
CHITRADURGA NEWS | 22 APRIL 2026
ಚಿತ್ರದುರ್ಗ: ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಹಂಚಿಕೆ ವಿಷಯದಲ್ಲಿ ವಿಳಂಬ ನೀತಿ ಸಲ್ಲದು, ಬರುವ ಏ.24ರಂದು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ಕೈಗೊಂಡು ಎಸ್ಸಿಗಳಲ್ಲಿ ಮನೆ ಮಾಡಿರುವ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ಇದನ್ನೂ ಓದಿ: SJM ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಮೈಲುಗಲ್ಲು | 7 ವೃತ್ತಿಪರ ಕಾಲೇಜು ಸೇರ್ಪಡೆ

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎರಡು ವರ್ಷ ಆಗಿದೆ. ಈಗಾಗಲೇ ಆಂಧ್ರ, ತೆಲಂಗಾಣದಲ್ಲಿ ಜಾರಿಗೊಂಡಿದೆ. ಆದರೆ, ರಾಜ್ಯದಲ್ಲಿ ವಿಳಂಬ ಆಗುತ್ತಿರುವುದು ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದರು.
ಈ ಮಧ್ಯೆ ತೋಟಗಾರಿಕೆ ಇಲಾಖೆ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ್ದು, ಇದು ಇನ್ನಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಬಹಳ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ನನ್ನೊಂದಿಗೆ ಚರ್ಚೆ ವೇಳೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ಬಳಿಕ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಬದ್ಧವೆಂಬ ಹೇಳಿಕೆ ಜೊತೆಗೆ, ಜಾರಿಗೊಳ್ಳುವವರೆಗೂ ಉದ್ಯೋಗ ನೇಮಕಾತಿಗೆ ತಡೆ ನೀಡಿ ಆದೇಶಿಸಿದ್ದರು. ಆದರೆ, ಸಿಎಂ ಅವರ ಆದೇಶ ಉಲ್ಲಂಘಿಸಿ ಕೃಷಿ ಇಲಾಖೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸರಿಯಲ್ಲ.
ಈ ನಡೆ ಅಕ್ಷಮ್ಯ ಅಪರಾಧ ಆಗಲಿದೆ. ಆದ್ದರಿಂದ ಕೂಡಲೇ ಪ್ರಕ್ರಿಯೆ ಹಿಂಪಡೆಯಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ನಿಯೋಗ ತೆರಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಬಸವಣ್ಣ
ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ನೀಡಿದ ಬಳಿಕ ಸರ್ಕಾರ ಕೆಲ ಬದಲಾವಣೆಯೊಂದಿಗೆ ಶೇ.17ರ ಮೀಸಲಾತಿಯಡಿ ಪರಿಶಿಷ್ಟ ಸಮುದಾಯಗಳನ್ನು ಮೂರು ವರ್ಗಗಳನ್ನಾಗಿಸಿ ಎ-6, ಬಿ-6, ಸಿ ಗುಂಪಿಗೆ 5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಯಿತು. ಆದರೆ, ಮೀಸಲಾತಿ ಹೆಚ್ಚಳ ಸಂಬAಧ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮೀಸಲಾತಿಯನ್ನು ಶೇ.15ರಡಿ ಮರು ಹಂಚಿಕೆ ಮಾಡಬೇಕಾಗಿದೆ. ಈ ಕಾರಣಕ್ಕೆ ವಿಳಂಬ ಆಗಿದೆ ಎಂದರು.
ಎಲ್ಲ ಆಯೋಗಗಳು ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು ಶೇ.6 ಮೀಸಲಾತಿ ನೀಡಬೇಕೆಂದು ವರದಿ ನೀಡಿವೆ. ಅದ್ದರಿಂದ ಶೇ.15ರಡಿ ಹಂಚಿಕೆ ವೇಳೆಯೂ ಆಯೋಗಗಳ ವರದಿಯಂತೆ ನಮಗೆ ಹೆಚ್ಚು ಪಾಲು ನೀಡಬೇಕು. ಸಾಮಾಜಿಕ ನ್ಯಾಯದಡಿ ಅಲೆಮಾರಿ ಗುಂಪಿಗೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ನೀಡುವುದು ನ್ಯಾಯಸಮ್ಮತ ನಿರ್ಧಾರವಾಗಲಿದೆ ಎಂದು ತಿಳಿಸಿದರು.
ದಾವಣಗೆರೆ-ಬಾಗಲಕೋಟೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಕಾರಣಕ್ಕೆ ಮುಂದೂಡಲಾಗಿತ್ತು. ಈ ವೇಳೆಯೂ ಕೆಲವರು ಅಪಪ್ರಚಾರ ನಡೆಸಿದರು. ಆದರೆ, ಮಾದಿಗ ಸಮುದಾಯದ ಕಾಂಗ್ರೆಸ್ ನಾಯಕರು ಆರೋಪಗಳಿಗೆ ತಡೆವೊಡ್ಡಿದೇವು. ಈಗ ನಿರೀಕ್ಷೆಯಂತೆ ವಿಶೇಷ ಸಚಿವ ಸಂಪುಟ ಸಭೆಯನ್ನು ಏ.24ರ ಶುಕ್ರವಾರ ಕರೆಯಲಾಗಿದ್ದು, ಈ ಸಭೆಯಲ್ಲಿಯೇ ಅಂತಿಮ ನಿರ್ಧಾರ ಕೈಗೊಂಡು ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಅನೇಕ ಒತ್ತಡಗಳ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ಜನರ ಧ್ವನಿಯಾಗಿ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅವರ ಕುರಿತು ನಮಗೆ ಅದಮ್ಯ ವಿಶ್ವಾಸ, ನಂಬಿಕೆ ಇದೆ. ಬರುವ ಸಚಿವ ಸಂಪುಟದಲ್ಲಿ ಶೇ.15ರಡಿ ಮೀಸಲಾತಿ ಹಂಚಿಕೆ ಮಾಡುವ ಮೂಲಕ ಪರಿಶಿಷ್ಟ ಗುಂಪಿನ ಎಲ್ಲ ಜಾತಿಗಳಿಗೆ ನ್ಯಾಯ ಕಲ್ಪಿಸಲಿದ್ದಾರೆ ಎಂದರು.
ವಿವಿಧ ಕಾರಣಕ್ಕೆ ಮುಂದೂಡುತ್ತಲೇ ಇರುವ ಒಳಮೀಸಲಾತಿಗೆ ಏ.24ರ ವಿಶೇಷ ಸಚಿವ ಸಂಪುಟದಲ್ಲಿ ಆಗಲೇಬೇಕು. ಈ ಸಂಬಂಧ ಸಿದ್ದರಾಮಯ್ಯ ಕೂಡ ನಮಗೆ ಭರವಸೆ ನೀಡಿದ್ದಾರೆ.
ಎರಡು ವರ್ಷಗಳ ಕಾಲ ಒಳಮೀಸಲಾತಿ ಕಾರಣಕ್ಕೆ ಉದ್ಯೋಗ ನೇಮಕಾತಿಗೆ ತಡೆ ನೀಡಿರುವ ಕಾರಣ ಬಹಳಷ್ಟು ವಿದ್ಯಾವಂತ ಯುವಕರು ಹುದ್ದೆಗಳಿಗೆ ಅರ್ಜಿ ಕರೆಯುವುದನ್ನೇ ಕಾಯುತ್ತಿದ್ದಾರೆ. ಆದ್ದರಿಂದ ಮತ್ತಷ್ಟು ವಿಳಂಬ ಮಾಡುವುದರಿಂದ ಬೇರೆ ಸಮುದಾಯದ ಯುವಪೀಳಿಗೆಗೆ ಅನ್ಯಾಯ ಆಗಲಿದೆ ಎಂದರು.
ಮೂರುವರೆ ವರ್ಷಗಳ ಕಾಲ ಹೋರಾಟದ ಹಾದಿ ಸವಿಸಿದ ಮಾದಿಗ ಸಮುದಾಯಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಸತ್ತ ಜನರನ್ನು ಬದುಕಿಸಿದಂತೆ ಆಗಿದೆ. ಜೊತೆಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಈಗಾಗಲೇ ಒಳಮೀಸಲಾತಿ ಜಾರಿಗೊಂಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಅನುಷ್ಠಾನಗೊಂಡಿದೆ. ಈಗ ಉದ್ಯೋಗ ಕ್ಷೇತ್ರಕ್ಕೆ ಅಳವಡಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗಳಿಗೆ 10 ವರ್ಷಗಳ ಬಳಿಕ ಅರ್ಜಿ ಆಹ್ವಾನಿಸಲಾಗಿದೆ. ಈ ಅವಕಾಶ ಸಿಗಬೇಕಾದರೆ ಮತ್ತೇ 10 ವರ್ಷ ಕಾಯಬೇಕಾಗುತ್ತದೆ. ಈ ವಿಷಯದಲ್ಲಿ ಮಾದಿಗರ ಕಣ್ಣೀರು ಹಾಕುತ್ತಿದ್ದಾರೆ. ಆದ್ದರಿಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು. ಒಳಮೀಸಲಾತಿ ಜಾರಿ ಬಳಿಕ ಅರ್ಜಿ ಆಹ್ವಾನಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಿರಣ್ ಚಿಕ್ಕಜಾಜೂರು, ರವೀಂದ್ರ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
