CHITRADURGA NEWS | 09 MAY 2026
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಆಗ ದೆಹಲಿಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆಯೇ ನಮ್ಮ ಮೊಬೈಲ್ ರಿಂಗಣಿಸಿತು. ಉತ್ತರಿಸಲು ಕೈಗೆತ್ತಿಕೊಂಡಾಗ ಕಾಣಿಸಿದ್ದು ಕರೆ ಮಾಡಿದವರು ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ. ತೀರಾ ಅನಿರೀಕ್ಷಿತವಾದ ಕರೆ. ಮುಖ್ಯಮಂತ್ರಿಗಳಾಗಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಪ್ಪದೆ ನಮಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಬೇಡುತ್ತಾ ಬಂದಿರುವುದು ಅವರು ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ದೆ. ಆದರೆ ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.
ಉಭಯ ಕುಶಲೋಪರಿಯ ನಂತರ ಅವರು ‘ಬುದ್ದಿ, ನಾಳೆ ನಾನು ರಾಜ್ಯದ ಬಜೆಟ್ ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದೇನೆ. ಏನು ಮಾಡಲಿ?’ ಎಂದು ಕೇಳಿದರು. ಅವರ ಧಾರ್ಮಿಕ ಶ್ರದ್ದೆ ನಿಷ್ಕಳಂಕವಾಗಿದ್ದರೂ, ಅವರು ನಾಡಿನ ಮುಖ್ಯಮಂತ್ರಿಗಳಾಗಿ ಯಾವುದೇ ತಾರತಮ್ಯ ಮಾಡದೆ ಎಲ್ಲ ಜನಾಂಗದವರ ಧಾರ್ಮಿಕ ಸಂಸ್ಥೆಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದರೂ ನಮ್ಮ ಮಠಕ್ಕೆ ಏನು ಮಾಡಲಿ ಎಂದು ಕೇಳಿದ ಪ್ರಶ್ನೆ ನಮಗೆ ಸರಿ ಕಾಣಲಿಲ್ಲ.
‘ಮಠಕ್ಕೆ ಕಾಣಿಕೆ ಕೊಡಲು ಮಠದ ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ’ ಎಂದು ಕಟುವಾಗಿ ಪ್ರತಿಕ್ರಿಯಿಸಿದಾಗ ಅವರು ನಿರುತ್ತರರಾದರು. ‘ಹಾಗಾದರೆ ನಾನೇನು ಮಾಡಲಿ?’ ಎಂದು ವಿನಮ್ರತೆಯಿಂದ ಮರು ಸವಾಲು ಹಾಕಿ ನಮ್ಮನ್ನು ‘ಭಕ್ತಿಕಂಪಿತ’ರನ್ನಾಗಿ ಮಾಡಿದರು.
ಆಗ ನಮ್ಮ ಕಣ್ಮುಂದೆ ಸುಳಿದಾಡಿದ್ದು ಬೇಸಿಗೆಯ ಕಾಲದಲ್ಲಿ ಬೆಳಗಿನ ಹೊತ್ತು ವಾಯುವಿಹಾರದಿಂದ ಹಿಂದಿರುಗುವಾಗ ಮಠದ ಪಕ್ಕದ ರಸ್ತೆಯಲ್ಲಿ ಮಹಿಳೆಯರು ಸಾಲುಸಾಲಾಗಿ ನಿಂತು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಕೈಯಲ್ಲಿ ಬಿಂದಿಗೆಗಳನ್ನು ಹಿಡಿದು ನಿಂತದೃಶ್ಯ! ತಕ್ಷಣವೇ ನಮ್ಮ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳಿಗೆ ‘ಸಿರಿಗೆರೆ ಮತ್ತು ಸುತ್ತಮುತ್ತಲಿನ 50-60 ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಇದೆ.
ಸಮೀಪದ ಚನ್ನಗಿರಿ ತಾಲೂಕು ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆಯಾಗುವಂತೆ ಒಂದು ಯೋಜನೆಯನ್ನು ಮಂಜೂರು ಮಾಡಿಕೊಟ್ಟರೆ ತುಂಬಾ ಪುಣ್ಯ ಕಾರ್ಯ ಮಾಡಿದಂತಾಗುತ್ತದೆ’ ಎಂದಾಗ ಯಡಿಯೂರಪ್ಪನವರು ತಡಮಾಡದೆ ‘ಹಾಗೆಯೇ ಆಗಲಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ’ ಎಂದು ಭರವಸೆ ಕೊಟ್ಟರು.
ಮರುದಿನವೇ ಬಜೆಟ್ನಲ್ಲಿ ಘೋಷಣೆ
ಸಾಮಾನ್ಯವಾಗಿ ರಾಜಕೀಯ ಧುರೀಣರು ಕೊಡುವ ಪೊಳ್ಳು ಭರವಸೆ ಅದಾಗಿರಲಿಲ್ಲ. ಮಾರನೆಯ ದಿನವೇ ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಜೆಟ್ನಲ್ಲಿ ಮೇಲ್ಕಂಡ ಕುಡಿಯುವ ನೀರಿನ ಯೋಜನೆಗೆ ಅವರು 25 ಕೋಟಿ ರು. ಸೇರ್ಪಡೆ ಮಾಡಿದ್ದು ಈ ಭಾಗದ ಹಳ್ಳಿಯ ಜನರನ್ನು ನಿಬ್ಬೆರಗುಗೊಳಿಸಿತು.

ಕ್ರಮೇಣ ಸಿರಿಗೆರೆ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಿ ಯೋಜನೆಯ ಗಾತ್ರ 80 ಕೋಟಿ ರು.ಗಳಿಗೆ ಹಿಗ್ಗಿತು. ಆರಂಭದಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆಯಾಗುತ್ತಿದ್ದಾಗ ಅಷ್ಟಾಗಿ ಈ ಯೋಜನೆಯ ಬಗ್ಗೆ ತಲೆಕೆಡಿಸಿಕೊಳ್ಳದ ಹಳ್ಳಿಗರು ಈಗ ಅಂತರ್ಜಲ ಬತ್ತಿರುವುದರಿಂದ ಈ ಯೋಜನೆಯು ಕಾರ್ಯರೂಪಕ್ಕೆ ಬರದೇ ಹೋಗಿದ್ದರೆ ತಮ್ಮ ಗತಿ ಏನಾಗುತ್ತಿತ್ತು ಎಂದು ಉದ್ಗರಿಸುತ್ತಿದ್ದಾರೆ!
ಯಡಿಯೂರಪ್ಪನವರು ಮತ್ತು ನಮ್ಮ ಸಂಬಂಧ ನಿನ್ನೆ ಮೊನ್ನೆಯದಲ್ಲ. ನಮ್ಮ ಮಠದ ವಾರ್ಷಿಕ ಸಮಾರಂಭವಾದ ‘ಸರ್ವಜನಾಂಗದ ಶಾಂತಿಯ ತೋಟ’ವೆಂದೇ ಜನಮಾನಸದಲ್ಲಿ ನೆಲೆಗೊಂಡಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ವು35 ವರ್ಷಗಳ ಹಿಂದೆ (1985) ಶಿಕಾರಿಪುರದಲ್ಲಿ ನಡೆದಾಗ ಅವರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು.
ಅಂದಿನಿಂದಲೂ ನಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಯಡಿಯೂರಪ್ಪನವರು ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ, ಮಂತ್ರಿಗಳಾಗಿರಲಿ, ಮಾಜಿ ಮಂತ್ರಿಗಳಾಗಿರಲಿ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾಕಾರ್ಯಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಸದಾ ಜನಕಲ್ಯಾಣದ ಕನಸು
ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರರು, ಅಪಾರ ಜನಪರ ಕಾಳಜಿ ಉಳ್ಳವರು. ಜನರ ಮಧ್ಯೆ ಬೆಳೆದು ಬಂದ ಅವರು. ನಾಡಿನ ಜನರ ಕಲ್ಯಾಣದ ಕನಸನ್ನೇ ಸದಾ ಕಾಣುವ ಅವರು ರಾಜ್ಯದ ಅನೇಕ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಮ್ಮ ಯೋಜನೆಗಳಿಗೆ ಹಿಂದುಮುಂದು ನೋಡದೆ ಸರಕಾರದ ಒಪ್ಪಿಗೆಯನ್ನು ನೀಡಿ ಉದಾರವಾಗಿ ಅನುದಾನ ನೀಡಿ ಸಹಕರಿಸಿರುವುದನ್ನು ನಾವೆಂದೂ ಮರೆಯಲಾರೆವು.
ಜಗಳೂರು, ಭರಮಸಾಗರ ಏತ ನೀರಾವರಿಯೂ ಸಾಕಾರ
ಚನ್ನಗಿರಿಯ ಉಬ್ರಾಣಿ-ಅಮೃತಾಪುರ, ಹರಿಹರದ ರಾಜನಹಳ್ಳಿ, ಹೊನ್ನಾಳಿಯ ಸಾಸ್ಟೆಹಳ್ಳಿ, ಬ್ಯಾಡಗಿ ತಾಲೂಕಿನ ಅಣೂರು ಮತ್ತು ಬುಡಪನಹಳ್ಳಿ, ಜಗಳೂರು ಮತ್ತು ಭರಮಸಾಗರ ಇತ್ಯಾದಿ ಯಾವುದೇ ಏತನೀರಾವರಿ ಯೋಜನೆ ಇರಲಿ, ಯಾವುದೇ ಸರಕಾರವಿದ್ದಾಗ ಮಂಜೂರಾಗಿರಲಿ, ಅವೆಲ್ಲಾ ಏತನೀರಾವರಿ ಯೋಜನೆಗಳಿಗೆ ಕೊನೆಯಲ್ಲಿ ಕೋಟ್ಯಂತರ ರು.ಗಳ ಹಣ ಬಿಡುಗಡೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪನವರಿಗೆ ಸಲ್ಲುತ್ತದೆ.
ಕೊನೆಗೂ ನಮ್ಮ ಆಶಯ ಸಾಕಾರ
ಈ ಹಿಂದೆ ಇಂತಹ ಯೋಜನೆಗಳಿಗೆ ಧಾರಾಳವಾಗಿ ಹಣ ಮಂಜೂರು ಮಾಡುತ್ತಿದ್ದ ಅವರು ಕಳೆದ ವರ್ಷ ಆರ್ಥಿಕ ದುರ್ಭರತೆಯ ಕಾರಣದಿಂದ ಹಿಂದೇಟು ಹಾಕಿದ್ದರು. 1,220 ಕೋಟಿ ರು.ಗಳ ಜಗಳೂರು ಮತ್ತು ಭರಮಸಾಗರ ಬೃಹತ್ ಏತನೀರಾವರಿ ಯೋಜನೆಗಳನ್ನು 225 ಕೋಟಿ ರು.ಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು ನಮಗೆ ಅಸಂತುಷ್ಟಿ ಯನ್ನುಂಟುಮಾಡಿತು. ನಂತರ ನಮ್ಮ ಒತ್ತಾಸೆಗೆ ಮಣಿದು ಒಂದೇ ವಾರದಲ್ಲಿ ಮೇಲ್ಕಂಡ ಸರಕಾರದ ಆದೇಶವನ್ನು ಹಿಂಪಡೆದು ಪೂರಾ ಹಣವನ್ನು ಒಂದೇ ಕಂತಿನಲ್ಲಿ ಮಂಜೂರು ಮಾಡಿ ಮರು ಆದೇಶ ಹೊರಡಿಸಿದರು.
ಈ ಎರಡೂ ಯೋಜನೆಗಳ ಕಾಮಗಾರಿ ಕೊರೋನಾ ಬಿಕ್ಕಟ್ಟಿನ ನಡುವೆಯೂ ಭರದಿಂದ ಸಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಈ ಭಾಗದ ನೂರಾರು ಕೆರೆಗಳಿಗೆ ತುಂಗಭದ್ರೆಯು ಧುಮ್ಮಿಕ್ಕಲಿದ್ದಾಳೆ. ಶತಮಾನಗಳಿಂದ ಬರಗಾಲದ ಬೇಗೆಯಿಂದ ತತ್ತರಿಸಿದ ಈ ಭಾಗದ ಗ್ರಾಮೀಣ ಜನರು ‘ಇಳಿದು ಬಾ ತಾಯೆ, ಇಳಿದು ಬಾ……’ ಎಂಬ ಕವಿವಾಣಿಯನ್ನು ಜಪಿಸುತ್ತಿದ್ದಾರೆ!
ಸಿರಿಗೆರೆ ಸುತ್ತಲಿನ 50-60 ಹಳ್ಳಿಗಳಿಗೆ ನೀರುಣಿಸಿದ ನಾಯಕ
‘ಬುದ್ದಿ, ನಾಳೆ ರಾಜ್ಯದ ಬಜೆಟ್ ಮಂಡಿಸಲಿದ್ದೇನೆ. ಮಠಕ್ಕಾಗಿ ಏನು ಮಾಡಲಿ’ ಎಂದು ಕೇಳಿದರು. ‘ಮಠಕ್ಕೆ ಕಾಣಿಕೆ ಕೊಡಲು ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ’ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ. ಆಗಲೂ ಯಡಿಯೂರಪ್ಪ ‘ಹಾಗಾದರೆ ನಾನೇನು ಮಾಡಲಿ?’ ಎಂದು ವಿನಮ್ರತೆಯಿಂದ ಮರುಸವಾಲು ಹಾಕಿ ನಮ್ಮನ್ನು ‘ಭಕ್ತಿಕಂಪಿತ’ರನ್ನಾಗಿ ಮಾಡಿದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,
ಸಿರಿಗೆರೆ ತರಳಬಾಳು ಮಠ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
