
CHITRADURGA NEWS | 19 JANUARY 2026
ಚಿತ್ರದುರ್ಗ: ಕೋವಿಡ್ ಸಂಕಟ ಕಾಲದಲ್ಲಿ ಇಡೀ ಜಗತ್ತೇ ತಲ್ಲಣಿಸಿ ಹೋಗಿತ್ತು. ಬದುಕಿದರೆ ಸಾಕಪ್ಪ ಎಂದು ಜನ ಪರದಾಡಿದ ಕಾಲವದು. ಸತ್ತವರಿಗೆ ಸರಿಯಾದ ಮೋಕ್ಷವನ್ನೇ ಕೊಡಲಾಗದ ಕಾಲವದು.
ಆದರೆ, ಭ್ರಷ್ಟ ಅಧಿಕಾರಿಗಳಿಗೆ ಜನ ನರಳುವ ಕಾಲ ಕೂಡಾ ದುಡ್ಡು ಮಾಡುವ ಕಾಲವಾಗಿತ್ತು ಎನ್ನುವ ವರದಿ ಬಹಿರಂಗವಾಗಿದೆ.
ಇದನ್ನೂ ಓದಿ: ಬಿ.ಇಡಿ ಫಲಿತಾಂಶ | 10ನೇ ರ್ಯಾಂಕ್ ಪಡೆದ ಎಚ್.ಆಶಾ
ಹೌದು, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಇಂಥದ್ದೊಂದು ಅಮಾನವೀಯ ವರದಿ ಚರ್ಚೆಗೆ ಮುನ್ನುಡಿ ಬರೆದಿದೆ.
ಕೋವಿಡ್ ಕಾಲದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಈ ಹಿಂದಿನಿಂದಲೂ ಆರೋಪ, ಪ್ರತ್ಯರೋಪ ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ತನಿಖೆಗಾಗಿ ಸರ್ಕಾರಿ ನ್ಯಾ.ಮೈಕಲ್ ಕುನ್ಹಾ ನೇತೃತ್ವದ ಆಯೋಗ ರಚಿಸಿತ್ತು.
ಇದನ್ನೂ ಓದಿ: ಸಚಿವ ಕೆ.ಹೆಚ್.ಮುನಿಯಪ್ಪ ಚಿತ್ರದುರ್ಗ ಜಿಲ್ಲಾ ಪ್ರವಾಸ
ತನಿಖೆ ನಡೆಸಿದ ಆಯೋಗ ವರದಿ ಸಲ್ಲಿಕೆ ಮಾಡಿದ್ದು, ಈ ವರದಿಯ ಕೆಲ ತುಣುಕುಗಳನ್ನಷ್ಟೇ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸಭೆಯ ಗಮನಕ್ಕೆ ತಂದರು. ವಿಶೇಷವಾಗಿ ಈ ಅಂಶಗಳು ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ್ದವು.
ಚಿತ್ರದುರ್ಗ ಜಿಲ್ಲೆಯಲ್ಲೇ 38.47 ಕೋಟಿ ಅಕ್ರಮ:
ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ್ದ ಸಂದರ್ಭದಲ್ಲಿ ಎಸ್‍ಡಿಆರ್‍ಎಫ್ (ರಾಜ್ಯ ವಿಪತ್ತು ಪರಿಹಾರ ನಿಧಿ), ಡಿಎಂಎಫ್ (ಖನಿಜ ನಿಧಿ) ಹಾಗೂ ಸಿಎಸ್‍ಆರ್ ನಿಧಿಯಡಿ ಆರೋಗ್ಯ ಇಲಾಖೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್, ಔಷಧಿ ಹಾಗು ಸಾಧನ ಸಲಕರಣೆಗಳನ್ನು ಖರೀದಿಸಲು ಅನುದಾನ ಒದಗಿಸಲಾಗಿತ್ತು.
ಇದನ್ನೂ ಓದಿ: ಮನೆಗೆ ಬಂದ ವೀರೇಂದ್ರ ಪಪ್ಪಿ ಕಂಡು ವಾಚ್‌ಮೆನ್ ಮಾಡಿದ್ದೇನು ನೋಡಿ..
ಔಷಧಿ, ಪಿಪಿಇ ಕಿಟ್ ಸೇರಿದಂತೆ ಇತರೆ ವೈದ್ಯಕೀಯ ಸಾಮಗ್ರಿಗಳ ನೈಜ ದರವನ್ನು ಸಂಬಂಧಪಟ್ಟ ಅಧಿಕೃತ ಫಾರ್ಮಸಿಸ್ಟ್ ಅವರಿಂದ ಇನ್ನೊಮ್ಮೆ ಪಡೆದು, ಪರಿಶೀಲಿಸಿ, ಬಳಿಕ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕಾಗುತ್ತದೆ. ಜನ ಸಾಯುತ್ತಿರುವಾಗಲೂ ಇದರಲ್ಲೂ ಹಗರಣ ಮಾಡಿರುವುದು ವಿಷಾದನೀಯ.
| ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ.
ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‍ಡಿಆರ್‍ಎಫ್ ಅಡಿಯಲ್ಲಿ ಸುಮಾರು 30 ಕೋಟಿ ರೂ., ಡಿಎಂಎಫ್‍ನಲ್ಲಿ 46 ಕೋಟಿ ರೂ. ಹಾಗೂ ಸಿಎಸ್‍ಆರ್ ನಿಧಿಯಡಿ 30 ಕೋಟಿಗಿಂತಲೈ ಹೆಚ್ಚು ಅನುದಾನ ಒದಗಿಸಲಾಗಿದೆ.
ಈ ಪೈಕಿ 38.46 ಕೋಟಿ ರೂ. ಗಳ ಮೊತ್ತದಲ್ಲಿ ಕಿಟ್, ಔಷಧಿ ಮತ್ತಿತರೆ ಸಾಮಗ್ರಿಗಳ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ಇಲ್ಲ ಎಂಬುದಾಗಿ ಆಯೋಗವು ವರದಿ ನೀಡಿದೆ.
42 ಪೈಸೆಯ ಪ್ಯಾರಾಸೆಟಮಾಲ್ ಮಾತ್ರೆಗೆ 87 ಪೈಸೆ, ಆರ್‌ಎಟಿ ಪರೀಕ್ಷೆಗೆ 87 ರೂ. ಇದ್ದರೆ 168 ರೂ. ಬಿಲ್ ಮಾಡಲಾಗಿದೆ.
ನ್ಯಾ.ಕುನ್ಹಾ ಅವರು ಸಲ್ಲಿಸಿರುವ ಜಿಲ್ಲೆಗೆ ಸಂಬಂಧಿಸಿದ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಮತ್ತೊಮ್ಮೆ ತನಿಖೆ ಕೈಗೊಂಡು, ಔಷಧಿ ಮತ್ತಿತರ ಸಾಮಗ್ರಿ ಖರೀದಿಯಲ್ಲಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾದರೂ ಕೂಡ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
| ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು.
ಪಿಪಿಇ ಕಿಟ್, ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಮುಂತಾದ ಖರೀದಿಗಳಲ್ಲಿ ಆಗಿರುವ ಲೋಪದೋಷಗಳನ್ನು ಆಯೋಗವು ವರದಿಯಲ್ಲಿ ವಿವರವಾಗಿ ಎತ್ತಿ ತೋರಿಸಿದೆ.
ಸಾಮಾಗ್ರಿ ಖರೀದಿ ಪರಿಶೀಲನೆಗೆ ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ನೇಮಕ:
ಸಿಎಸ್‍ಆರ್ ನಿಧಿಯಡಿ ಖರೀದಿಸಿರುವ ಔಷಧಿ, ಕಿಟ್ ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಲು ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಯ ಗಮನಕ್ಕೆ ತಂದರು.
ಸಾಂಕ್ರಾಮಿಕ ರೋಗ ಉಲ್ಬಣ ಸಂದರ್ಭದಲ್ಲಿ ಜನ ಸಾಯುತ್ತಿರುವಾಗಲೂ, ಔಷಧಿ ಮತ್ತಿತರೆ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ಮಾಡಿದ್ದಲ್ಲಿ, ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ.
| ಡಾ.ಎಂ.ಚಂದ್ರಪ್ಪ, ಹೊಳಲ್ಕೆರೆ ಶಾಸಕರು.
—-
ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಆಗಲಿ, ಇದು ಕೇವಲ ವರದಿ ಸಲ್ಲಿಕೆಗೆ ಸೀಮಿತ ಆಗುವುದು ಬೇಡ.
| ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
