ಹೊಳಲ್ಕೆರೆ
ರೈತರಿಗೆ ಮೊದಲು ಉಚಿತ ವಿದ್ಯುತ್ ನೀಡಿದ್ದು ಎಸ್.ಬಂಗಾರಪ್ಪ | ಸಚಿವ ಡಿ.ಸುಧಾಕರ್

CHITRADURGA NEWS | 27 JANUARY 2025
ಹೊಳಲ್ಕೆರೆ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ದೇಶದಲ್ಲಿಯೇ ಮೊದಲ ಬಾರಿಗೆ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
Also Read: ಸೂಕ್ಷ್ಮ ನೀರಾವರಿ ತಾಂತ್ರಿಕತೆ ಕುರಿತು ರೈತರಿಗೆ ತರಬೇತಿ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಹೋಬಳಿ ಅಜ್ಜಪ್ಪನಹಳ್ಳಿ ಗ್ರಾಮದಲ್ಲಿ 75 ವರ್ಷದ ಗಣರಾಜ್ಯೋತ್ಸವ, ಅಮೃತ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 240 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ 220/66/11 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ಶಂಕುಸ್ಥಾಪನೆ ಉದ್ಘಾಟಿಸಿ ಮಾತನಾಡಿದರು.
1990 ರಲ್ಲಿ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದರು. ಕಾಂಗ್ರೆಸ್‍ನಿಂದ ಮಾತ್ರ ಜನಪರ ಕೆಲಸಗಳು ಸಾಧ್ಯ. 2023 ರ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ಪಂಚ ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ ನಡೆದಿದೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಒಡತಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ನೀಡುತ್ತಿರುವುದು ಕಟ್ಟ ಕಡೆಯ ಬಡವರಿಗೆ ಅನುಕೂಲವಾಗಿದೆ. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ರೂ.ಗಳಂತೆ ಇದುವರೆಗೂ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದರು.
Also Read: PWD ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಎ.ಹಸೇನ್ ನೇಮಕ
ಕಾಂಗ್ರೆಸ್ ಕಾರ್ಯಕ್ರಮಗಳು ಬಡವರಿಗೆ ಮುಟ್ಟುತ್ತಿವೆ. ಆದರೆ ಪ್ರಚಾರವಿಲ್ಲ. ಜಿಲ್ಲೆಯ ಆರು ತಾಲ್ಲೂಕಿನಿಂದ 21 ವಿದ್ಯುತ್ ಪವರ್ ಸ್ಟೇಷನ್‍ಗಳಿಗೆ ಪ್ರಸ್ತಾವನೆ ಬಂದಿದೆ. ಸರ್ಕಾರದಿಂದ ಮಂಜೂರು ಮಾಡಿಸಿ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಚಿಕ್ಕಜಾಜೂರಿನ ಕೋಟೆಹಾಳ್ ಬಳಿ 13.5 ಎಕರೆ ಜಮೀನನ್ನು ವಿದ್ಯುತ್ ಇಲಾಖೆಗೆ ಹಸ್ತಾಂತರಿಸಿದ್ದು, ರೂ.500 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತದೆ.
ಅಜ್ಜಪ್ಪನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರಕ್ಕೆ 108 ಕೋಟಿ ರೂ.ಮಂಜೂರಾಗಿದ್ದು, ಉಳಿದ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೋಗುಂಡೆ, ಇಸಾಮುದ್ರ, ಕಾಲ್ಕೆರೆ, ಯಳಗೋಡು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಿರುವುದನ್ನು ಅರಿತು ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ನೀರು ಪೂರೈಸುವುದಕ್ಕಾಗಿ ರೂ.70 ಕೋಟಿ ಖರ್ಚು ಮಾಡಿ ಫಿಲ್ಟರ್ ಕೂರಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರಬಹುದು, ಹಣ ತಂದು ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ, ತಾಲ್ಲೂಕಿನಾದ್ಯಂತ ಗುಣಮಟ್ಟದ ರಸ್ತೆ, ಕೆರೆ ಕಟ್ಟೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಚೆಕ್‍ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೊಂದು ವರ್ಷದಲ್ಲಿ ವಿದ್ಯುತ್ ಉಪಕೇಂದ್ರ ಕಾಮಗಾರಿ ಮುಗಿಯಬೇಕೆಂದು ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಸೂಚಿಸಿದರು.
Also Read: ಚಿತ್ರದುರ್ಗ, ಹೊಳಲ್ಕೆರೆ ತಾಲೂಕಿನಲ್ಲಿ ನಾಳೆ ಕರೆಂಟ್ ಇರಲ್ಲ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ನಿರ್ಮಲಮ್ಮ ತಿಪ್ಪೇಸ್ವಾಮಿ, ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್, ಮಂಜುನಾಥ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ತುಮಕೂರು ಮುಖ್ಯ ಇಂಜಿನಿಯರ್ ಸತ್ಯನಾರಾಯಣ, ಅಧೀಕ್ಷಕ ಇಂಜಿನಿಯರ್ ದಾವಣಗೆರೆಯ ರೇವಣಸಿದ್ದಪ್ಪ, ಚಿತ್ರದುರ್ಗ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಜ್ಜಪ್ಪನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
