CHITRADURGA NEWS | 25 SEPTEMBER 2025
ಚಿತ್ರದುರ್ಗ: ಅನ್ಯ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹುನ್ನಾರ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಜಿಲ್ಲಾ ನಾಯಕ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಮದಕರಿ ನಾಯಕ ಪ್ರತಿಮೆ ಮುಂಭಾಗದಲ್ಲಿರುವ ವಾಲ್ಮೀಕಿ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಹಿಂದುಳಿದ ವರ್ಗ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದನ್ನು ಕೂಡಲೆ ನಿಲ್ಲಿಸಬೇಕು.
ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಮಾಣ ಪತ್ರಗಳನ್ನು ನೀಡಿದ ಅಧಿಕಾರಿಗಳು ಹಾಗೂ ಪಡೆದವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವುದು ಸೇರಿದಂತೆ ಹದಿನೈದು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ನಿವೃತ್ತ ಮುಖ್ಯಶಿಕ್ಷಕ ವೆಂಕಟಸ್ವಾಮಿ ನಿಧನ
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಸಂವಿಧಾನದ ಪರಿಚ್ಚೇದ 341 ಮತ್ತು 342 ರಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯವಾಗಿ 1950 ಮತ್ತು ನಂತರ ಹೊರಡಿಸಿರುವ ಅಧಿಸೂಚನೆಗಳಡಿ ಮೀಸಲಾತಿ ನೀಡಿರುವುದು ಸರಿಯಷ್ಟೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಪರಿಶಿಷ್ಟ ಪಂಗಡದವರ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿರುವುದು ಸಾಲದೆಂಬಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇರೆ ಜಾತಿಯವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ನಮ್ಮ ಸವಲತ್ತುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಗಳ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಒಂದು ವರ್ಷದಿಂದ ಮೇಲ್ಪಟ್ಟು ಪರಿಶಿಷ್ಟ ವರ್ಗಗಳ ಇಲಾಖೆಗೆ ಸಚಿವರಿಲ್ಲದಂತಾಗಿದೆ. ಕೂಡಲೆ ಪರಿಶಿಷ್ಟ ವರ್ಗಗಳ ಇಲಾಖೆಗೆ ಕ್ಯಾಬಿನೆಟ್ ಸಚಿವರ ನೇಮಕವಾಗಬೇಕು.
ತಳವಾರ ಹೆಸರಿನಲ್ಲಿ ಕೋಳಿ, ಕಬ್ಬಲಿಗ, ಬೆಸ್ತಾ ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಎಸ್.ಟಿ. ಎಸ್ಸಿ. ಓಬಿಸಿ. ಕಾಯಿದೆ ಕಲಂ 4 ಮತ್ತು 4 ಎ ರಲ್ಲಿ ತಹಶೀಲ್ದಾರ್ ಮತ್ತು ಮೇಲಧಿಕಾರಿಗಳಿಗೆ ರದ್ದುಪಡಿಸುವ ಅಧಿಕಾರವಿದೆ. ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಗೊಳಿಸಬೇಕು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 25 | ಹತ್ತಿ ರೇಟ್ ಎಷ್ಟಿದೆ?
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಜನಾಂಗದ ಸಾಂಸ್ಕøತಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ರಾಜಕೀಯ ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ವಿಶೇಷ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ರೈಲ್ವೆಸ್ಟೇಷನ್ ಮಂಜುನಾಥ್, ಬಾಲೇನಹಳ್ಳಿ ತಿಪ್ಪೇಸ್ವಾಮಿ, ಮಂಜುನಾಥ್, ನ್ಯಾಯವಾದಿಗಳಾದ ಬ್ಯಾಲಾಳ್ ಸಿದ್ದೇಶ್, ಅಶೋಕ್‍ಬೆಳಗಟ್ಟ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪ್ರಶಾಂತ್, ಮಹಿಳಾ ಮುಖಂಡರುಗಳಾದ ರತ್ನಮ್ಮ, ಸುಮಿತ್ರಮ್ಮ ಸೇರಿದಂತೆ ಸಮಾಜದವರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
