
ಚಿತ್ರದುರ್ಗ ನ್ಯೂಸ್.ಕಾಂ
ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಪ್ರಕರಣದಲ್ಲಿ ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಪ್ರಮುಖ ಪಾತ್ರವಹಿಸಿರುವುದು ಬೆಳಕಿಗೆ ಬಂದಿದೆ. ಉದ್ಯಮದಲ್ಲಿ ನಷ್ಟ ಅನುಭವಿಸಿದ್ದ ಕಾರಣ ಉಪ ವಲಯ ಅರಣ್ಯಾಧಿಕಾರಿ ಜತೆ ಸೇರಿ ಬೆಂಗಳೂರು ನಗರದ ಎಚ್‌ಎಂಟಿ ಬಡಾವಣೆಯಲ್ಲಿರುವ ಉದ್ಯಮಿಯೊಬ್ಬರ ಮನೆ ದರೋಡೆ ನಡೆಸಿದ್ದ ಹತ್ತು ಮಂದಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಡಿ.4ರಂದು ರಾತ್ರಿ ಎಚ್‌ಎಂಟಿ ಬಡಾವಣೆಯ ಉದ್ಯಮಿ ಎಸ್‌ಎನ್ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಮನೆಗೆ ಪೊಲೀಸರ ವೇಷದಲ್ಲಿ ನುಗ್ಗಿದ್ದ ತಂಡ ದರೋಡೆ ನಡೆಸಿತ್ತು. ಸಂಬಂಧ ಉದ್ಯಮಿ ಪೀಣ್ಯ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಹಿಂಗಾರು– ಹಂಗಾಮು ಬೆಳೆ ಸಮೀಕ್ಷೆ; ರೈತರೇ ಮೊಬೈಲ್ ಬಳಸಿ ಮಾಹಿತಿ ಕಳಿಸಿ
ತುಮಕೂರಿನ ಎ.ಸುರೇಶ್ (33), ಚಿಕ್ಕಮಗಳೂರು ಮೂಲದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಉಪ ವಲಯ ಅರಣ್ಯಾಧಿಕಾರಿ ಎಸ್.ಬಿ. ಸುರೇಂದ್ರ (40), ಚಿತ್ರದುರ್ಗ ಹಣ್ಣಿನ ವ್ಯಾಪಾರಿ ಆರ್.ಎಸ್.ಶ್ರೀಧರ್ (27), ನೆಲಮಂಗಲದ ಫೈನಾನ್ಸಿಯರ್ ವಸಂತ್ ಕುಮಾರ್ (41), ಅನಿಲ್ ಕುಮಾರ್ (34), ಕ್ಯಾಬ್ ಚಾಲಕ ಡಿ.ನಾಗರಾಜ್ (33), ಕೆ.ಜಿ.ಹಳ್ಳಿಯ ರೌಡಿಗಳಾದ ನವಾಜ್ ಪಾಷಾ (27) ಶೇಕ್ ಷಹಬಾಜ್ ಖಲಂದರ್ (27) ಮತ್ತು ಸಹಚರರಾದ ರಾಹಿಲ್ ಪಾಷಾ (26), ಉಸ್ಮಾನ್ ಖಾನ್ (24) ಬಂಧಿತರು.
ಇದನ್ನೂ ಓದಿ: ದತ್ತ ಪೀಠಕ್ಕೆ ದತ್ತಮಾಲಾಧಾರಿಗಳು; ವಿವಿಧೆಡೆ ಅಭಿಯಾನ
ಬಂಧಿತ ಆರೋಪಿಗಳಿಂದ 273 ಗ್ರಾಂ ಚಿನ್ನಾಭರಣ, ₹ 23.37 ಲಕ್ಷ ನಗದು, 370 ಗ್ರಾಂ ಬೆಳ್ಳಿ ಸಾಮಗ್ರಿ, 13 ಮೊಬೈಲ್‌ಗಳು, 2 ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಘಟನೆ ವಿವರ: ಮಾಲೀಕ ಮನೋಹರ್ ಕಂಪನಿಯಲ್ಲಿ ಲಾರಿ ಚಾಲಕನಾಗಿದ್ದ ಆರೋಪಿ ನಾಗರಾಜ್ ವೈಯಕ್ತಿಕ ಕಾರಣಕ್ಕೆ 2022ರ ಡಿಸೆಂಬರ್‌ನಲ್ಲಿ ಕೆಲಸ ಬಿಟ್ಟಿದ್ದ. ಮಾಲೀಕರ ಹಣಕಾಸು ವ್ಯವಹಾರದ ಬಗ್ಗೆ ಚೆನ್ನಾಗಿ ತಿಳಿದು ಕೊಂಡಿದ್ದ ನಾಗರಾಜ್ ಕೆಲಸ ಬಿಟ್ಟ ಬಳಿಕ ಸ್ನೇಹಿತ ಅನಿಲ್ ಕುಮಾರ್ ಬಳಿ ಎಲ್ಲವನ್ನು ಹೇಳಿದ್ದ.
ಇದೇ ವೇಳೆ ಸಾಲದ ಸುಳಿ ಹಾಗೂ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದ ವಸಂತ್, ಅನಿಲ್ ಕುಮಾರ್ ಇಬ್ಬರು ಜತೆಯಾಗಿ ಚಿತ್ರದುರ್ಗದ ಶ್ರೀಧರ್ ಹಾಗೂ ತುಮಕೂರಿನ ಎ.ಸುರೇಶ್ ಮೂಲಕ ಉಪ ವಲಯ ಅರಣ್ಯಾಧಿಕಾರಿ ಎಸ್.ಬಿ. ಸುರೇಂದ್ರನನ್ನು ಸಂಪರ್ಕಿಸಿ ತಂಡ ಮಾಡಿಕೊಂಡು ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೋಹರ್ ಮನೆಗೆ ನುಗ್ಗಿ ದರೋಡೆ ನಡೆಸಲು ಸಂಚು ರೂಪಿಸಿದ್ದರು.
ಅರಣ್ಯ ಇಲಾಖೆ ಸಮವಸ್ತ್ರದಲ್ಲಿದ್ದ ಸುರೇಂದ್ರ, ಮನೋಹರ್ ಮನೆಗೆ ಹೋಗಿ ಬಾಗಿಲು ಬಡಿದಿದ್ದ. ತಾಯಿ ಜೊತೆಗಿದ್ದ ಪುತ್ರ ರೂಪೇಶ್ ಬಾಗಿಲು ತೆಗೆದಿದ್ದರು. ನಾನು ಪೊಲೀಸ್ ಅಧಿಕಾರಿ. ನಿಮ್ಮ ಮನೆ ಪರಿಶೀಲನೆಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಕೆಲ ಕ್ಷಣಗಳಲ್ಲಿ ಇತರೆ ಆರೋಪಿಗಳು ಮನೆಯೊಳಗೆ ನುಗ್ಗಿ,ಮಾರಕಾಸ್ತ್ರ ತೋರಿಸಿ ಚಿನ್ನಾಭರಣ, ನಗದು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಅರಣ್ಯಾಧಿಕಾರಿ ಸುರೇಂದ್ರನ ಮೊಬೈಲ್ ಸಂಖ್ಯೆ ಸಕ್ರೀಯವಾಗಿತ್ತು. ಸಿಡಿಆರ್ ಪರಿಶೀಲಿಸಿದಾಗ ಸುರೇಂದ್ರನ ಜತೆಗೆ ಶ್ರೀಧರ್, ವಸಂತ್ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಬಳಿಕ ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳು ಚಿತ್ರದುರ್ಗ, ಕೊಡೆಕೆನಾಲ್‌ನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರಣ್ಯಾಧಿಕಾರಿ ಸುರೇಂದ್ರ ಜೂಜಾಟದ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ವಿಚಾರ ತಿಳಿದಿದ್ದ ಚಿತ್ರದುರ್ಗದ ಚಿತ್ರದುರ್ಗದ ಶ್ರೀಧರ್ ಹಾಗೂ ತುಮಕೂರಿನ ಎ.ಸುರೇಶ್ ಹಣದಾಸೆ ತೋರಿಸಿ ದರೋಡೆಗೆ ಒಪ್ಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
