ಮುಖ್ಯ ಸುದ್ದಿ
ಮಿಂಚೇರಿಗೆ ಹೊಂಟವು ಸಾಲು ಸಾಲು ಎತ್ತಿನ ಬಂಡಿ

ಚಿತ್ರದುರ್ಗ ನ್ಯೂಸ್.ಕಾಂ: ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಕಾಣುವ ಎತ್ತಿನ ಬಂಡಿಗಳ ಸಾಲು, ಗಾಡಿಗಳ ಮೇಲೆ ಗಾಳಿ, ಬಿಸಿಲು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ತಾಡಪಾಲಿನಿಂದ ಮಾಡಿದ ಸವಾರಿ, ನಾಲ್ಕು ದಿನಕ್ಕೆ ಸಾಕಾಗುವಷ್ಟು ಮೇವು, ಖುಷಿ ಖುಷಿಯಿಂದ ನಲಿಯುವ ಪುಟ್ಟ ಪುಟ್ಟ ಮಕ್ಕಳು..
ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು ಚಿತ್ರದುರ್ಗದ ಪಕ್ಕದಲ್ಲೇ ಇರುವ ಬಚ್ಚಬೋರನಹಟ್ಟಿಯಿಂದ ಸಿರಿಗೆರೆ ಬಳಿಯಿರುವ ಮಿಂಚೇರಿಗೆ ಹೊರಟ ಯಾತ್ರೆಯಲ್ಲಿ.
ಹೌದು, ಎಷ್ಟೇ ಆಧುನಿಕತೆ ಇದ್ದರೂ, ಇಂದಿಗೂ ಬುಡಕಟ್ಟು ಮ್ಯಾಸ ನಾಯಕ ಸಮುದಾಯದ ಈ ಜನತೆ ತಮ್ಮ ಆಚರಣೆ. ಸಂಪ್ರದಾಯ, ಸಂಸ್ಕøತಿಯನ್ನು ಕಾಪಾಡಿಕೊಂಡು ಬಂದಿರುವ ಪರಿ ಇದು.

ಇದನ್ನೂ ಓದಿ: ಉದ್ಯಮಿ ಮನೆ ದರೋಡೆಗೆ ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಸಾಥ್
ಮಿಂಚೇರಿ ಬೆಟ್ಟದಲ್ಲಿರುವ ತಮ್ಮ ಕುಲದೇವರು ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಪೂಜೆಗೆಂದು ಇವರು ಹೋಗುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಮಿಂಚೇರಿಗೆ ಹೊರಟ ಯಾತ್ರೆ
ಇಡೀ ಊರಿನ ಸಿಂಹಪಾಲು ಮನೆಗಳಿಗೆ ಅಕ್ಷರಶಃ ಬೀಗ ಹಾಕಿ ಯಾತ್ರೆ ಹೊರಟಿದ್ದಾರೆ. ವಯಸ್ಕರು, ಯಾತ್ರೆಗೆ ಹೋಗಲಾರದವರು, ದನ ಕರುಗಳಿದ್ದರೆ ಮೇವು ನೀರು ನೋಡಿಕೊಳ್ಳಲು ಒಂದಿಷ್ಟು ಜನ ಹಾಗೂ ಊರಿನ ರಕ್ಷಣೆಗೆ ಮತ್ತೊಂದಿಷ್ಟು ಜನ ಮಾತ್ರ ಊರಲ್ಲಿದ್ದಾರೆ. ಉಳಿದಂತೆ ಇನ್ನೂ ನಾಲ್ಕು ದಿನ ಬಚ್ಚಬೋರನಹಟ್ಟಿ ಗ್ರಾಮಕ್ಕೆ ಪೊಲೀಸರ ಕಣ್ಗಾವಲಿರುತ್ತದೆ.
ಕಳೆದೊಂದು ತಿಂಗಳಿನಿಂದ ಮಿಂಚೇರಿ ಯಾತ್ರೆಗೆ ತಯಾರಿ ಮಾಡಿಕೊಂಡಿರುವ ಬಚ್ಚಬೋರನಹಟ್ಟಿ ಜನತೆ ಸುಮಾರು 200ಕ್ಕಿಂತ ಹೆಚ್ಚು ಎತ್ತಿನ ಗಾಡಿಗಳು, 50ಕ್ಕಿಂತ ಹೆಚ್ಚು ಟ್ರ್ಯಾಕ್ಟರ್, ಟೆಂಪೊ, ಕಾರುಗಳಲ್ಲಿ ಯಾತ್ರೆಗೆ ತೆರಳಿದರು.
ಎಲ್ಲ ಗಾಡಿಗಳ ಮೇಲೆ ಸವಾರಿ, ಸವಾರಿಯ ಮೇಲೆ ಮನೆಯ ಮಕ್ಕಳು, ಗಾದ್ರಿಪಾಲನಾಯಕ ಸ್ವಾಮಿ ಭಾವಚಿತ್ರ, ಮದಕರಿ ನಾಯಕ, ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಕಟ್ಟಿಕೊಂಡು ಸಂಭ್ರಮದಿಂದ ತೆರಳುವ ದೃಶ್ಯಗಳನ್ನು ರಸ್ತೆ ಬದಿ ನಿಂತ ಸಾವಿರಾರು ಜನ ಕಣ್ತುಂಬಿಕೊಂಡರು.

ಮಿಂಚೇರಿಗೆ ಹೊರಟ ಯಾತ್ರೆ
ಇದನ್ನೂ ಓದಿ: ಕೋಟೆನಾಡಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ
ಯಾತ್ರೆಗಾಗಿ ಎತ್ತುಗಳಿಗೂ ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು. ಕಾಲ್ಗೆಜ್ಜೆ, ಕೊಂಬುಗಳಿಗೆ ಬಣ್ಣ ಬಣ್ಣದ ಟೇಪು, ಬೆನ್ನ ಮೇಲೆ ಬಟ್ಟೆ, ಕೊಂಬಣಸು, ಕೊರಳಿಗೆ ಗಂಟೆ ಕಟ್ಟಿ ಒಂದರ ಹಿಂದೆ ಒಂದರಂತೆ ಎತ್ತಿನ ಬಂಡಿಗಳು ಸಾಗುವ ದೃಶ್ಯ ಸೊಗಸಾಗಿತ್ತು.
ಶನಿವಾರ ನಸುಕಿನಲ್ಲೇ ಎದ್ದು ಇಡೀ ಗ್ರಾಮದ ಜನತೆ ಸ್ನಾನ ಮಾಡಿ, ದೇವರ ಪೂಜಾ ಕಾರ್ಯಗಳನ್ನು ಮಾಡಿಕೊಂಡು, ಊರ ದೇವರಿಗೂ ಪೂಜೆ ಸಲ್ಲಿಸಿ ನಂತರ ದೇವರನ್ನು ಗಂಗಾ ಪೂಜೆಗೆ ಕರೆದುಕೊಂಡು ಹೋಗಿ ಬಂದು, ದೇವರ ಹಿಂದೆ ಇಡೀ ಊರೇ ಹೊರಗೆ ಬಂದಿತು.
ಮಿಂಚೇರಿ ಯಾತ್ರೆ ಸೀಬಾರ ಬಳಿ ಬಂದಾಗ ಸೀಬಾರ ಗ್ರಾಮಸ್ಥರು ಮಜ್ಜಿಗೆ ವಿತರಣೆ ಮಾಡಿದರು.
ಮಿಂಚೇರಿ ಯಾತ್ರೆ ಹೇಗೆ ಸಾಗುತ್ತದೆ, ಏನೇನು ಕಾರ್ಯಕ್ರಮ ಇರುತ್ತವೆ:
ಬುಡಕಟ್ಟು ಸಂಸ್ಕøತಿಯ ಆಚರಣೆಗಳಲ್ಲಿ ಒಂದಾಗಿರುವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಅನಾದಿ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ.
ದೇವರ ಮುತ್ತಯ್ಯಗಳ ಆಗಮನವಾದ ನಂತರ ಬೆಳಿಗ್ಗೆ 7ಕ್ಕೆ ದೇವರ ಮಜ್ಜನಬಾವಿಯಲ್ಲಿ ಗುರು-ಹಿರಿಯರೊಂದಿಗೆ ಗಂಗಾಪೂಜೆ ಹಾಗೂ ಬೆಳಿಗ್ಗೆ 11.30ಕ್ಕೆ ಮಿಂಚೇರಿ ಯಾತ್ರಾ ಮಹೋತ್ಸವ ಆರಂಭವಾಗುತ್ತದೆ.
ದೇವರ ಮುತ್ತಯ್ಯಗಳೊಂದಿಗೆ ಊರಿನಿಂದ ನಿರ್ಗಮಿಸಿ ಅಲ್ಲಿಂದ ಕಕ್ಕಲು ಬೆಂಚಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಮುಂದುವರೆಯುತ್ತದೆ. ಇಂದು ಸಂಜೆ 7ಕ್ಕೆ ಕ್ಯಾಸಾಪುರದ ಬಯಲಿನಲ್ಲಿ ಸ್ವಾಮಿಗೆ ಪೂಜೆ ಎಲ್ಲ ಗಾಡಿಗಳನ್ನು ನಿಲ್ಲಿಸಿ ಅಲ್ಲಿಯೇ ರಾತ್ರಿ ಬಿಡಾರ ಊಡಲಾಗುತ್ತದೆ. ರಾತ್ರಿ ಭಜನೆ, ಕೋಲಾಟ, ಸೋಬಾನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.

ಮಿಂಚೇರಿಗೆ ಹೊರಟ ಯಾತ್ರೆ
ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ಉದ್ಯೋಗಾವಕಾಶ
ನಾಳೆ ಬೆಳಗ್ಗೆ ಅಂದರೆ ಡಿ.24ರಂದು ಬೆಳಿಗ್ಗೆ 7ಕ್ಕೆ ಸಕಲ ಸ್ವಾಮಿಯ ಪೂಜೆ ನಂತರ ಯಾತ್ರೆ ಮುಂದುವರೆಯುತ್ತದೆ. ಮಧ್ಯಾಹ್ನ 12ಕ್ಕೆ ಸಿರಿಗೆರೆ ಡಿ.ಮದಕರಿಪುರ ವರತಿನಾಯಕನ ಕೆರೆಯ ದಂಡೆಯಲ್ಲಿ ಊಟ, ವಿಶ್ರಾಂತಿ. ನಂತರ ಕೆರೆಯ ದಂಡೆಯಲ್ಲಿ ಪೂಜೆ ಮುಗಿಸಿ ಪಶುಪಾಲಕರಾದ ಗಾದ್ರಿಪಾಲನಾಯಕ ಸ್ವಾಮಿಯ ಸುಕ್ಷೇತ್ರ ಮಿಂಚೇರಿಗೆ ಪಯಣ ಆರಂಭವಾಗಲಿದೆ.
ಸಂಜೆ 5ಕ್ಕೆ ಸ್ವಾಮಿಯ ಮೀಸಲು ಹಾಲಿನ ಕಂಬಿಯ ಪೂಜೆ. ರಾತ್ರಿ ಗುರು-ಹಿರಿಯರ ಸಾಂಪ್ರದಾಯಿಕ ಪೂಜೆ ನಂತರ ಬೀಡು ಬಿಡಲಾಗುವುದು. ಮಧ್ಯರಾತ್ರಿ ಕಂಚವ್ವ, ಕಾಮವ್ವರ ಚಿಲುಮೆ, ಗಂಗಮ್ಮನ ಮಹಾಪೂಜೆ. ಕೋಲಾಟ, ಭಜನೆ, ಸೋಬಾನೆ ಹಾಗೂ ಇತರೆ ಕಾರ್ಯಕ್ರಮಗಳು ನಡೆಯುತ್ತವೆ.
ಡಿ.25ರಂದು ಬೆಳಿಗ್ಗೆ 5ಕ್ಕೆ ಸ್ವಾಮಿಯ ಪೂರ್ವಿಕರ ವಿಧಿ-ವಿಧಾನಗಳೊಂದಿಗೆ ಹುಲಿರಾಯನ ಸಮಾಧಿಗೆ ಪೂಜೆ. ನಾಯಕನ ಸಮಾಧಿಗೆ ಪೂಜೆ ಹಾಗೂ ಮಣೆವು ಕಾರ್ಯಕ್ರಮ. ನಂತರ ಮಧ್ಯಾಹ್ನ 2ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣೆವು ಕಾರ್ಯಕ್ರಮ. ಸಂಜೆ 4ಕ್ಕೆ ಕಣಿವೆ ಮಾರಮ್ಮ, ಮಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ. ಸಂಜೆ 7ಕ್ಕೆ ಸ್ವಾಮಿಗೆ ಪೂಜೆ ನಂತರ ಭಕ್ತಾಧಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಮಿಂಚೇರಿ ಯಾತ್ರೆಗೆ ಚಾಲನೆ ನೀಡಿದ ಮಾದಾರ ಚನ್ನಯ್ಯ ಶ್ರೀ
ಡಿ.26ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಯು ಜಂಗಮ ಸ್ವರೂಪಿಯಾಗಿ ಭಿಕ್ಷೆ ಸ್ವೀಕಾರ ಕಾರ್ಯಕ್ರಮ. ಬೆಳಿಗ್ಗೆ 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ದಾಸೋಹ. ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನ. ರಾತ್ರಿ 7ಕ್ಕೆ ಕಡ್ಲೇಗುದ್ದು ಬಳಿಯ ಸಿದ್ದರ ಗುಂಡಿಗೆ ಆಗಮನ. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಬೀಡು ಬಿಡುವುದು.
ಡಿ.27ರಂದು ಬೆಳಿಗ್ಗೆ 7ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸಿ ಬೆಳಿಗ್ಗೆ 10ಕ್ಕೆ ಕ್ಯಾಸಾಪುರ ಹತ್ತಿರ ಜನಿಗಿಹಳ್ಳದ ದಂಡೆಯಲ್ಲಿ ವಿಶ್ರಾಂತಿ ಮತ್ತು ಸ್ವಾಮಿಯ ಸಂಪ್ರಾದಾಯದಂತೆ ಜನಿಗಿ ಹಳಕ್ಕೆ ಗಂಗಾಪೂಜೆ ನಡೆಯುತ್ತದೆ. ನಂತರ ಯಾತ್ರೆ ಮುಂದುವರೆಯಲಿದೆ. ಮಧ್ಯಾಹ್ನ 2ಕ್ಕೆ ಚಿತ್ರದುರ್ಗಕ್ಕೆ ಮಿಂಚೇರಿ ಮಹೋತ್ಸವದ ಮೆರವಣಿಗೆ ಆಗಮನವಾಗಲಿದೆ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ, ಕೋಲಾಟ, ಭಜನೆ, ಉರುಮೆ, ಕುಣಿತ, ತಮಟೆ, ವಾದ್ಯಗಳೊಂದಿಗೆ ಕಹಳೆಯ ನಾದದೊಂದಿಗೆ ಜನಪದ ನೃತ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಸುಕ್ಷೇತ್ರ ಕಕ್ಕಲು ಬೆಂಚಿನಲ್ಲಿ ಬೀಡು ಬಿಡುವುದು.
ಡಿ.28ರಂದು ಸಂಜೆ 7ಕ್ಕೆ ಸ್ವಾಮಿಯ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳುವುದು. ಗುರು-ಹಿರಿಯರೊಂದಿಗೆ ದೇವರ ಮುತ್ತಯ್ಯಗಳ ಬೀಳ್ಕೊಡುಗೆ ನಡೆಯಲಿದೆ.
ಮಿಂಚೇರಿ ಯಾತ್ರೆಗೆ ಚಾಲನೆ ನೀಡಿದ ಮಾದಾರ ಚನ್ನಯ್ಯ ಶ್ರೀ:
ಬಚ್ಚಬೋರನಹಟ್ಟಿ ಗ್ರಾಮದಿಂದ ಬಂದ ಮಿಂಚೇರಿ ಯಾತ್ರೆಗೆ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿ ಮಾದಾರ ಚನ್ನಯ್ಯ ಶ್ರೀಗಳು ಪುಷ್ಪವೃಷ್ಠಿ ಮಾಡಿ ಚಾಲನೆ ನೀಡಿದರು. ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು, ಸಿ.ಟಿ.ಕೃಷ್ಣಮೂರ್ತಿ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ದೀಪು, ಮುಖಂಡರಾದ ಗೋಪಾಲಸ್ವಾಮಿ ನಾಯಕ, ಅಂಜಿನಪ್ಪ, ಗ್ರಾಮದ ಮುಖಂಡರಾದ ಬೋರಯ್ಯ, ರಮೇಶ್, ನೆಲಗೆತನ ಬೋರಯ್ಯ, ಬಸವರಾಜು, ಬಿ.ಬೋರಯ್ಯ, ಪ್ರಹ್ಲಾದ್, ಸಣ್ಣ ಬೋರಯ್ಯ, ಪಾಲಯ್ಯ, ಪಾಪಣ್ಣ, ಮೂರ್ತಿ, ದೀಪು, ಕಾಟಿಹಳ್ಳಿ ಕರಿಯಣ್ಣ, ಸಣ್ಣ ಹನುಮಂತಸ್ವಾಮಿ ಮತ್ತಿತರರಿದ್ದರು.
