
CHITRAUDRGA NEWS | 18 APRIL 2026
ಚಿತ್ರದುರ್ಗ: ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಸಂವಿಧಾನದ ಪೀಠಿಕೆಗೆ ಮಾತ್ರ ಸೀಮಿತವಾಗಿಲ್ಲ, ಅವರು ಇಡೀ ಸಂವಿಧಾನಕ್ಕೆ ಸೀಮಿತವಾಗಿದ್ದಾರೆ. ಕೇವಲ ಪೀಠಿಕೆಯನ್ನು ವಾಚಿಸಿ ಅದನ್ನು ಜೀವನದಲ್ಲಿ ಆಚರಣೆಗೆ ತರದಿದ್ದರೆ ಅಂತಹ ವಾಚನಕ್ಕೆ ಅರ್ಥವೇ ಇಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.
ಇದನ್ನೂ ಓದಿ: ದಿ ಸ್ಟೆಪ್ಪಿಂಗ್ ಸ್ಟೋನ್ ಸ್ಕೂಲ್ | ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

ನಗರದ ವಕೀಲರ ಭವನದಲ್ಲಿ ಚಿತ್ರದುರ್ಗ ವಕೀಲರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಪೀಠಿಕೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ ಮತ್ತು ಅದನ್ನು ವಾಚಿಸಲಾಗುತ್ತಿದೆ. ಆದರೆ ಬರಿ ಪೀಠಿಕೆ ಓದಿದರೆ ಸಾಲದು, ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾವು ಯಾವಾಗಲೂ ನಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆಯೇ ಹೊರತು, ಸಂವಿಧಾನದ ಭಾಗ 4ಎ ನಲ್ಲಿ ಉಲ್ಲೇಖಿಸಲಾದ ಮೂಲಭೂತ ಕರ್ತವ್ಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ದೇಶಕ್ಕೆ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆಯೇ ಮತ್ತು ಭ್ರಾತೃತ್ವವನ್ನು ಬೆಳೆಸುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಮಧ್ಯಂತರ ಪರಿಹಾರದ ಚೆಕ್ ವಿತರಣೆ
ಅಂಬೇಡ್ಕರ್ ಅವರು ನೀಡಿದ ಸಂದೇಶಗಳನ್ನು ದೈನಂದಿನ ಜೀವನದಲ್ಲಿ ಪಾಲಿಸಿದಾಗ ಮಾತ್ರ ಆ ಹಿರಿಯ ಚೇತನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗುತ್ತದೆ. ಕೇವಲ ವರ್ಷಕ್ಕೊಮ್ಮೆ ಕಾರ್ಯಕ್ರಮಗಳನ್ನು ನಡೆಸಿ ಅವರನ್ನು ನೆನೆಯುವುದಕ್ಕಿಂತ, ಅವರ ಆದರ್ಶಗಳನ್ನು ಅನುಸರಿಸುವುದು ಮುಖ್ಯ ಎಂದು ಕರೆ ನೀಡಿದರು.
ಚಿತ್ರದುರ್ಗ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ, ನಾಗರಿಕರು ಕೇವಲ ಹಕ್ಕುಗಳಿಗಾಗಿ ಹೋರಾಡದೆ, ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಿದರೆ ಮಾತ್ರ ಭಾರತ ವಿಶ್ವಮಟ್ಟದಲ್ಲಿ ಮೊದಲ ಸ್ಥಾನಕ್ಕೇರಲು ಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಅವರು ಶ್ರೇಷ್ಠ ಆರ್ಥಿಕ ತಜ್ಞರೂ ಆಗಿದ್ದರು. 1923ರಲ್ಲಿ ಅವರು ಇಂಗ್ಲೆಂಡ್‍ನಲ್ಲಿ ಮಂಡಿಸಿದ ಆರ್ಥಿಕ ಪ್ರಬಂಧ ಮತ್ತು ರೂಪಾಯಿಯ ಮೌಲ್ಯದ ಕುರಿತಾದ ಅವರ ಚಿಂತನೆಗಳೇ 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮೂಲ ಪ್ರೇರಣೆಯಾದವು ಎಂದು ತಿಳಿಸಿದರು.
ಇದನ್ನೂ ಓದಿ: ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮದೇವಿ ಜಾತ್ರೆ
ದೇಶದ ಸಮೃದ್ಧಿಗಾಗಿ ನದಿಗಳ ಜೋಡಣೆಯಾಗಬೇಕು ಎಂಬ ಕನಸನ್ನು ಅಂಬೇಡ್ಕರ್ ಅಂದೇ ಕಂಡಿದ್ದರು. ಮಹಿಳೆಯರು ಮತ್ತು ಪುರುಷರಿಗೆ ಸಮಾನ ಶಿಕ್ಷಣ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಪ್ರತಿಪಾದಿಸಿದ್ದರು ಎಂದು ತಿಳಿಸಿದ ಅವರು, ಸುಮಾರು 40 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ವೈವಿಧ್ಯಮಯ ಸಂಸ್ಕøತಿಗೆ ಅನುಗುಣವಾಗಿ ಸಮಾನತೆಯ ಸಂವಿಧಾನ ನೀಡಿದ ಮಹಾನ್ ನಾಯಕನನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಣ್ಣ ಸೋಮಶೇಖರ್, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಹೆಚ್.ಗಂಗಾಧರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ರಶ್ಮಿ ಎಸ್.ಮರಡಿ, ವಕೀಲರ ಸಂಘದ ಉಪಾಧ್ಯಕ್ಷೆ ಕೆ.ಎಸ್.ಸಾವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ, ವಕೀಲರಾದ ಬಿಸ್ನಳ್ಳಿ ಜಯಣ್ಣ, ಟಿ.ಹೆಚ್.ಹನುಮಂತಪ್ಪ, ಚಂದ್ರಪ್ಪ ಸೇರಿದಂತೆ ವಕೀಲರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
