ಕ್ರೈಂ ಸುದ್ದಿ
ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಮೃತಪಟ್ಟ ಸುಚಿತ್ರಾ

CHITRADURGA NEWS | 16 JANUARY 2024
ಚಿತ್ರದುರ್ಗ: ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಿಜಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಭರಮಸಾಗರ ಗೊಲ್ಲರಹಟ್ಟಿ ಗ್ರಾಮದ ಬಿಎ ವಿದ್ಯಾರ್ಥಿನಿ ಸುಚಿತ್ರಾ(18) ಮೃತಪಟ್ಟಿದ್ದಾರೆ.

ಲಾರಿ ಅಪಘಾತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಆದಿತ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಾಪುರದಿಂದ ಚಿತ್ರದುರ್ಗಕ್ಕೆ ಕಾಲೇಜಿಗೆ ಬರಲು ಹೆದ್ದಾರಿಯಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾಗ, ಹೆದ್ದಾರಿಯಲ್ಲಿ ಬಂದ KSRTC ಬಸ್ಸಿಗೆ ಕೈ ಮಾಡಿದ್ದು, ಬಸ್ಸಿನವರು ನಿಲ್ಲಿಸದೇ ಹೋಗಿದ್ದಾರೆ. ತಕ್ಷಣ ಹಿಂದೆಯೇ ಬಂದ ಲಾರಿ ಸುಚಿತ್ರಾಗೆ ಡಿಕ್ಕಿಯಾಗಿದೆ.

ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿಗಳ ಮುದ್ದಾದ ಗುದ್ದಾಟ ನೋಡಿ
ಅಪಘಾತದಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ವಿಜಾಪುರ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರ್ವೀಸ್ ರಸ್ತೆ ಮೂಲಕ ಬಸ್ಸುಗಳು ಬಾರದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರು ಹೆದ್ದಾರಿಯಲ್ಲಿ ಬಂದು ಬಸ್ಸು ಹತ್ತಬೇಕಾದ ಪರಿಸ್ಥಿತಿ ಇರುವುದರಿಂದ ಈ ಅಪಘಾತ ನಡೆದಿದೆ. ವಿದ್ಯಾರ್ಥಿನಿ ಬಲಿಯಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭರಮಸಾಗರ ಠಾಣೆಯ ಪೊಲೀಸರು ಆಗಮಿಸಿದ್ದು, ಸಾರ್ವಜನಿಕರನ್ನು ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಜನ ವಾಗ್ವಾದಕ್ಕೆ ಮುಂದಾಗಿದ್ದಾರೆ.
