
ಚಿತ್ರದುರ್ಗ ನ್ಯೂಸ್.ಕಾಂ
ಕೋಟೆನಾಡಿನಲ್ಲಿ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಭಕ್ತರು ದೇವರ ದರ್ಶನ ಪಡೆದು ವೈಕುಂಠ ದ್ವಾರದ ಮೂಲಕ ಬರುತ್ತಿದ್ದಾರೆ. ದೇವಸ್ಥಾನಗಳಲ್ಲಿ ಶನಿವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ವೈಕುಂಠ ಏಕಾದಶಿ ಅಂದರೆ ಹಿಂದೂಗಳಿಗೆ ಒಂದು ಸಂಭ್ರಮ. ಈ ದಿನ ದೇವಸ್ಥಾನಕ್ಕೆ ಬಂದು ವೈಕುಂಠನ ದರ್ಶನ ಮಾಡಿದರೆ ಒಳಿತಾಗುತ್ತದೆ ಎನ್ನುವ ನಂಬಿಕೆಯಿದೆ. ಶ್ರೀ ವಿಷ್ಣು ದೇವರಿಗೆ ಪ್ರಿಯವಾದ ದಿನ ವೈಕುಂಠ ಏಕಾದಶಿ.

ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ಈ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಆದುದರಿಂದಲೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ.
ಇದನ್ನೂ ಓದಿ: ಉದ್ಯಮಿ ಮನೆ ದರೋಡೆಗೆ ಚಿತ್ರದುರ್ಗ ಹಣ್ಣಿನ ವ್ಯಾಪಾರಿ ಸಾಥ್; ಉಪ ವಲಯ ಅರಣ್ಯಾಧಿಕಾರಿ ಗ್ಯಾಂಗ್ ಅಂದರ್
ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವೆಂಕಟೇಶ್ವರನಿಗೆ ಪಂಚಾಭಿಷೇಕ, ಪುಷ್ಪಭಿಷೇಕ ಮಾಡಿ ನಂತರ ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತಿದೆ.
ಮುಂಜಾನೆಯಿಂದ ರಾತ್ರಿಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಲಿದ್ದು, ಮಧ್ಯರಾತ್ರಿಯವರೆಗೂ ಭಕ್ತದಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.
ಆರ್ಯವೈಶ್ಯ ಸಂಘದಿಂದ ಚಿತ್ರದುರ್ಗ ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ‘ಭೂವರಾಹ ಸ್ವಾಮಿ ಅವತಾರ ದರ್ಶನ’ ವಿಶೇಷವಾಗಿದೆ. ಭಕ್ತರು ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿ ಶ್ರೀನಿವಾಸ ಲಕ್ಷ್ಮೀ ಪದ್ಮಾವತಿ ದೇವರುಗಳ ಪರಿವಾರವನ್ನು ಕುಳ್ಳಿರಿಸಿರುವ ತೊಟ್ಟಿಲು ಕೆಳಗೆ ಮುಂದಕ್ಕೆ ಸಾಗಿ ನಂತರ ವಿಶೇಷ ಅಲಂಕಾರ ಮತ್ತು ಸುವರ್ಣ, ವಜ್ರಾಂಗಿ ಆಭರಣಗಳಿಂದ ಕಂಗೊಳಿಸುವ ಕನ್ಯಾಕಪರಮೇಶ್ವರಿ ಅಮ್ಮ, ನಗರೇಶ್ವರ ಸ್ವಾಮಿ ಹಾಗೂ ಜನಾರ್ಧನಸ್ವಾಮಿಯ ದರ್ಶನ ಮಾಡುತ್ತಿದ್ದಾರೆ.
ತುರುವನೂರು ರಸ್ತೆಯ ಐತಿಹಾಸಿಕ ವೆಂಕಟರಮಣ ದೇವಸ್ಥಾನ, ಆನೆಬಾಗಿಲ ಬಳಿಯ ಲಕ್ಷ್ಮಿ ವೆಂಕಟೇಶ್ವರ, ತಿಪ್ಪಜ್ಜಿ ವೃತ್ತದ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಜೆಸಿಆರ್ ವೃತ್ತದ ಇಸ್ಕಾನ್ ಮಂದಿರಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ: ಹಿಂಗಾರು– ಹಂಗಾಮು ಬೆಳೆ ಸಮೀಕ್ಷೆ; ರೈತರೇ ಮೊಬೈಲ್ ಬಳಸಿ ಮಾಹಿತಿ ಕಳಿಸಿ
ಚಿಕ್ಕಜಾಜೂರಿನ ರಾಮಕೃಷ್ಣ ದೇವಸ್ಥಾನದಲ್ಲಿ ಪಂಚ ಲೋಹಗಳಿಂದ ತಯಾರಿಸಲಾದ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಮೂರ್ತಿಗಳನ್ನು ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆ 5.15ಕ್ಕೆ ಪ್ರತಿಷ್ಠಾಪಿಸಿ, ವೈಕುಂಠ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ದೇವರಹೊನ್ನಾಳಿಯ ಪುರೋಹಿತ ಶ್ರೀನಿವಾಸ ಮೂರ್ತಿ ಅವರು ಹೋಮ ನಡೆಸಿದರು. ಸಂಜೆ ನಾರಾಯಣ, ಶ್ರೀದೇವಿ ಹಾಗೂ ಭೂದೇವಿಯರ ಉತ್ಸವ ಮೂರ್ತಿಗಳ ಉತ್ಸವ ಮೆರವಣಿಗೆ ಗ್ರಾಮದಲ್ಲಿ ಸಾಗಲಿದೆ.
ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪ್ರಾರಂಭವಾಯಿತು. ಭಕ್ತರಿಂದ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ, ಗೋವಿಂದ ನಾಮಾವಳಿ ಪಠಣ ದೇವಸ್ಥಾನದ ಆವರಣದಲ್ಲಿ ಭಕ್ತಿ ಲೋಕ ಸೃಷ್ಟಿಸಿದವು.
ಹೊಸದುರ್ಗ ತಾಲ್ಲೂಕಿನ ಸಣ್ಣಕ್ಕಿ ಬಾಗೂರು ಗ್ರಾಮದ ಚನ್ನಕೇಶವಸ್ವಾಮಿ ದೇಗುಲದಲ್ಲಿ ಭಕ್ತರು 11 ಮಹಾದ್ವಾರಗಳ ಮೂಲಕ ಚನ್ನಕೇಶವ ಸ್ವಾಮಿಯ ಮೂಲ ಮೂರ್ತಿಯನ್ನು ಸಂದರ್ಶಿಸಿ ನಂತರ ಕೊನೆಯ ಉತ್ತರದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ವಾಮಿಯ ಭೂ ವೈಕುಂಠ ಸೇವಾ ದರ್ಶನ ಪಡೆದರು.
ಮುಂಜಾನೆಯಿಂದಲೇ ಸುಪ್ರಭಾತ ಸೇವೆ, ಮಹಾಭಿಷೇಕ, ತೋಮಾಲೆ ಸೇವೆ, ಅಲಂಕಾರ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಅರ್ಚನೆ, ಮಹಾಮಂಗಳಾರತಿ ನೆರವೇರಿದವು. ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹಾಗೂ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ ಕನಕಧಾಮ ಕೆಲ್ಲೋಡು ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ದೇವರ ದರ್ಶನ ಪಡೆದರು.
ಇದನ್ನೂ ಓದಿ: ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು; ವಿವಿಧೆಡೆ ಅಭಿಯಾನ
ಕಳವೀಭಾಗಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವ 4.30ರಿಂದ ಪೂಜೆ ಆರಂಭವಾದವು. ಪುಣ್ಯಾಹ, ಗಂಗಾಪೂಜೆ, ಮೇಲುದೀಪಾರಾಧನೆ, ನವಗ್ರಹ ಪೂಜೆ, ಅಭಿಷೇಕ ಮತ್ತು ವಿಷ್ಣು ಸಹಸ್ರನಾಮ, ಸ್ವಾಮಿಗೆ ಶಾಂತಿ ಹೋಮ, ಬಲಿ ಪೂರ್ಣಾಹುತಿ, ಸುಮಂಗಲಿಯರಿಂದ ತಂಬಿಟ್ಟಿನ ಆರತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಪೂಜಾ ವಿಧಿಗಳು ಜರುಗಿದವು.
ದೇಗುಲಗಳಲ್ಲಿ ಗೋವಿಂದ, ನಾರಾಯಣ, ಶ್ರೀಹರಿ, ಸಪ್ತಗಿರಿವಾಸ ಶ್ರೀನಿವಾಸ, ಶ್ರೀವೆಂಕಟೇಶ ಸೇರಿದಂತೆ ಶ್ರೀವಿಷ್ಣುವಿನ ನಾನಾ ನಾಮಸ್ಮರಣೆಯ ಘೋಷಗಳು ಮೊಳಗುತ್ತಿವೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
