
CHITRADURGA NEWS | 22 APRIL 2026
ಚಿತ್ರದುರ್ಗ: ಕೇವಲ 32 ವರ್ಷಗಳ ಅಲ್ಪಾವಧಿಯಲ್ಲೇ ಇಡೀ ದೇಶ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರತಿಷ್ಠಾಪಿಸಿದ ಶ್ರೀ ಶಂಕರಾಚಾರ್ಯರ ಜೀವನ ಇಂದಿನ ಪೀಳಿಗೆಗೆ ಆದರ್ಶ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ 25-30 ವರ್ಷಕ್ಕೆ ನಮ್ಮ ಜೀವನದ ದಿಕ್ಕೇನು ಎಂಬ ಗೊಂದಲದಲ್ಲಿ ನಾವಿರುತ್ತೇವೆ. ಆದರೆ ಶಂಕರಾಚಾರ್ಯರು ಆ ವಯಸ್ಸಿನಲ್ಲೇ ದೇಶದ ನಾಲ್ಕೂ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸಿದರು. ಶೃಂಗೇರಿ, ಪುರಿ, ಬದರಿನಾಥ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಾಂಸ್ಕøತಿಕ ಏಕತೆಯನ್ನು ತಂದರು ಎಂದರು.
ಶ್ರೀ ಶಂಕರಾಚಾರ್ಯರು ಕೇವಲ ಆಚಾರ್ಯರಷ್ಟೇ ಅಲ್ಲದೆ, ಮಹಾನ್ ವಿದ್ವಾಂಸರು, ಕವಿಗಳು ಹಾಗೂ ಸಂಗೀತಗಾರರೂ ಆಗಿದ್ದರು. ಅವರ ‘ಭಜಗೋವಿಂದಂ’ ನಂತಹ ಸ್ತೋತ್ರಗಳು ಇಂದಿಗೂ ಜನಪ್ರಿಯವಾಗಿವೆ. ಆತ್ಮ ಮತ್ತು ಪರಮಾತ್ಮ ಒಂದೇ ಎಂಬ ಅದ್ವೈತ ತತ್ವದ ಮೂಲಕ ಭೇದಭಾವಗಳನ್ನು ಮೀರಿದ ಆಧ್ಯಾತ್ಮಿಕ ಅರಿವು ಮೂಡಿಸಿದರು. ಸಮಾಜದಲ್ಲಿದ್ದ ಮೂಢನಂಬಿಕೆಗಳನ್ನು ತೊಡೆದು ಹಾಕಲು ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸಿದ್ದಾರೆ ಎಂದರು.
ಇದನ್ನೂ ಓದಿ: ಕಾರ್ಮಿಕರ ಸಂರಕ್ಷಣಾ ವೇದಿಕೆಯಿಂದ ಬಸವ ಜಯಂತಿ ಆಚರಣೆ
ಸರ್ಕಾರದ ವತಿಯಿಂದ ಇಂತಹ ಮಹಾಪುರುಷರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ಆದರ್ಶಗಳನ್ನು ಸಾರ್ವಜನಿಕರಿಗೆ ತಲುಪಿಸುವುದಾಗಿದೆ. ಶಂಕರಾಚಾರ್ಯರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ತಿಳಿಸಿದರು.
ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಜಗದ್ಗುರು ಆದಿ ಶಂಕರಾಚಾರ್ಯರು ಸಾರಿದ ಅದ್ವೈತ ಸಿದ್ಧಾಂತ ಮತ್ತು ಅವರ ಜೀವನದ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದು ತಿಳಿಸಿದರು.
ಶಂಕರಾಚಾರ್ಯರು ಇಡೀ ಭಾರತ ಸಂಚರಿಸಿ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದರು. ಅವರು ಬೋಧಿಸಿದ ‘ಅದ್ವೈತ’ ಸಿದ್ಧಾಂತವು ಎಲ್ಲರಲ್ಲೂ ದೇವರನ್ನು ಕಾಣು ಎಂಬ ಉದಾತ್ತ ಸಂದೇಶ ಸಾರುತ್ತದೆ. ವಿಧಾನಸೌಧದ ಮೇಲೆ ಕೆತ್ತಲಾಗಿರುವ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ವಾಕ್ಯವು ಶಂಕರಾಚಾರ್ಯರ ತತ್ವಕ್ಕೆ ಹತ್ತಿರವಾಗಿದೆ.
ನಾವು ಯಾವುದೇ ಸ್ಥಾನದಲ್ಲಿದ್ದರೂ ಸಾರ್ವಜನಿಕ ಕೆಲಸವನ್ನು ಭಕ್ತಿಯಿಂದ ಮಾಡಬೇಕು. ಮನುಷ್ಯನಿಗೆ ದೇವರು ಆಲೋಚನಾ ಶಕ್ತಿಯನ್ನು ನೀಡಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆ ಬಳಸಿ ಸನ್ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯವಾಗಿದೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬ ಸಂಸ್ಕಾರ ಮುಖ್ಯ. ಜ್ಞಾನಕ್ಕೆ ಕೊನೆಯಿಲ್ಲ, ಕಲಿಕೆ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಬಸವಣ್ಣ
ಜೀವನದ ಅಂತ್ಯಕಾಲದಲ್ಲಿ ಅಧಿಕಾರ, ಹಣ ಯಾವುದೂ ಬರುವುದಿಲ್ಲ, ಕೇವಲ ಭಕ್ತಿ ಮತ್ತು ನಾವು ಮಾಡಿದ ಸತ್ಕರ್ಮಗಳು ಮಾತ್ರ ಜೊತೆಗಿರುತ್ತವೆ ಎಂಬ ಶಂಕರಾಚಾರ್ಯರ ಭಜ ಗೋವಿಂದಂ ಸಂದೇಶ ಸ್ಮರಿಸಿದ ಅವರು, ನಾನು ಒಳ್ಳೆಯವನಾದರೆ ಸಮಾಜ ಒಳ್ಳೆಯದಾಗುತ್ತದೆ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ಬದುಕಬೇಕು ಎಂದು ಹೇಳಿದರು.
ಶ್ರೀ ಶಂಕರಾಚಾರ್ಯರ ಕುರಿತು ಕೆ.ಆರ್.ರಮಾದೇವಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಚಿತ್ರದುರ್ಗ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ.ಪ್ರಾಣೇಶ್ ರಾವ್, ಮುಖಂಡರಾದ ಶಂಕರ್ ಸೇರಿದಂತೆ ಮತ್ತಿತರರು ಇದ್ದರು. ಮೀನಾಕ್ಷಿ ಭಟ್ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
