ಹೊಸದುರ್ಗ
ಹೊಸದುರ್ಗ ಹಾಲಿ-ಮಾಜಿ ಶಾಸಕರ ಟಾಕ್‍ವಾರ್ | ಮುಖಾಮುಖಿ ಚರ್ಚೆಗೆ ಒಪ್ಪಿದ ಗೂಳಿಹಟ್ಟಿ ಶೇಖರ್ | ಬಿ.ಜಿ.ಗೋವಿಂದಪ್ಪ ಮನೆಗೆ ಬರುವುದಾಗಿ ಆಡಿಯೋದಲ್ಲಿ ಹೇಳಿಕೆ

CHITRADURGA NEWS | 17 JANUARY 2024
ಚಿತ್ರದುರ್ಗ: ಹೊಸದುರ್ಗದಲ್ಲಿ ಹಾಲಿ-ಮಾಜಿ ಶಾಸಕರ ಟಾಕ್‍ವಾರ್ (TALK WAR) ಶುರುವಾಗಿದ್ದು, ಇಬ್ಬರೂ ಮುಖಾಮುಖಿಯಾಗುವುದು ಬಾಕಿಯಿದೆ.
ಹೊಸದುರ್ಗ ತಾಲೂಕಿನಲ್ಲಿ ಮರಳು, ಮಣ್ಣು ಅಕ್ರಮ ಸಾಗಾಟ ಜೋರಾಗಿ ನಡೆಯುತ್ತಿದೆ. ಹಾಲಿ ಶಾಸಕರ ಕಡೆಯವರೇ ಎಲ್ಲಾ ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (GULIHATTY SHEKHAR) ಪ್ರಶ್ನಿಸಿದ್ದರು.

ಇದಕ್ಕೆ ಚಿತ್ರದುರ್ಗದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ (B.G.GOVINDAPPA) ಪ್ರತಿಕ್ರಿಯೆ ನೀಡಿದ್ದರು. ನಮ್ಮ ಅವಧಿಯಲ್ಲಿ ಅಂಥದ್ದೇನು ನಡೆದಿಲ್ಲ. ಎಲ್ಲಾ ದಂಧೆಗಳು ನಡೆದಿದ್ದು ಮಾಜಿ ಶಾಸಕರ ಅವಧಿಯಲ್ಲೇ ಎಂದು ಹೇಳುವ ಮೂಲಕ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು.
ಇದನ್ನೂ ಓದಿ: ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಕರ್ ಮತ್ತೊಂದು ಆಡಿಯೋ ವೈರಲ್

ಮುಂದುವರೆದು ಮಾತನಾಡಿದ್ದ ಅವರು, ಗೂಳಿಹಟ್ಟಿ ಶೇಖರ್ ಶಾಸಕರಾಗಿದ್ದಾಗ ಅವರ ಪಕ್ಷದವರೇ ಪುರಸಭೆ ಅಧ್ಯಕ್ಷರಾಗಿದ್ದರು. ಆಗ ಇ ಸ್ವತ್ತು ಮಾಡಿಕೊಡಲು ನಮಗೆ ಬೇಕಾದ ಒಬ್ಬರ ಕಡೆಯಿಂದ ನಾನೇ 50 ಲಕ್ಷ ರೂ. ಲಂಚ ಕೊಡಿಸಿದ್ದೆ.

ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ
ಇದರಲ್ಲಿ ಗೂಳಿಹಟ್ಟಿ ಅವರ ಪಾಲಿದೆಯೋ ಇಲ್ಲವೋ ಎನ್ನುವುದನ್ನು ಎಲ್ಲೋ ಕುಳಿತು ಹೇಳುವುದಿಲ್ಲ. ಅವರು ಬಹಿರಂಗವಾಗಿ ಬಂದು ಕೇಳಲಿ ಎಲ್ಲವನ್ನೂ ತಿಳಿಸುತ್ತೇನೆ. ಬೇಕಾದರೆ ನೀವು(ಮಾಧ್ಯಮದವರೂ) ಇರಿ ಎಂದಿದ್ದರು.
ಇದನ್ನೂ ಓದಿ: ಆಡಿಯೋ ಮಾಡಿ ಬಿಡುವುದು ಯಾವ ಗಟ್ಟಿತನ | ನೇರವಾಗಿ ಬಂದು ಮಾತನಾಡಲಿ
ಆಡಿಯೋ ಮೂಲಕ ಎಲ್ಲೋ ಕುಳಿತು ಮಾತನಾಡುವುದರಲ್ಲಿ ಯಾವ ಗಟ್ಟಿತನ ಇದೆ. ನೇರವಾಗಿ ಬಂದು ಮಾತನಾಡಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ನಮ್ಮ ತಪ್ಪಿದ್ದರೆ ಕ್ಷಮಾಪಣೆಯನ್ನೂ ಕೇಳುತ್ತೇನೆ. ಇದರಲ್ಲಿ ಎರಡನೇ ಮಾತೇ ಇಲ್ಲ ಎಂದು ಪತ್ರಕರ್ತರಿಗೆ ತಿಳಿಸಿದ್ದರು.
ಮುಖಾಮುಖಿ ಚರ್ಚೆಗೆ ಯಾವಾಗ ಬರಲಿ ಎಂದು ಗೂಳಿಹಟ್ಟಿ ಶೇಖರ್:
ಇತ್ತ ಹಾಲಿ ಶಾಸಕರು ಬಹಿರಂಗ ಚರ್ಚೆಗೆ ಬನ್ನಿ ಎನ್ನುವ ಸವಾಲನ್ನು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಒಪ್ಪಿದ್ದು, ಆಡಿಯೋ ಮೂಲಕ ತಮ್ಮ ವಾಟ್ಸಪ್ ಸ್ಟೇಟಸ್‍ನಲ್ಲಿ ಯಾವಾಗ ಬರಲಿ. ನಿಮ್ಮ ಮನೆಗೆ ಬರುತ್ತೇನೆ ಚರ್ಚೆ ಮಾಡೋಣ ಎಂದಿದ್ದಾರೆ.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್
ಗೂಳಿಹಟ್ಟಿ ಶೇಖರ್ ಅವರ ಆಡಿಯೋದ ಪೂರ್ಣ ವಿವರ ಈ ಕೆಳಗಿನಂತಿದೆ.
ಹಿರಿಯರಾದ ಮಾನ್ಯ ಶಾಸಕರಾದ ಗೋವಿಂದಪ್ಪ ಸಾಹೇಬರೇ, ನಾಳೆ, ನಾಡಿದ್ದು ಯಾವಾಗ ಬೇಕಾದರೂ ಮಾತನಾಡೋಣ.
ನಿಮ್ಮ ಮನೆಗೆ ಬರುತ್ತೇನೆ. ಚಿಕನ್ ಮಾಡಿಸುತ್ತಿರೋ, ಮಟನ್ ಮಾಡಿಸುತ್ತಿರೋ, ಬೋಟಿ ಮಾಡಿಸುತ್ತೀರೋ, ಚಿತ್ರನ್ನಾ ಮಾಡಿಸುತ್ತಿರೋ ನೋಡಿ.
ಯಾವಾಗ ಬರಬೇಕು ನೀವೇ ಹೇಳಿ. ಎಷ್ಟು ಜನರನ್ನು ಬೇಕಾದರೂ ಕರೆಸಿಕೊಳ್ಳಿ, ಯಾವ ಮೀಡಿಯಾದವರನ್ನಾದರೂ ಕರೆಯಿಸಿಕೊಳ್ಳಿ.
ಇದನ್ನೂ ಓದಿ: 50 ಸಾವಿರ ಗಡಿ ತಲುಪಿದ ಅಡಿಕೆ ಬೆಲೆ
ನಾವು-ನೀವು ಮುಕ್ತವಾಗಿ ಪರಸ್ಪರ ಮಾತನಾಡೋಣ. ನಾನು 2008ರಲ್ಲಿ ರಾಜಕೀಯಕ್ಕೆ ಬಂದಿದ್ದು, ನೀವು ಮಂಡಲ್ ಪ್ರಧಾನ್‍ರಿಂದ ಬಂದಿದ್ದೀರಿ. ನೀವು ಪ್ರಶ್ನೆ ಹಾಕಿ ನಾನು ಹಾಕುತ್ತೇನೆ. ನ್ಯಾಯ-ಅನ್ಯಾಯ ದೇವರು ಬೀರಲಿಂಗೇಶ್ವರ ತೀರ್ಮಾನ ಮಾಡುತ್ತಾನೆ. ತಪ್ಪು-ಸರಿ ಅಷ್ಟೇ ಸಾಕು.
ನನಗೆ ಪ್ರಿಯವಾದ ರಾಗಿ ಮುದ್ದೆ ಮಾಡಿಸ್ತಿರೋ, ಚಿತ್ರನ್ನಾ ಕೊಡಿಸ್ತಿರೋ ಅಥವಾ ಆಚೆ ಕೂರಿಸಿ ಪ್ಲಾಸ್ಟಿಕ್ ಲೋಟದಲ್ಲಿ ಟೀ ಕೊಡ್ತಿರೋ ಗೊತ್ತಿಲ್ಲ. ನೀವೇ ಫಿಕ್ಸ್ ಮಾಡಿ. ಬೆಳಗ್ಗೆ ಫೋನ್ ಮಾಡುತ್ತೇನೆ.
ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ ಸಾಹೇಬರೆ, ನಿಮ್ಮ ಮರ್ಯಾದೆಯನ್ನು ಅಲ್ಲಗಳೆಯಲು ನನಗೆ ಇಷ್ಟ ಇಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋದಲ್ಲಿ ಹೇಳಿದ್ದಾರೆ.
ಈ ವಾಕ್ ಸಮರ ಎಲ್ಲಿಗೆ ಹೋಗಿ ಮುಟ್ಟತ್ತದೆ ಎನ್ನುವುದನ್ನು ಜಿಲ್ಲೆಯ ಜನರಂತು ಕಾದು ನೋಡುತ್ತಿದ್ದಾರೆ.
