
CHITRADURGA NEWS | 09 DECEMBER 2025
ಚಿತ್ರದುರ್ಗ: ಗುಡಿ ಜನರ ಜೀವನಾಡಿಯಾಗಬೇಕು. ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಸಮಾಜದಲ್ಲಿ ಸಾಮರಸ್ಯ ತರುವಂತಾಗಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 09 | ಹತ್ತಿ ರೇಟ್ ಎಷ್ಟಿದೆ?

ನಗರದ ಜೋಗಿಮಟ್ಟಿಯ ಸದ್ಗುರು ಆಶ್ರಮದ ಉದಾಯಚಲದಲ್ಲಿ ದೇವಾಲಯ ಸಂವರ್ಧನಾ ಸಮಿತಿಯಿಂದ ಆಯೋಜಿಸಿದ್ದ ಅರ್ಚಕರ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಅರ್ಚಕರ ತರಬೇತಿ ಶಿಬಿರ ಕೇವಲ ಪೂಜೆ, ಮಂತ್ರ, ಶ್ಲೋಕಗಳನ್ನು ಕಲಿಸುವುದಕ್ಕಲ್ಲ. ದೇವಸ್ಥಾನವನ್ನು ಸಾಮಾಜಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಹೊಂದಿದೆ. ದೇವಸ್ಥಾನಗಳು ಮತ್ತೆ ಪೂಜೆಗೆ ಸೀಮಿತವಲ್ಲ, ಗ್ರಾಮಗಳ ಸಾಮಾಜಿಕ ಸಾಮರಸ್ಯ ಕಾಪಾಡುವಂತಾಗಬೇಕು ಎಂದರು.
ದೇವಾಲಯ ಹಸಿದವರಿಗೆ ಅನ್ನ ನೀಡುವ ಕೇಂದ್ರವಾಗಬೇಕು. ಶಕ್ತಿ ಇರುವ ದೇವಸ್ಥಾನಗಳಿಂದ ಆ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವಂತಾಗಬೇಕು. ಅವಕಾಶ ಇರುವ ಕಡೆಗಳಲ್ಲಿ ಯೋಗ ತರಬೇತಿ, ಆರೋಗ್ಯ ಶಿಬಿರ, ಗ್ರಂಥಾಲಯ, ಗೋಶಾಲೆಯಂತಹ ಚಟುವಟಿಕೆಗಳನ್ನು ಮಾಡಿಸುವ ಕಲ್ಪನೆಯನ್ನು ಅರ್ಚಕರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮದ್ಯಪಾನದಿಂದ ಲಿವಿರ್ ಸಿರೋಸಿಸ್ ಹಾಗೂ ಜಾಂಡೀಸ್ | ಅಧಿವೇಶನದಲ್ಲಿ ಧ್ವನಿಯೆತ್ತಿದ ರವಿಕುಮಾರ್, ಕೆ.ಎಸ್.ನವೀನ್
ದೇವಸ್ಥಾನಗಳನ್ನು ಕೇಂದ್ರವಾಗಿಟ್ಟುಕೊಂಡು ವಾರದಲ್ಲಿ ಒಂದು ದಿನ ಮಹಿಳೆಯರೆಲ್ಲಾ ಸೇರಿ ಮಾತೃ ಮಂಡಳಿ ರಚಿಸಿ ಸ್ವಾವಲಂಬನೆಯ ಬದುಕಿನ ಬಗ್ಗೆ ಚಿಂತನ ಮಂಥನ ನಡೆಸಬೇಕು. ಮಾತೃ ಭೋಜನ ನಡೆಯಬೇಕು. ವಿವಿಧ ಸಮಾಜದ ಮುಖಂಡರ ಜೊತೆ ಸಂವಾದ, ಅನೌಪಚಾರಿಕ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಮಟ್ಟದ ಅರ್ಚಕರ ತರಬೇತಿ ಶಿಬಿರ ನಡೆಸುತ್ತಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಿಂದ ೬೫ ಅರ್ಚಕರು, ವಿವಿಧ ವರ್ಗ, ಪಂಥಗಳಿಂದ ಭಾಗವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಮಂತ್ರೋಚ್ಛಾರಣೆ ಮಾಡುವವರು, 2ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಓದಿರುವವರು ಭಾಗವಹಿಸಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 8 ಶಿಬಿರಗಳು ನಡೆದಿದ್ದು, 550 ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭೀಮಸಮುದ್ರದ ಉದ್ಯಮಿ ಲವಕುಮಾರ್ ಮಾತನಾಡಿ, ಅರ್ಚಕರಿಗೆ ತರಬೇತಿ ನೀಡುತ್ತಿರುವುದು ಬಹಳ ಅಪರೂಪದ ವಿಚಾರ. ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದವರೂ ಭಾಗವಹಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಇದನ್ನೂ ಓದಿ: B.Ed ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ | ಅರ್ಜಿ ಅಹ್ವಾನ
ಚಳ್ಳಕೆರೆ ನರಹರಿ ಆಶ್ರಮದ ಶ್ರೀ ರಾಜಾರಾಮ ಶಾಸ್ತ್ರಿಗಳು ಮಾತನಾಡಿ, ಅರ್ಚಕರು ತಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದರೆ ಭಗವಂತ ನಿಮ್ಮ ಜೊತೆಗೆ ಇರುತ್ತಾನೆ. ಮತ್ತೊಬ್ಬರಿಗೆ ಮೋಸ, ಕುತಂತ್ರ ಮಾಡಿದರೆ ದೇವರು ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಅರ್ಚನೆ, ಪೂಜೆ ಕೇವಲ ಹಣಕ್ಕಾಗಿ ಅಲ್ಲ. ಅರ್ಚಕ ಭಕ್ತ ಹಾಗೂ ಭಗವಂತನ ನಡುವೆ ಇರುವ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಬೇಕು. ಭಗವಂತನ ಪ್ರತಿನಿಧಿಯಂತೆ ಕಷ್ಟಕ್ಕಾಗಿ ಬಂದ ಭಕ್ತರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಮಂತ್ರಗಳನ್ನು ಸ್ಪಷ್ಟ, ಶುದ್ಧ ಹಾಗೂ ನಿಧಾನವಾಗಿ ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಎಲ್ಲರಿಗೂ ಅರ್ಥವಾಗುತ್ತದೆ. ಭಕ್ತರಿಗೆ ಮಂತ್ರಗಳು ಅರ್ಥವಾದರೆ ಸಂತಸವಾಗುತ್ತದೆ ಎಂದರು.
ಇದನ್ನೂ ಓದಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ | ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
ಶಿಬಿರಕ್ಕೆ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ರಘುನಂದನ್, ಹಿಂದೂ ಸೇವಾ ಪ್ರತಿಷ್ಠಾನದ ಸುರೇಶ್, ಆರೋಗ್ಯ ಇಲಾಖೆಯ ಡಾ.ಶಿವಕುಮಾರ್, ಸಂಸ್ಕಾರ ಭಾರತಿಯ ಡಾ.ಕೆ.ರಾಜೀವ ಲೋಚನ, ಆರೆಸ್ಸೆಸ್ಸ್ ಜಿಲ್ಲಾ ಕಾರ್ಯವಾಹ ರಾಮಕಿರಣ್ ಭಾಗವಹಿಸಿದ್ದಾರೆ.
ಡಿ.12 ರಂದು ನಡೆಯುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಸಂವಾದ ಸಂಪಾದಕ ವೃಷಾಂಕ್ ಭಟ್ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಿರುವ ಅರ್ಚಕರಿಗೆ ಬಂದು ಹೋಗುವ ವೆಚ್ಚ ಹೊರತುಪಡಿಸಿ ಉಳಿದಂತೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಪೂಜಾ ಸಮವಸ್ತ್ರ, ಪೆನ್ನು, ಪುಸ್ತಕ, ಪೂಜಾ ಸಾಮಾಗ್ರಿ, ತುಳಸಿ ಮಾಲೆಯನ್ನು ನೀಡಲಾಗಿದೆ.
ಇದನ್ನೂ ಓದಿ: ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಶಿಬಿರದಲ್ಲಿ ದೇವಾಲಯ ಸಂವರ್ಧನ ಸಮಿತಿಯ ಶಿವಮೊಗ್ಗ ವಿಭಾಗ ಸಂಯೋಜಕ ಗಂಗಣ್ಣ, ಜಿಲ್ಲಾ ಸಂಯೋಜಕ ಮಂಜುನಾಥ್, ಪ್ರಮುಖರಾದ ಗುರುಮೂರ್ತಿ, ಶಶಿಧರ್ ಗುಡೇಕೋಟೆ, ಶ್ರೀನಿವಾಸ್, ಓಂಕಾರಪ್ಪ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
