CHITRADURGA NEWS | 10 MAY 2026
ಚಿತ್ರದುರ್ಗ: ಯೋಜನೆ ಮತ್ತು ಸಾಂಖ್ಯಿಕ ಖಾತೆ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್(65) ನಿಧನರಾಗಿದ್ದಾರೆ.
ಮೊಣಕಾಲು ನೋವಿಗೆ ಆಪರೇಷನ್ ಮಾಡಿಸಲು ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡು ಕಳೆದೊಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ನಸುಕಿನಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ವರ್ಷಿಣಿ, ಪುತ್ರ ಸುಹಾಸ್ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಮಾರ್ಚ್ 26 ರಂದು ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಡಿ.ಸುಧಾಕರ್ ಅವರಿಗೆ ಲಂಗ್ಸ್ ಇನ್ಫೆಕ್ಷನ್ ಕಾಣಿಸಿಕೊಂಡಿದ್ದರಿಂದ ಮೂರು ದಿನಗಳ ನಂತರ ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಇದನ್ನೂ ಓದಿ: ಮದಕರಿ ಸ್ಮಾರಕ ಮಾಡೇ ಮಾಡ್ತಿವಿ | ಚಿಂತೆ ಬೇಡ ಮೋದಿ ಸರ್ಕಾರ ಇದೆ | ಅಮಿತ್ ಶಾ ಭರವಸೆ
ಹೈದರಾಬಾದ್ ಮೂಲದ ತಜ್ಞ ವೈದ್ಯರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಡಿ.ಸುಧಾಕರ್ ಅಗಲಿದ್ದಾರೆ.
ದಾನ, ಧರ್ಮಕ್ಕೆ ಹೆಸರಾಗಿದ್ದ ಧಣಿ ಸುಧಾಕರ್:
ದಶರಥಯ್ಯ ಹಾಗೂ ಕಾಂಚನಮಾಲ ದಂಪತಿಗಳ ಆರನೇ ಮಗನಾಗಿ ಜನಿಸಿದ ಡಿ.ಸುಧಾಕರ್, ಯಶಸ್ವಿ ಉದ್ಯಮಿಯಾಗಿ ರಾಜಕಾರಣದಲ್ಲೂ ಸೈ ಅನ್ನಿಸಿಕೊಂಡವರು.
ಇದನ್ನೂ ಓದಿ:ಹೃದ್ರೋಗ ಸಮಸ್ಯೆ ಇದ್ದವರ ಚರ್ಮದಲ್ಲಿ ಈ ಬದಲಾವಣೆಗಳು ಕಂಡುಬರುತ್ತವೆಯಂತೆ
ಸಚಿವ ಡಿ.ಸುಧಾಕರ್ ಅಲ್ಪ ಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ್ದರೂ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಒಂದು ಅವಧಿಗೆ, ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಎರಡು ಸಲ ವಿಧಾನಸಭೆಗೆ ಆಯ್ಕೆಯಾದವರು.
ಡಿ.ಸುಧಾಕರ್ ಅವರ ಚಿಕ್ಕಪ್ಪ ಚಳ್ಳಕೆರೆ ಶಾಸಕರಾಗಿದ್ದ ಎನ್.ಜಯ್ಯಣ್ಣ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತ ಸುಧಾಕರ್ ಜಯ್ಯಣ್ಣ ನಿಧನದ ನಂತರ 2004 ರಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿದವರು.
ಇದನ್ನೂ ಓದಿ:ಕರ್ನಾಟಕದಲ್ಲಿ ಬಿಜೆಪಿ ಸೂರ್ಯ ಉದಯಿಸುತ್ತಿದೆ | ಬಸವರಾಜ ಬೊಮ್ಮಾಯಿ
2004ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಎದುರಾಳಿಗಳಾಗಿ ಮಾಜಿ ಸಚಿವರಾ ದಿ.ತಿಪ್ಪೇಸ್ವಾಮಿ ಹಾಗೂ ಮಾಜಿ ಶಾಸಕ ಬಸವರಾಜ ಮಂಡಿಮಠ್ ಇದ್ದರು.
ಆನಂತರ ಕ್ಷೇತ್ರ ಮರುವಿಂಗಡಣೆಯಾಗಿ ಚಳ್ಳಕೆರೆ ಎಸ್ಟಿಗೆ ಮೀಸಲಾದಾಗ ಹಿರಿಯೂರು ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.
ಹಿರಿಯೂರಿನಲ್ಲಿ ಪಕ್ಷೇತರರಾಗಿ ಗೆದ್ದು, ಬಿಜೆಪಿ 110 ಸ್ಥಾನ ಗದ್ದಾಗ ಬಿಜೆಪಿ ಜೊತೆ ಕೈ ಜೋಡಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆದರೆ, ಕೆಲ ವಿವಾದಗಳ ಕಾರಣಕ್ಕೆ ಈ ಖಾತೆ ಕಳೆದುಕೊಂಡು ಮುಜರಾಯಿ ಖಾತೆ ಪಡೆದುಕೊಂಡು ಕೊನೆಗೆ ಸ್ಪೀಕರ್ ಅನರ್ಹಗೊಳಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡುವಂತಾಗಿತ್ತು.
ಇದನ್ನೂ ಓದಿ: ಕೆ.ಆರ್. ಶಿವಪ್ರಕಾಶ್ ಅಂತಿಮ ದರ್ಶನ ಪಡೆದ ವಿಜಯೇಂದ್ರ
ನಂತರ ಕಾಂಗ್ರೆಸ್ ಟಿಕೇಟ್ ಪಡೆದು ಸ್ಪರ್ಧೆ ಮಾಡಿದ ಸುಧಾಕರ್ ಅವರಿಗೆ ಹಿರಿಯೂರಿನಲ್ಲಿ ಎದುರಾದವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎ.ಕೃಷ್ಣಪ್ಪ. ಪ್ರಬಲ ಸಮುದಾಯದ ಮತಗಳಿದ್ದರೂ ಸುಧಾಕರ್ ಗೆದ್ದು ಬಂದರು.
2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎ.ಕೃಷ್ಣಪ್ಪ ಅವರ ಪುತ್ರ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರಿಗೆ ಬಂದು ಸ್ಪರ್ಧೆ ಮಾಡಿದಾಗ ಡಿ.ಸುಧಾಕರ್ ಪರಭಾವಗೊಂಡರು. ಆದರೆ, 2023 ರಲ್ಲಿ ಮತ್ತೆ ಪೂರ್ಣಿಮಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಕಳೆದ ಮೂರು ವರ್ಷಗಳಿಂದ ಸಚಿವರಾಗಿಯೂ ಸೇವೆ ಸಲ್ಲಿಸಿದರು.
ಹಿರಿಯೂರು, ಚಳ್ಳಕೆರೆ ಕ್ಷೇತ್ರಗಳಲ್ಲಿ ಹಿಡಿತ:
ಚಳ್ಳಕೆರೆ ಹಾಗೂ ಹಿರಿಯೂರು ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಡಿ.ಸುಧಾಕರ್ ಬಡವರು, ದೀನ, ದಲಿತರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದರು.
ಇದನ್ನೂ ಓದಿ:ಆಧುನಿಕ ಭಗೀರಥ ಯಡಿಯೂರಪ್ಪ | BSY ಕುರಿತು ಸಿರಿಗೆರೆ ಶ್ರೀ ಲೇಖನ
ಕಷ್ಟ ಎಂದು ಮನೆ ಬಾಗಿಲಿಗೆ ಹೋದವರನ್ನು ಖಾಲಿ ಕೈಯಲ್ಲಿ ಕಳಿಸಿದ್ದೇ ಇಲ್ಲ. ಸಚಿವರಾದ ನಂತರವೂ ಸಾಕಷ್ಟು ಪ್ರಕರಣಗಲ್ಲಿ ಸರ್ಕಾರಕ್ಕಿಂತ ಹೆಚ್ಚು ಸಹಾಯವನ್ನು ಸ್ವಂತ ಹಣದಿಂದ ಮಾಡಿದ ಹಲವು ಉದಾಹರಣೆಗಳಿವೆ.
ಚಳ್ಳಕೆರೆಯ ಅವರ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಕೊಡುಗೈ ದಾನಿ, ಚಳ್ಳಕೆರೆಯ ಸಾಹುಕಾರ ಎಂದೇ ಜನಮನದಲ್ಲಿ ನೆಲೆನಿಂತಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

