CHITRADURGA NEWS | 25 SEPYTEMBER 2025
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಈಡಿಗ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಮ್ಮ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ಇದರಿಂದ 2026ರ ಜನವರಿ 16ರಿಂದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರದ ಗುರುಪೀಠದಿಂದ ಬೆಂಗಳೂರವರೆಗೆ ಪಾದಯಾತ್ರೆ (ಒಟ್ಟು 46 ದಿನಗಳು) ಹಮ್ಮಿಕೊಳ್ಳಲಾಗಿದೆ ಎಂದು ಈಡಿಗ ಮಹಾ ಮಂಡಳಿ, ನಾರಾಯಣ ಗುರು ಶಕ್ತಿ ಪೀಠದ ರಾಷ್ಟ್ರೀಯ ಅಧ್ಯಕ್ಷರು, ಪೀಠಾಧಿಪತಿಗಳಾದ ಡಾ.ಶ್ರೀ ಪ್ರಣವಾ ನಂದ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ | ದಸರಾ ಹಬ್ಬಕ್ಕೆ ವಿಶೇಷ ರೈಲು ಸಂಚಾರ
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸರ್ಕಾರ ಸೇಂದಿ/ಸಾರಾಯಿ ನಿಷೇಧ ಮಾಡಿತು. ಆದರೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಸೇಂದಿವನ ಇದ್ದಂತಹ ಜಾಗವನ್ನು ಸಹ ಗೋಮಾಳವನ್ನಾಗಿ ಮಾರ್ಪಡಿಸಿ ಜಾನುವಾರುಗಳು ಮೇಯಲು ಬಿಡಲಾಯಿತು.
ಇದರಿಂದ ಈಡಿಗ ಸಮುದಾಯ ಕೆಲಸವಿಲ್ಲದೆ ಅಲೆಮಾರಿಗಳಾಗಿ ಜೀವನ ಸಾಗಿಸಬೇಕಾಯಿತು. ಸರ್ಕಾರ ನಮ್ಮ ಸಮುದಾಯಕ್ಕೆ ಪರ್ಯಾಯವಾಗಿ ಏನಾದರೂ ಉದ್ಯೋಗ ನೀಡಬೇಕು, ಈಗ ನಮ್ಮವರು ಕೆಲಸ ಇಲ್ಲದೆ ಬೇರೆ ಬೇರೆ ಕೆಲಸ ಮಾಡುತ್ತಾ ಜಿವನ ಸಾಗಿಸುತ್ತಿದ್ದಾರೆ ಎಂದರು.
ಬೆಂಗಳೂರಿನ ವಿಧಾನಸೌಧ ಮುಂದೆ ಶ್ರೀ ನಾರಾಯಣ ಗುರೂಜಿಯವರ ಪುತ್ತಳಿಯನ್ನು ನಿರ್ಮಾಣ ಮಾಡಬೇಕು. ಸರಕಾರ ಸ್ಥಾಪನೆ ಮಾಡಿರುವ ಈಡಿಗ ನಿಗಮಕ್ಕೆ 500 ಕೋಟಿ ರೂ ಗಳನ್ನು ನೀಡಬೇಕು. ಇದರಿಂದ ಈಡಿಗ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಿದೆ.
ಇದನ್ನೂ ಓದಿ: ST ಪಟ್ಟಿಗೆ ಅನ್ಯ ಜಾತಿ ಸೇರ್ಪಡೆ ವಿರೋಧಿಸಿ ಜಿಲ್ಲಾ ನಾಯಕ ಸಮಾಜದಿಂದ ಪ್ರತಿಭಟನೆ
ಈಗಿನ ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಈಡಿಗ ಸಮುದಾಯದವರನ್ನು ಸಚಿವರನ್ನಾಗಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎರಡು ಸಚಿವರು ಇದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಸಮುದಾಯದ ಇನ್ನೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಸೇರಿದಂತೆ 16 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಈಡಿಗ, ನಾಮಧಾರಿ, ಬಿಲ್ಲವ, ದಿವರು ಎಂದು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬರೆಸುವ ಮೂಲಕ ಅಂತಿಮವಾಗಿ 10ನೇ ಕಲಂನಲ್ಲಿ ಈಡಿಗ ಎಂದು ಬರೆಸಬೇಕು.
ಕಳೆದ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನು ಬಹಳ ಕಡಿಮೆ ತೋರಿಸಲಾಗಿದೆ. ರಾಜ್ಯದಲ್ಲಿ ನಮ್ಮ ಸಮುದಾಯ 35 ರಿಂದ 40 ಲಕ್ಷ ಇದೆ. ಈ ಜಾತಿ ಗಣತಿಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ, ನಮ್ಮ ಸಮುದಾಯಗಳ ಹೆಸರನ್ನು ನಮೂದಿಸಬೇಕು ಎಂದು ಶ್ರೀಗಳು ಸಮುದಾಯದವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಸೆ.27 ರಂದು ಹಿರಿಯೂರು ತಾಲ್ಲೂಕು ಪಿಲಾಜನಹಳ್ಳಿ ಗ್ರಾಮದಲ್ಲಿ ಶ್ರೀ ನಾರಾಯಣ ಗುರೂಜಿಗಳ 171ನೇ ಜಯಂತಿ ಹಾಗೂ ಈಡಿಗ ಸಮುದಾಯದ ಚಿಂತನ ಮಂಥನ, ಅಧ್ಯಕ್ಷರು, ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಮಾಜಿ ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ಮಾಜಿ ಕೆಪಿಸಿಸಿ ಸದಸ್ಯರಾದ ಲಕ್ಷ್ಮೀ ನರಸಿಂಹಯ್ಯ, ಬಿಜೆಪಿ ಮುಖಂಡರಾದ ರಘುಚಂದನ್ ಸೇರಿದಂತೆ ಸಮುದಾಯ ಮುಖಂಡರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈಡಿಗ ಮಹಾ ಮಂಡಳಿ ರಾಜ್ಯ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ರಮೇಶ್ ಲೋಕೇಶ್, ರೋಹನ್, ಪ್ರವೀಣ್ ಕುಮಾರ್, ಕುಮಾರ್ ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
