ಮುಖ್ಯ ಸುದ್ದಿ
ಭರವಸೆ ಮೂಡಿಸಿದ ವರ್ಷದ ಮೊದಲ ಮಳೆ | ನಿರಾಳರಾದ ಕೃಷಿಕರು

CHITRADURGA NEWS | 13 APRIL 2024
ಚಿತ್ರದುರ್ಗ: ಬರದ ತೀವ್ರತೆ, ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದ ಬಿಸಿಲು ಅನ್ನದಾತರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ನೂಕಿತ್ತು. ಆದರೆ ಶುಕ್ರವಾರ ಸಂಜೆ ಬಂದ ವರ್ಷದ ಮೊದಲ ಮಳೆ ವಾತಾವರಣವನ್ನು ತಂಪಾಗಿಸಿದೆ. ಜತೆಗೆ ಕೃಷಿಕರಲ್ಲಿ ಕೊಂಚ ಆಶಾಭಾವನೆ ಮೂಡಿಸಿದೆ.
ಮಧ್ಯಾಹ್ನದಿಂದಲೇ ವಾತಾವರಣ ಮಳೆಯ ಮುನ್ಸೂಚನೆ ನೀಡಿತ್ತು. ಸಂಜೆ ಆಗುತ್ತಿದ್ದಂತೆ ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿಯಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಭೂಮಿ ತಂಪಾಯಿತು. ಜೋರಾಗಿ ಬೀಸಿದ ಗಾಳಿಯೊಂದಿಗೆ ಗುಡುಗು, ಮಿಂಚು ಕಾಣಿಸಿಕೊಂಡಿತು. ತುಂತುರು ಮಳೆಯ ಸಿಂಚನ ಕಂಡು ಜನರು ಕೊಂಚ ನಿರಾಳರಾದರು.
ಬಿ.ದುರ್ಗ ಹೋಬಳಿಯ ಕೆಲವೆಡೆ ವರ್ಷದ ಮೊದಲ ಮಳೆ ಬಂದಿತು. ಬಿರುಗಾಳಿ ಸಹಿತ ವರ್ಷದ ಮೊದಲ ಮಳೆಯಾಗಿದ್ದು, ಗಾಳಿಗೆ ಅಡಿಕೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಕ್ಲಿಕ್ ಮಾಡಿ ಓದಿ: ಮೇ 14 ರಿಂದ ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ
ಕಾಮನಹಳ್ಳಿ ಗ್ರಾಮದಲ್ಲಿ ಸಂಜೆ ಬಿರುಗಾಳಿಗೆ ಗ್ರಾಮದ ಸುನಂದಮ್ಮ ಅವರ ಮಾವು ಹಾಗೂ ತೆಂಗಿನ ತೋಟದಲ್ಲಿ ಹಾದು ಹೋಗಿರುವ 7 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಪರಿಣಾಮ ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.
ಚಿಕ್ಕಜಾಜೂರಿನಲ್ಲಿ ಸುಮಾರು 10 ನಿಮಿಷಗಳ ಕಾಲ ಗಾಳಿ ಸಹಿತ ಸೋನೆ ಮಳೆಯಾಗಿದ್ದು, ಗ್ರಾಮದ ತೊಡರನಾಳ್ ಸಾಕಮ್ಮ ಅವರ ತೋಟದಲ್ಲಿನ ಅಡಿಕೆ ಮರವೊಂದು ಮುರಿದು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದಿದೆ. ಇದರಿಂದ ಈ ಭಾಗದ ಕೆಲ ತೋಟಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಸಮೀಪದ ದಂಡಿಗೇನಹಳ್ಳಿ, ವಿಶ್ವನಾಥನಹಳ್ಳಿಯಲ್ಲೂ 10 ನಿಮಿಷಗಳ ಕಾಲ ಸೋನೆ ಮಳೆಯಾದ ವರದಿಯಾಗಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆಯಾಗುವ ಲಕ್ಷಣ ಸಾಧ್ಯತೆಗಳಿವೆ.
