ಮುಖ್ಯ ಸುದ್ದಿ
ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ | ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ಪ್ರತಿಭಟನೆ

CHITRADURGA NEWS | 16 JANUARY 2024
ಚಿತ್ರದುರ್ಗ (CHITRADURGA): ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮವಹಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ. ಆದ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಇದರ ಜೊತೆಗೆ ಎಲ್ಲಾ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಕೂಡಲೇ ಹೆದ್ದಾರಿಯ ಸರ್ವೀಸ್ ರಸ್ತೆಯ ಮಾರ್ಗದ ನಿಲ್ದಾಣಗಳಲ್ಲಿ ಬಸ್ ನಿಲ್ಲುವಂತೆ ಸೂಚಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಅಡಿಕೆ ಬೆಳೆಗೆ ಹನಿ ನೀರಾವರಿ, ನರೇಗಾ ಸೌಲಭ್ಯಕ್ಕೆ ಸಚಿವರ ಒಪ್ಪಿಗೆ
ವಿಜಾಪುರ ಗೊಲ್ಲರಹಟ್ಟಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಸಿರಿಗೆರೆ ಸರ್ಕಾರಿ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಮತ್ತೊಂದು ಬಸ್‍ಗೆ ಕಾಯುತ್ತಿದ್ದಾಗ ಹಿಂಬದಿಯಲ್ಲಿ ಲಾರಿ ಬಂದು ವಿದ್ಯಾರ್ಥಿನಿಗೆ ಡಿಕ್ಕಿಯಾಗಿದೆ. ಆ ವಿದ್ಯಾರ್ಥಿನಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು.

ವಿಜಾಪುರ ಗೊಲ್ಲರಹಟ್ಟಿ ಬಳಿ ದಾವಣಗೆರೆ (ಸ್ನೇಹಮಹಿ) ಬಸ್‍ಗಳು ನಿಲ್ಲಿಸಬೇಕು. ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಕಬ್ಬಿಗೆರೆ, ಅಡವಿಗೊಲ್ಲರಹಳ್ಳಿ ,ಸಿರಿಗೆರೆ, ಹಿರಿಯೂರು, ಹುಳಿಯೂರು ಮಾರ್ಗದ ಗ್ರಾಮಗಳಿಗೆ ಬೆಳಿಗ್ಗೆ 8 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಜಾಲಿಕಟ್ಟೆ, ಈರಜ್ಜನಹಟ್ಟಿ, ಸೊಲ್ಲಾಪುರ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಮೃತಪಟ್ಟ ಸುಚಿತ್ರಾ
ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಸಿದ್ದೇಶ್ ಯಾದವ್, ರಾಜ್ಯ ಕಾರ್ಯಕಾರಣಿ ಕನಕರಾಜ್, ಸುದರ್ಶನ್, ಮಹಿಳಾ ಪ್ರಮುಖ್ ಚೈತ್ರ, ಚಂದನ, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಕಾರ್ಯಕರ್ತರಾದ ಗೌರಿಶಂಕರ, ಸುದೀಪ್, ಮಧು, ಕಾಟಲಿಂಗ, ಮನೋಜ್, ಕೆ.ಮನೋಜ್ ಪಾಲ್ಗೊಂಡಿದ್ದರು.
