CHITRADURGA NEWS | 29 MARCH 2026
ಚಿತ್ರದುರ್ಗ: ಚಿತ್ರದುರ್ಗದ ಬಹುತ್ವವೇ ಈ ನೆಲದ ನಿಜವಾದ ಶಕ್ತಿ. ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಯಾವುದೇ ಒಂದು ನಿರ್ದಿಷ್ಟ ಜಾತಿ ಬಲಿಷ್ಠವಾಗಿಲ್ಲದಿರುವುದು ಈ ನೆಲದ ಹೆಮ್ಮೆಯ ವಿಷಯ ಎಂದು ಸಂಸ್ಕøತಿ ಚಿಂತಕ ಡಾ.ಎಸ್.ನಟರಾಜ ಬೂದಾಳು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದವನಿಗೆ ಜೈಲು ಶಿಕ್ಷೆ
ನಗರದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗ, ಆಶಯ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜೆ.ಕರಿಯಪ್ಪ ಮಾಳಿಗೆ ನಡೆ-ನುಡಿ, ಗೌರವಾರ್ಪಣೆ ಮತ್ತು ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಜಿಲ್ಲೆಯಲ್ಲಿ ಬೇಡರು, ಬೆಸ್ತರು, ಉಪ್ಪಾರರು, ಗಾಣಿಗರು, ಕುರುಬರು, ದಲಿತರು ಹಾಗೂ ಮುಸ್ಲೀಮರು ಸೇರಿದಂತೆ ಅನೇಕ ಸಮುದಾಯಗಳು ಸಮಾನವಾಗಿ ಬೆರೆತು ಬಾಳುತ್ತಿವೆ. ಈ ಬಹುತ್ವವೇ ಇಲ್ಲಿನ ಜನರನ್ನು ಒಟ್ಟಾಗಿ ಹಿಡಿದಿಟ್ಟಿದೆ ಎಂದರು.
ಈ ನೆಲದ ತತ್ವಪದಕಾರರ ಅಂತರಂಗದ ಒಡನಾಟದೊಂದಿಗೆ, ಮಣ್ಣಿನ ಸತ್ವ ಮತ್ತು ಜೀವತಂತುವನ್ನು ಮೀಟಿದ ಅಪರೂಪದ ಸಂಶೋಧಕ ಡಾ.ಜೆ.ಕರಿಯಪ್ಪ ಮಾಳಿಗೆ. ತತ್ವಪದಕಾರರ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಾ.ಕರಿಯಪ್ಪ ಮಾಳಿಗೆ ಈ ನೆಲದ ನಿಜವಾದ ಪ್ರತಿನಿಧಿ. ಚಿತ್ರದುರ್ಗದ ನೈಜ ಸತ್ವವನ್ನು ಅರ್ಥಮಾಡಿಕೊಂಡಿರುವ ಅವರು, ಈ ಮಣ್ಣಿನ ಸಾಂಸ್ಕøತಿಕ ಬೇರುಗಳನ್ನು ಮೀಟಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಟೋ LPG ಕೊರತೆ ಇಲ್ಲ | ಆಹಾರ ಇಲಾಖೆ ಸ್ಪಷ್ಟನೆ
ತತ್ವಪದಗಳ ಸಂಗ್ರಹ ಯೋಜನೆಯಲ್ಲಿ ಕರಿಯಪ್ಪ ಮಾಳಿಗೆ ಅವರು ತೋರಿದ ಶ್ರದ್ಧೆಯಿಂದಾಗಿ ಹೊನ್ನೆನಹಳ್ಳಿ ದಾಸಗಿರಿ ಅಜ್ಜ, ಸಕ್ಕರೆಪ್ಪ ತಾತ, ವೀರಪ್ಪ ತಾತ ಹಾಗೂ ಕರೀಂ ಪೀರ ಅವರಂತಹ ನೂರಾರು ಅಜ್ಞಾತ ತತ್ವಪದಕಾರರು ಮತ್ತು ತತ್ವ ಸಾಧಕರು ಸಾಂಸ್ಕøತಿಕ ಲೋಕಕ್ಕೆ ಪರಿಚಯವಾಗಿದ್ದಾರೆ ಎಂದು ಶ್ಲಾಘಿಸಿದರು.
ಕಥೆಗಾರ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಬರವಣಿಗೆ ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಬದುಕಿನ ನಡೆಯನ್ನೇ ಪ್ರತಿಬಿಂಬಿಸುವ ಕನ್ನಡಿಯಾಗಬೇಕು. ಕರಿಯಪ್ಪ ಮಾಳಿಗೆ ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿವೆ ಎಂದು ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ‘ಗ್ರಾಮ ಚರಿತ್ರೆ’ ಮತ್ತು ‘ಗ್ರಾಮ ಕೋಶ’ ಸಿದ್ಧಪಡಿಸುವಲ್ಲಿ ಕರಿಯಪ್ಪ ಅವರ ಶ್ರಮ ಅಪಾರವಾದುದು. ಕರ್ನಾಟಕದ ಪ್ರತಿ ಹಳ್ಳಿಯ ಅಸ್ಮಿತೆ ನಾಶವಾಗುವ ಮೊದಲೇ ಅವುಗಳನ್ನು ದಾಖಲಿಸಬೇಕೆಂಬ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳ ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು ಎಂದರು.
ಇದನ್ನೂ ಓದಿ: ರೈತ ಸಂಘದ ಭೀಮಸಮುದ್ರ ಶಾಖೆಗೆ ಚಾಲನೆ | ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ವೀರೇಂದ್ರ ಪಪ್ಪಿ ಭಾಗೀ
ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಮತ್ತು ಬದುಕಿನ ಹಾದಿ ಎರಡರಲ್ಲೂ ಡಾ.ಜೆ.ಕರಿಯಪ್ಪ ಮಾಳಿಗೆ ಹಾಕಿಕೊಟ್ಟಿರುವ ಹೆಜ್ಜೆಗುರುತುಗಳು ಪ್ರಭಾವಶಾಲಿಯಾಗಿವೆ. ಸಂಶೋಧನೆಯು ಕೇವಲ ಅಂಕಿ-ಅಂಶಗಳ ಸಂಗ್ರಹವಾಗದೆ, ಆ ನೆಲದ ಮಣ್ಣಿನ ಗುಣ, ಜನರ ಆಹಾರ ಪದ್ಧತಿ ಮತ್ತು ಅವರು ಕಟ್ಟುಕೊಂಡಿರುವ ತಾತ್ವಿಕ ಸತ್ವದ ಶೋಧನೆಯಾಗಬೇಕು ಎಂದು ತಿಳಿಸಿದರು.
ಕರಿಯಪ್ಪ ಮಾಳಿಗೆ ಅವರ ಒಡನಾಟದ ಕುರಿತು ಕವಿ ಚಂದ್ರಶೇಖರ್ ತಾಳ್ಯ ಮಾತನಾಡಿ, ಕರಿಯಪ್ಪ ಮಾಳಿಗೆ ನಿಜವಾದ “ನೆಲದ ಮಗ’ನಾಗಿದ್ದು, ಮಣ್ಣಿನ ಗುಣ ಮತ್ತು ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಇಂದಿನ ಕಾಲದಲ್ಲಿ ಮಾನವೀಯ ಸಂಬಂಧಗಳು ಹಳಸುತ್ತಿರುವಾಗ, ಮಾಳಿಗೆ ಅವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ನಿರ್ಮಲ ಪ್ರೀತಿ ಮತ್ತು ಗೌರವ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಥೆಗಾರ ಗಂಗಾಧರ್, ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ, ಎಂ.ಎನ್.ಯೋಗೇಶ್ ಮಾತನಾಡಿದರು.
ಇದನ್ನೂ ಓದಿ: ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ
ಕಾರ್ಯಕ್ರಮದಲ್ಲಿ ಉದ್ಯಮಿ ಪಿ.ವಿ.ಅರುಣ್ ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ವಿ ಅಪ್ಪು, ನಿರ್ದೇಶಕ ವೀರೇಂದ್ರ ಕುಮಾರ್ ಕೋಗುಂಡೆ ಮಠ, ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು, ಪತ್ರಕರ್ತರಾದ ಮಹೇಶ್ ಬಾಬು, ಕೆ.ಪಿ.ಓಂಕಾರಮೂರ್ತಿ, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿಜಯ್ ಕುಮಾರ್, ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
