ಹೊಸದುರ್ಗ
ಆಡಿಯೋ ಮಾಡಿ ಬಿಡುವುದು ಯಾವ ಗಟ್ಟಿತನ | ನೇರವಾಗಿ ಬಂದು ಮಾತನಾಡಲಿ | ಗೂಳಿಹಟ್ಟಿಗೆ ಗೋವಿಂದಪ್ಪ ಸವಾಲು

CHITRADURGA NEWS | 16 JANUARY 2024
ಚಿತ್ರದುರ್ಗ: ಗೂಳಿಹಟ್ಟಿ ಶೇಖರ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸುಳ್ಳು. ನಾವು ಅವರ ಆರೋಪವನ್ನು ಅಲ್ಲಗಳೆಯುತ್ತೇವೆ. ದಂಧೆಗಳು ಇದ್ದಿದ್ದೆಲ್ಲಾ ಅವರ ಕಾಲದಲ್ಲಿ. ನಮ್ಮ ಕಾಲದಲ್ಲಿ ಅಂಥದ್ದೇನು ಇಲ್ಲ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ಹಾಲಿ ಶಾಸಕರಾಗಿರುವ ಬಿ.ಜಿ.ಗೋವಿಂದಪ್ಪ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಮರಳು, ಮಣ್ಣು ಅಕ್ರಮ ಸಾಗಾಣೆ ಕುರಿತು ಆರೋಪ ಮಾಡಿದ್ದರು.
ಈ ಸಂಬಂಧ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿದರು.
ಹೊಸದುರ್ಗದಲ್ಲಿ ಅಕ್ರಮ ದಂಧೆಗಳು ನಡೆದಿದ್ದೆಲ್ಲಾ ಅವರ ಕಾಲದಲ್ಲೇ ಹೊರತು, ನಮ್ಮ ಕಾಲದಲ್ಲಿ ಅಲ್ಲ.
ನಾವು ಯಾವ ದಂಧೆಯನ್ನೂ ಮಾಡಿಸಿಲ್ಲ. ಅವರಿದ್ದಾಗ ಮರಳು ಹೊಡೆಸುತ್ತಿದ್ದರು. ಇಸ್ಪೀಟ್ ಆಡಿಸುತ್ತಿದ್ದರು. ಎಲ್ಲಾ ರೀತಿಯ ಕೆಟ್ಟ ದಂಧೆಗಳು ನಡೆದವು. ನಮ್ಮ ಅವಧಿಯಲ್ಲಿ ಅಂತಹ ಯಾವ ಚಟುವಟಿಕೆಗಳೂ ನಡೆದಿಲ್ಲ ಮಾಜಿ ಶಾಸಕ ಗೂಳಿಹಟ್ಟಿ ಮಾತನ್ನು ಅಲ್ಲಗಳೆಯುತ್ತೇವೆ ಎಂದರು.
ಕೆಸರಿನ ಮೇಲೆ ಕಲ್ಲು ಹಾಕಿ ಸಿಡಿಸಿಕೊಳ್ಳಲು ಹೋಗಲ್ಲ. ತಾಕತ್ತಿದ್ದರೆ ನೇರವಾಗಿ ಬಂದು ಮಾತನಾಡಲಿ ಮಾಧ್ಯಮದವರೂ ಇರಿ. ನಾನು ಉತ್ತರ ಕೊಡುತ್ತೇನೆ. ಎಲ್ಲವನ್ನೂ ಎದುರಿನಲ್ಲೇ ಹೇಳುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್
ಎಲ್ಲೋ ಕುಳಿತು ಬರೀ ಆಡಿಯೋ ಮಾಡಿ ಬಿಡುವುದು ಯಾವ ಗಟ್ಟಿತನ. ಎದುರಿಗೆ ಬಂದು ಮಾತನಾಡಲಿ. ನಾವು ತಪ್ಪು ಮಾಡಿದ್ದರೆ ಕ್ಷಮಾಪಣೆ ಕೇಳುತ್ತೇವೆ. ಅದರಲ್ಲಿ ಎರಡು ಮಾತಿಲ್ಲ ಎಂದರು.
ಇ-ಸ್ವತ್ತು ಮಾಡಿಕೊಡಲು 50 ಲಕ್ಷ ಲಂಚ ಕೊಟ್ಟಿದ್ದೆವು:
ಅವರ ಕಾಲದಲ್ಲೂ ಬಹಳಷ್ಟು ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿತ್ತು. ಅವರ ಪಕ್ಷದವರೇ ಪುರಸಭೆ ಅಧ್ಯಕ್ಷರಿದ್ದಾಗ ನಮಗೆ ಬೇಕಾದ ಒಬ್ಬರ ಕಡೆಯಿಂದ ನಾನೇ ಇ-ಸ್ವತ್ತು ಮಾಡಿಕೊಡಲು 50 ಲಕ್ಷ ಲಂಚ ಕೊಡಿಸಿದ್ದೇನೆ. ಕೊಟ್ಟಿರುವುದು ಗ್ಯಾರೆಂಟಿ, ಪಡೆದುಕೊಂಡಿರುವುದು, ತಿಂದಿರುವುದು ಗ್ಯಾರೆಂಟಿ. ಇದರಲ್ಲಿ ಗೂಳಿಹಟ್ಟಿ ಪಾಲಿದೆಯೋ ಇಲ್ಲವೋ ಎನ್ನುವುದನ್ನು ಅವರು ಎದುರಿಗೆ ಬಂದರೆ ಬಹಿರಂಗವಾಗಿಯೇ ಹೇಳುತ್ತೇನೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಲಂಚ ಕೊಡುವುದು ತಪ್ಪು. ಆದರೆ, 25 ಕೋಟಿ ಬಂಡವಾಳ ಹಾಕಿದ್ದಾರೆ. 6 ತಿಂಗಳು ಸತಾಯಿಸಿದ ಕಾರಣ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಆದರೆ, ಈಗ ಅಂತಹ ಒಂದೇ ಒಂದು ದಂಧೆ ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ನಾವು ಸ್ವಚ್ಛ ರಾಜಕಾರಣ ಮಾಡಿಕೊಂಡು ಬಂದವರು.
ಹಿಂದೆ ಪೊಲೀಸ್ ಠಾಣೆ ಗೂಳಿಹಟ್ಟಿ ಕಚೇರಿ ಆಗಿತ್ತು. ಅವರಿಗೆ ಮತ ಹಾಕಿದವರಿಗೂ ಹೊಡೆಸಿದ್ದಾರೆ ಎಂದರು.
ಒಟ್ಟಾರೆ, ಹೊಸದುರ್ಗದಲ್ಲಿ ಹಾಲಿ ಮಾಜಿಗಳ ನಡುವೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇಬ್ಬರೂ ಮುಖಾಮುಖಿ ಆಗುತ್ತಾರಾ ಅಥವಾ ಇಲ್ಲಿಗೆ ಮುಗಿಯುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
