
CHITRADURGA NEWS | 22 FEBRUARY 2026
ಚಿತ್ರದುರ್ಗ: ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಹಚ್ಚುವ ಅಥವಾ ಭ್ರೂಣಹತ್ಯೆ ಮಾಡುವ ವೈದ್ಯರು, ಸ್ಕ್ಯಾನಿಂಗ್ ಸೆಂಟರ್‌ಗಳು ಹಾಗೂ ಗರ್ಭಿಣಿಯರಿಗೆ ಒತ್ತಾಯಿಸುವ ಸಂಬಂಧಿಕರು ಮತ್ತು ದಲ್ಲಾಳಿಗಳ ವಿರುದ್ಧ ಮಾಹಿತಿ ನೀಡುವ ಸಾರ್ವಜನಿಕರಿಗೆ ₹1 ಲಕ್ಷ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಇದನ್ನೂ ಓದಿ: ಸಾಗುವಳಿದಾರರಿಗೆ ಭೂಮಿಯ ಹಕ್ಕೇ ಸಿಗದಿದ್ದಾಗ ಭದ್ರಾ ನೀರು ಹರಿದು ಏನು ಪ್ರಯೋಜನೆ | ಬಿ.ಕಾಂತರಾಜ್

ನಗರದ ತೋಟಗಾರಿಕೆ ಇಲಾಖೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಅಕ್ರಮಗಳ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡುವ ಮಾಹಿತಿದಾರರಿಗೆ ಈ ಪುರಸ್ಕಾರ ನೀಡಲಾಗುವುದು ಎಂದು ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ ಬಾಲ ಗರ್ಭಿಣಿಯರಾಗದಂತೆ ನಿಗಾ ವಹಿಸಬೇಕು. ಆ ಮೂಲಕ ತಾಯಿ ಮರಣ ಮತ್ತು ಶಿಶು ಮರಣದಂತಹ ಘಟನೆಗಳನ್ನು ತಪ್ಪಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ಫೆ.24 ರಿಂದ ಬೆಂಬಲ ಬೆಲೆಯಡಿ ರಾಗಿ ಖರೀದಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ.ರೇಣುಪ್ರಸಾದ್ ಮಾತನಾಡಿ, “ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ”ವಾಗಿದ್ದು, “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ” ಎಂಬ ಆಶಯದೊಂದಿಗೆ ಸಮಾಜ ಬೆಳೆಯಬೇಕು ಎಂದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಡಿ.ಎಂ. ಅಭಿನವ ಮಾತನಾಡಿ, ಹೆಣ್ಣು ಸಂತಾನ ಕಡಿಮೆಯಾದಂತೆ ಮುಂದೊಂದು ದಿನ ಮನುಕುಲದಲ್ಲಿ ಭಾರಿ ಅಘಾತ ಸಂಭವಿಸಲಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಬಲತ್ಕಾರ ಹಾಗೂ ದೌರ್ಜನ್ಯಗಳಾಗದಂತೆ ತಡೆಯಲು ಹೆಣ್ಣು ಸಂತಾನವನ್ನು ಹೆಚ್ಚಿಸಿ ಲಿಂಗಾನುಪಾತದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಅವರು ತಾಯಿ ಮಕ್ಕಳ ಆರೋಗ್ಯ, ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಹಾಗೂ ವಿಶೇಷವಾಗಿ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: PDO ಹುದ್ದೆ B ಗ್ರೂಪ್‌ಗೆ ಉನ್ನತೀಕರಿಸಲು ಆಗ್ರಹ | ಚಿತ್ರದುರ್ಗದಲ್ಲಿ ಪೂರ್ವಭಾವಿ ಸಭೆ
ಕೀಟಜನ್ಯ ರೋಗಗಳ ಹತೋಟಿಗೆ ಸೊಳ್ಳೆಯ ಮರಿಗಳು ಹಾಗೂ ಗಪ್ಪಿ ಮೀನುಗಳ ಪ್ರದರ್ಶನದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು. ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾಹಿತಿಯ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಅಕ್ಷತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ, ರವಿಶಂಕರ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
