್ದರಿಂದ ಕೊಠಡಿಗಳಲ್ಲಿ ಮಳೆ ನೀರಿನಿಂದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಬಂಡಲ್‍ಗಳನ್ನು ಕೊಂಡೊಯ್ಯಲು ನೇಮಿಸಿರುವ ಮಾರ್ಗಾಧಿಕಾರಿಗಳು ಸರಿಯಾದ ಸಮಯಕ್ಕೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು.
ಕ್ಲಿಕ್ ಮಾಡಿ ಓದಿ: Heavy rain: ಚಿತ್ರದುರ್ಗದ ಈ ಗ್ರಾಮಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ | ತುಂಬಿ ಹರಿದ ಹಳ್ಳಕೊಳ್ಳ
ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಓಎಂಆರ್ ಬಂಡಲ್‍ಗಳನ್ನು ಅಂಚೆ ಮೂಲಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡಬೇಕು. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿ ಇರುವ ಅಂಚೆ ಕಚೇರಿಗಳು ಓಎಂಆರ್ ಬಂಡಲ್‍ಗಳು ತಲುಪುವವರೆಗೂ ತಪ್ಪದೇ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಸಿ.ಸಿ ಟಿವಿ ಹಾಗೂ ಮೊಬೈಲ್ ಜಾಮರ್ ಅಳವಡಿಕೆ:
ಕರ್ನಾಟಕ ಲೋಕಸೇವಾ ಆಯೋಗದಿಂದಲೇ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿವಿ ಹಾಗೂ ಮೊಬೈಲ್ ಜಾಮರ್ ಅಳವಡಿಸಲಾಗುವುದು. ಪ್ರತಿ ಕೊಠಡಿಯ ಸಿಸಿ ಟಿವಿ ದೃಶ್ಯಗಳನ್ನು ವೀಕ್ಷಣೆ ಮಾಡಲಾಗುತ್ತದೆ.
ಇದರೊಂದಿಗೆ ಕೊಠಡಿ ಮೇಲ್ವಿಚಾರಕರಿಗೂ ಬಾಡಿ ಕ್ಯಾಮರ ಹಾಕಿಕೊಳ್ಳುವುದನ್ನು ಕಡ್ಡಾಯವಾಗಿಸಿದೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ಉಪಯೋಗಿಸಿ ಕೆಲ ಅಭ್ಯರ್ಥಿಗಳು ಅಕ್ರಮ ಎಸಗಲು ಪ್ರಯತ್ನಿಸಿರುವ ಬಗ್ಗೆ ವರದಿಗಳಿವೆ, ಹೀಗಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಪಾಸಣೆಗೆ ಒಳಪಡಿಸಬೇಕು.
ಲೋಕಸೇವಾ ಆಯೋಗ ನೀಡಿರುವ ಪರೀಕ್ಷಾ ಕೈಪಿಡಿಯ ಅನುಸಾರ ಪರೀಕ್ಷಾ ಕಾರ್ಯದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕಾರ್ಯಗಳ ಬಗ್ಗೆ ಕೊಠಡಿ ಮೇಲ್ವಿಚಾರಕರಿಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ:
ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ದೃಷ್ಠಿಯಿಂದ ಅ. 27 ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಸೆಕ್ಷನ್ 114 ವಿಧಿಸಿ ನಿಷೇದಾಜ್ಞೆ ಜಾರಿ ಮಾಡಲಾಗುವುದು. ಈ ಕೇಂದ್ರಗಳ ಅಕ್ಕಪಕ್ಕದಲ್ಲಿ ಕಾರ್ಯನಿರ್ವಹಿಸುವ ಜೆರಾಕ್ಸ್, ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸೆಂಟರ್‍ಗಳನ್ನು ಮುಚ್ಚಬೇಕು.
ಕ್ಲಿಕ್ ಮಾಡಿ ಓದಿ: sirigere mata: ಸುಮ್ಮನಿದ್ದರೆ ಒಳಿತು ತಿರುಗೇಟು ನೀಡುವ ಕಾಲ ದೂರವಿಲ್ಲ | ಷಡ್ಯಂತ್ರ ತಂಡಕ್ಕೆ ಸಿರಿಗೆರೆ ಭಕ್ತರ ಖಡಕ್ ಸಂದೇಶ
ಒಂದು ವೇಳೆ ಯಾವುದಾದರು ಜೆರಾಕ್ಸ್ ಹಾಗೂ ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸೆಂಟರ್ ತೆರೆದಿದ್ದರೆ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಿ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಅಗತ್ಯ ಸೂಚನಾ ಫಲಕ ಅಳವಡಿಸಲು ಸೂಚನೆ:
ಪರೀಕ್ಷೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸುತ್ತಾರೆ. ಅಭ್ಯರ್ಥಿಗಳಿಗೆ ಗೊಂದಲವಾಗದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಬೇಕು.
ಅಭ್ಯರ್ಥಿಗಳ ನೊಂದಣಿ ಸಂಖ್ಯೆ, ಕೊಠಡಿ ಸಂಖ್ಯೆಗಳ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಪರೀಕ್ಷೆ ಆರಂಭದಿಂದ ಹಿಡಿದು ಮುಕ್ತಾಯದವರೆಗೆ ಅಭ್ಯರ್ಥಿಗಳಿಗೆ ಸಮಯದ ಮಾಹಿತಿ ನೀಡಲು ಬೆಲ್ ಬಾರಿಸಬೇಕು ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಿದರು.
ಸೂಕ್ತ ಪೊಲೀಸ್ ಭದ್ರತೆ :
ಅತ್ಯಂತ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ಸಂಭವ ಇರುತ್ತದೆ. ಆದ್ದರಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತಪಾಸಣೆ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು.
ಕ್ಲಿಕ್ ಮಾಡಿ ಓದಿ: Rain..Rain: ತುಂಬಿ ತುಳುಕಿದ ತಳಕು | ಕುಸಿದವು ಮನೆ, ಹೆಕ್ಟೇರ್‌ಗಟ್ಟಲೇ ಬೆಳೆ ನಾಶ
ಪರೀಕ್ಷಾ ಕೇಂದ್ರಗಳಿಗೆ ಸುತ್ತ ಹಾಗೂ ಮಾರ್ಗಾಧಿಕಾರಿಗಳ ತಂಡಕ್ಕೆ ಪೊಲೀಸರನ್ನು ನೇಮಿಸಿ ಭದ್ರತೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ತಿಳಿಸಿದರು.
ಬಸ್ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಪರೀಕ್ಷಾ ಕೇಂದ್ರಗಳ ಮಾಹಿತಿ:
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಾರೆ. ಇವರಿಗೆ ಅನುಕೂಲವಾಗುವಂತೆ ಬಸ್ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಪರೀಕ್ಷಾ ಕೇಂದ್ರಗಳ ಮಾಹಿತಿ ಪ್ರದರ್ಶಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
24 ಪರೀಕ್ಷಾ ಕೇಂದ್ರ 8098 ಅಭ್ಯರ್ಥಿಗಳು:
ಪರೀಕ್ಷೆಯು ಆ. 27 ರಂದು ಬೆ. 10 ರಿಂದ ಮ. 12 ರವರೆಗೆ ಪತ್ರಿಕೆ-01 ಹಾಗೂ ಮ. 02 ರಿಂದ ಸಂಜೆ 04 ರವರೆಗೆ ಪತ್ರಿಕೆ-02 ರ ಪರೀಕ್ಷೆ ನಡೆಯಲಿದೆ. ನಗರದಲ್ಲಿ 24 ಪರೀಕ್ಷಾ ಕೇಂದ್ರಗಳು ಇದ್ದು, ಒಟ್ಟು 8098 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇದರಲ್ಲಿ 155 ಅಂಗವಿಕಲ ಅಭ್ಯರ್ಥಿಗಳು ಇದ್ದಾರೆ. 10 ಅಂಧ ವಿದ್ಯಾರ್ಥಿಗಳಿಗೆ ಸ್ಕ್ರೈಬ್ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದಿಂದ ಪರೀಕ್ಷಾ ಮಾಹಿತಿ ಕೈಪಿಡಿ ಬಂದಿದೆ. ಇದರ ಅನುಸಾರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
