
CHITRADURGA NEWS | 22 FEBRUARY 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ನೆಲಕ್ಕೆ ನೀರು ಹರಿಯುವ ಮುನ್ನ ಜಿಲ್ಲೆಯ ಸಾವಿರಾರು ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಒತ್ತಾಯಿಸಿದರು.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ಫೆ.24 ರಿಂದ ಬೆಂಬಲ ಬೆಲೆಯಡಿ ರಾಗಿ ಖರೀದಿ

ಪ್ರಜಾಶಕ್ತಿ ಟ್ರಸ್ಟ್ ಮತ್ತು ಜಿಲ್ಲಾ ಬಗರ್ ಹುಕುಂ, ಅರಣ್ಯ ಹಕ್ಕು ಸಾಗುವಳಿದಾರರ ಹೋರಾಟ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ದಶಕಗಳ ಕನಸಾದ ಭದ್ರಾ ಯೋಜನೆ ನನಸಾಗುತ್ತಿರುವುದು ಸಂತೋಷದ ವಿಷಯ. ಆದರೆ, ಕಳೆದ 30-40 ವರ್ಷಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಭೂರಹಿತ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಾಗುವಳಿದಾರರಿಗೆ ಈ ಯೋಜನೆಯಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಕೊಡದೆ ಭದ್ರೆ ಹರಿದು ಬಂದಲ್ಲಿ ಉಪಯೋಗವಾದರೂ ಏನೆಂದರು. ಜಿಲ್ಲೆಯಲ್ಲಿ ಭೂಮಿ ಹಕ್ಕಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ.
ಫಾರಂ ನಂಬರ್ 50, 53 ಮತ್ತು 57ರ ಅಡಿಯಲ್ಲಿ ಒಟ್ಟು 1,82,989 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೇವಲ 29,452 ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. ಜಿಲ್ಲಾಡಳಿತವು ಕೇವಲ 7,380 ಅರ್ಜಿಗಳು ಬಾಕಿ ಇವೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ 1,46,135 ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಇವೆ ಎಂದು ಕಾಂತರಾಜ್ ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: PDO ಹುದ್ದೆ B ಗ್ರೂಪ್‌ಗೆ ಉನ್ನತೀಕರಿಸಲು ಆಗ್ರಹ | ಚಿತ್ರದುರ್ಗದಲ್ಲಿ ಪೂರ್ವಭಾವಿ ಸಭೆ
ಕಳೆದ ಎರಡು ದಶಕಗಳಿಂದ ಬಗರ್ ಹುಕುಂ ಸಾಗುವಳಿದಾರರು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸಮಸ್ಯೆ ನಿವಾರಣೆ ಮಾಡಿ ಹಕ್ಕು ಪತ್ರ ನೀಡಲಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಕ್ಕು ಪತ್ರ ನೀಡಬೇಕು. ಇಲ್ಲವಾದಲ್ಲಿ ಹೋರಾಟವ ಉಗ್ರ ರೂಪಕ್ಕೆ ಕೊಂಡೊಯ್ಯುವ ಸಾಧ್ಯತೆಗಳ ಕುರಿತು ಆಲೋಚಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಶಕ್ತಿ ಟ್ರಸ್ಟ್‌ನ ಬೋರಯ್ಯ ಮಾತನಾಡಿ, 2013ರಿಂದ 2016ರವರೆಗೆ ಸಲ್ಲಿಕೆಯಾದ 5,573 ಅರ್ಜಿಗಳಲ್ಲಿ ಕೇವಲ 347 ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಇಲ್ಲಿಯೂ 4,612 ಅರ್ಜಿಗಳು ಬಾಕಿ ಇದ್ದರೂ, ಅಧಿಕಾರಿಗಳು ಕೇವಲ 614 ಅರ್ಜಿಗಳು ಮಾತ್ರ ಬಾಕಿ ಇವೆ ಎಂದು ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಸುಮಾರು 1.40 ಲಕ್ಷ ಎಕರೆ ಸರ್ಕಾರಿ ಜಮೀನು ಲಭ್ಯವಿದ್ದರೂ, ಅದನ್ನು ಸೋಲಾರ್ ಪಾರ್ಕ್ ಅಥವಾ ಬಲಾಢ್ಯರಿಗೆ ನೀಡಲಾಗುತ್ತಿದೆ. ಆದರೆ, ಬಡ ಸಾಗುವಳಿದಾರರು ಮಾತ್ರ ಹಕ್ಕುಪತ್ರವಿಲ್ಲದೆ ಬರಿಗೈಯಲ್ಲಿದ್ದಾರೆ. ಇವರಿಗೆ ಭೂಮಿ ಹಂಚಿಕೆ ಮಾಡಿ ಎಂದರೆ ಅಧಿಕಾರಿಗಳು ಸಲ್ಲದ ಸಬೂಬು ಹೇಳುತ್ತಿದ್ದಾರೆ.
ಇದನ್ನೂ ಓದಿ: GR ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 16 ಲಕ್ಷ ವೆಚ್ಚದಲ್ಲಿ ಸಭಾಂಗಣ ನಿರ್ಮಾಣ | ಹಳೇ ವಿದ್ಯಾರ್ಥಿಗಳ ಕೊಡುಗೆ
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ಸಾಗುವಳಿದಾರರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಸುರೇಶ್, ಗೋಪಾಲಸ್ವಾಮಿ ನಾಯಕ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
