ಮುಖ್ಯ ಸುದ್ದಿ
ಅಯೋಧ್ಯೆಯಲ್ಲಿ ಟೈಗರ್ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು…!

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22 ರಂದು ಬಾಲ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೂ ಆಗುತ್ತಿದೆ. ಸತತ 500 ವರ್ಷಗಳ ಹೋರಾಟದ ಫಲವಾಗಿ ಇಂದು ಮಂದಿರ ಎದ್ದು ನಿಲ್ಲುತ್ತಿದೆ. ಲಕ್ಷಾಂತರ ಜನ ಇದಕ್ಕಾಗಿ ಬಲಿದಾನ ಮಾಡಿದ್ದಾರೆ. ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ನಡೆದ ಹಲವು ಹಂತದ ಹೋರಾಟಗಳಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಲವು ಹೋರಾಟಗಾರರು ಭಾಗಿಯಾಗಿದ್ದಾರೆ. ಅಂಥವರನ್ನು ಸ್ಮರಿಸುವ, ಹೋರಾಟದಲ್ಲಿ ಭಾಗಿಯಾದವರ ಅನುಭವಗಳನ್ನು ಇಂದಿನಿಂದ ನಿಮ್ಮ ಚಿತ್ರದುರ್ಗ ನ್ಯೂಸ್ ಪ್ರತಿ ದಿನ ಪ್ರಕಟಿಸಲಿದೆ.
ಅದೂ 1990. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಕೈಗೊಂಡ ಕರಸೇವೆಗೆ ಚಿತ್ರದುರ್ಗದಿಂದಲೂ ಒಂದು ತಂಡ ಹೋಗಿತ್ತು. ಸುಮಾರು 35 ಜನ ಜಿಲ್ಲೆಯಿಂದ ತೆರಳಿದ್ದರು.
ಈ ತಂಡದಲ್ಲಿ ಚಿತ್ರದುರ್ಗದಲ್ಲಿ ಟೈಗರ್ ತಿಪ್ಪೇಸ್ವಾಮಿ ಎಂದೇ ಹೆಸರಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಕೂಡಾ ಭಾಗಿಯಾಗಿದ್ದರು.

ಇದನ್ನೂ ಓದಿ: ಅಪರಾಧ ಕುರಿತ ತೀರ್ಮಾನಕ್ಕೆ ಪರಿಣಾಮಕಾರಿ ತನಿಖೆ ಅತ್ಯಗತ್ಯ
ಅಯೋಧ್ಯೆಗೆ ಹೋಗಿದ್ದ ಟೈಗರ್ ತಿಪ್ಪೇಸ್ವಾಮಿ ವಾಪಾಸು ಬರುವ ವೇಳೆಗೆ, ಅಲ್ಲಿ ಶೂಟೌಟ್ ನಡೆದಿದೆ. ಈ ಶೂಟೌಟ್‍ನಲ್ಲಿ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ ಎಂದು ದುರ್ಗದಲ್ಲಿ ಸುದ್ದಿ ಹಬ್ಬಿತ್ತು ಎಂದು ಚಿತ್ರದುರ್ಗ ನ್ಯೂಸ್ ಜೊತೆಗೆ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ ಟೈಗರ್.

1990ರಲ್ಲಿ ನಾವು ಅಯೋಧ್ಯೆಗೆ ಕರಸೇವೆಗೆ ಹೊರಟಾಗ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಸರ್ಕಾರ ಇತ್ತು. ಅವರೇ ಮುಖ್ಯಮಂತ್ರಿ. ಒಬ್ಬ ನರಪಿಳ್ಳೆಯನ್ನೂ ಉತ್ತರ ಪ್ರದೇಶದ ಒಳಗೆ ಬಿಡುವುದಿಲ್ಲ ಎಂದು ಬಂದೋಬಸ್ತ್ ಮಾಡಿದ್ದರು.
ಈ ಕಾರಣಕ್ಕೆ ಮುಖ್ಯ ರಸ್ತೆಗಳಲ್ಲಿ ಟ್ರಂಚ್(ಗುಂಡಿ) ಹೊಡೆದಿದ್ದರು. ವಾಹನಗಳು ರಸ್ತೆ ದಾಟುವುದು ಕಷ್ಟವಾಗಿತ್ತು. ರಸ್ತೆಗಳಲ್ಲಿರುವ ಯಾವ ಪೆಟ್ರೋಲ್ ಬಂಕ್ ಕೂಡಾ ತೆರೆದಿರಲಿಲ್ಲ. ಕರಸೇವಕರನ್ನು ಸಿಕ್ಕ ಸಿಕ್ಕಲ್ಲಿ ಬಂಧಿಸಿ ಮಧ್ಯಪ್ರದೇಶಕ್ಕೆ ಕರೆತಂದು ಬಿಡುತ್ತಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಶೋಷಿತರ ಶಕ್ತಿ ಪ್ರದರ್ಶನಕ್ಕೆ ಭರದ ಸಿದ್ಧತೆ
ನಾವೆಲ್ಲಾ ರಾಯಚೂರಿನಿಂದ ರೈಲು ಮೂಲಕ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದೆವು. ಉತ್ತರಪ್ರದೇಶದ ದದ್ರಿ ಎಂಬಲ್ಲಿ ನಮ್ಮ ಬಂಧನ ಗ್ಯಾರೆಂಟಿ ಎನ್ನುವುದು ಗೊತ್ತಾಗಿ, ಅಲ್ಲೇ ರೈಲಿನಿಂದ ಇಳಿದು ಕಾಡಲ್ಲಿ 40 ಕಿ.ಮೀ ನಡೆದುಕೊಂಡು ಹೋಗಿದ್ದೆವು.
ನಡೆದು ನಡೆದು ಸುಸ್ತಾಗಿ ಒಂದು ಕಡೆ ಕಾಡಿನಲ್ಲೇ ಮಲಗಿದ್ದೆವು. ಆ ಕಾಡಿಗೆ ಉತ್ತರಪ್ರದೇಶ ಪೊಲೀಸರು ಬಂದು ಬಂಧಿಸುತ್ತಿರುವ ಸುದ್ದಿ ಕೇಳಿಬಂತು. ನಾನು ಮತ್ತೆ ನನ್ನ ಜೊತೆಗೆ ಬಂದಿದ್ದ ಸೋಮಶೇಖರ್ ಮರ ಹತ್ತಿ ಕುಳಿತಿದ್ದೆವು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಟೈಗರ್ ತಿಪ್ಪೇಸ್ವಾಮಿ
ತಡರಾತ್ರಿ ಆಗುತ್ತಿದ್ದಂತೆ ಕಾಡಿನ ವಿಚಿತ್ರ ಶಬ್ದ, ಪ್ರಾಣಿಗಳ ಓಡಾಟ, ಪ್ರಾಣಿಗಳ ಆರ್ಭಟ ಕೇಳಿ ಹೆದರಿದ್ದೆವು. ಮರದಿಂದ ಇಳಿದು ಅರೆಸ್ಟ್ ಮಾಡಿದ ಜಾಗಕ್ಕೆ ಬಂದು ಮಲಗಿದ್ದೆವು.
ಇಲ್ಲಿಂದ ಚಿತ್ರಕೂಟಕ್ಕೆ ನಡಿಗೆ ಶುರುವಾಯಿತು. ಊಟ, ತಿಂಡಿ ಸಿಕ್ಕಿರಲಿಲ್ಲ. ಚಿತ್ರಕೂಟದಲ್ಲಿ ಸಾದ್ವಿ ರಿತುಂಬರಾ ಹಾಗೂ ಲಾಲ್‍ಕೃಷ್ಣ ಅಡ್ವಾಣಿ ಅವರ ರಥಯಾತ್ರೆಯೂ ಸಿಕ್ಕಿತ್ತು. ಇಲ್ಲೇ ಸ್ವಯಂಸೇವಕರೊಬ್ಬರ ಮನೆಯಲ್ಲಿ ಊಟ ಮಾಡಿದೆವು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ದುರ್ಗದ ಕೀರ್ತಿ
ಚಿತ್ರಕೂಟದಲ್ಲಿ ಬಿ.ಎಸ್.ಯಡಿಯೂರಪ್ಪ, ರಾಮಚಂದ್ರೇಗೌಡ್ರು ಸಿಕ್ಕಿದ್ದರು. ಅಲ್ಲಿಂದ ಅಯೋಧ್ಯೆಯತ್ತ ತೆರಳುವಾಗ ಮತ್ತೆ ಅರೆಸ್ಟ್ ಮಾಡಿ, ದದ್ರಿಗೆ ಕರೆತಂದು ಬಿಟ್ಟರು.
ಈ ವೇಳೆ ಸರ್ಕಾರದ ಗಮನ ಸೆಳೆಯಲು ಬಸ್‍ಗೆ ಬೆಂಕಿ ಹಚ್ಚಲು ನಾನು ಆಲೋಚನೆ ಮಾಡಿದ್ದೆ. ಆಗ ಯಡಿಯೂರಪ್ಪ ಬೈದು, ಗಲಾಟೆ ಮಾಡಿದ್ದರು. ಶಿಖಾರಿಪುರದ ಕಾರ್ಯಕರ್ತರು ನಮ್ಮನ್ನು ಹೆದರಿಸಿದ್ದರು.
ಅಲ್ಲಿಂದ ಒಟ್ಟಿಗೆ ನಮ್ಮನ್ನು ಬಂಧಿಸಿದರು. ಈ ವೇಳೆ ಲಾರಿಯಿಂದ ಜಿಗಿದು ತಪ್ಪಿಸಿಕೊಂಡು ಬಂದಿದ್ದೆವು.
ನಂತರ ಮಾಣಿಕ್‍ಪುರದಲ್ಲಿ ಸಂಘದ ಸ್ವಯಂಸೇವಕರ ಮನೆಯಲ್ಲಿ ಒಂದು ದಿನ ಉಳಿದು, ಅಲ್ಲಿಂದ ನಡೆದುಕೊಂಡು ಕಾಶಿ ತಲುಪಿದ್ದೆವು. ಕಾಶಿಯ ರೈಲು ನಿಲ್ದಾಣದಲ್ಲಿ ಸಿಕ್ಕಿದ ರೈಲು ಹತ್ತಿ ಹೊರಟರೆ ಅದು ನಮ್ಮನ್ನು ಅಮೇಥಿಗೆ ತಲುಪಿಸಿತ್ತು. ಅಲ್ಲಿದ್ದವು ಇಲ್ಲಿಗ್ಯಾಕೆ ಬಂದಿದ್ದೀರಿ ಎಂದು ಅಲ್ಲಿಂದ ವಾಪಾಸು ಆನಂದಪುರಕ್ಕೆ ಸ್ಥಳೀಯರು ಕರೆದುಕೊಂಡು ಬಿಟ್ಟಿದ್ದರು.
ಇನ್ನೇನು ನಾವು ಅಯೋಧ್ಯೆ ಕಡೆಗೆ ಹೋಗುತ್ತಿದ್ದೇವೆ ಎನ್ನುವಾಗ ಸೈನಿಕರು ಶೂಟ್ ಮಾಡುತ್ತಿದ್ದಾರೆ. ಕೇಸರ ಬಟ್ಟೆ ಹಾಕಿದವರು ಕಣ್ಣಿಗೆ ಬೀಳಬೇಡಿ ಎಂದು ಹೆದರಿಸಿದರು.
ನಾನು ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಮಾಡುವವರೆಗೆ ಗಡ್ಡ, ಮೀಸಿ, ಮಂಡೆ ತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದೆ. ಹೇಗೋ ಅಲ್ಲಿ, ಇಲ್ಲಿ ಮೂರು ದಿನ ಕಾದು ಕುಳಿತೆವು. ಅದೇ ಸಮಯಕ್ಕೆ ನ್ಯಾಯಾಲಯ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಒಟ್ಟು 21 ದಿನಗಳ ಕಾಲ ಅಯೋಧ್ಯೆ ಯಾತ್ರೆ ಮಾಡಿದ್ದೆವು.

ಅಯೋಧ್ಯೆ ಶ್ರೀರಾಮ ಮಂದಿರ
ತಿಪ್ಪೇಸ್ವಾಮಿ ಶೂಟೌಟ್‍ನಲ್ಲಿ ಸತ್ತರು ಎನ್ನುವ ಸುದ್ದಿ:
ಅಯೋಧ್ಯೆಯಲ್ಲಿ ಕರ್ನಾಟಕದ ತಿಪ್ಪೇಸ್ವಾಮಿ ಎನ್ನುವವರು ಶೂಟೌಟ್‍ನಲ್ಲಿ ಮೃತಪಟ್ಟಿದ್ದರು. ಆಗ ನಾನೇ ಸತ್ತಿದ್ದೇನೆ ಎಂದು ಅನೇಕರು ಭಾವಿಸಿದ್ದರು. ಚಿತ್ರದುರ್ಗಕ್ಕೂ ಸುದ್ದಿ ತಲುಪಿ ಇಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದರು.
ಇಲ್ಲಿಗೆ ಬಂದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. 1992ರ ಕರಸೇವೆಗೆ ಕರೆ ಕೊಟ್ಟಾಗ ಹೋಗಲು ಆಗಲಿಲ್ಲ. ಅದೇ ಸಮಯಕ್ಕೆ ನನ್ನ ಮಗಳು ಮೃತಪಟ್ಟಿದ್ದರು ಎಂದು ಟೈಗರ್ ತಿಪ್ಪೇಸ್ವಾಮಿ ಸ್ಮರಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಸುಮಾರು 500 ವರ್ಷಗಳ ಕಾಲ ಹೋರಾಟ ನಡೆದಿದೆ. ನಾವು ಕಳೆದ 35-40 ವರ್ಷಗಳಿಂದ ಹೋರಾಟ ಮಾಡಿದವರು. ನಮ್ಮ ಕಣ್ಣೆದುರು ಮಂದಿರ ನಿರ್ಮಾಣ ಆಗುತ್ತಿರುವುದು ಬಹಳ ಸಂತಸ ತಂದಿದೆ.
ನನ್ನ ಜೊತೆಗೆ ಸೋಮೇಶಖರ್, ಲಕ್ಷ್ಮೀನಾರಾಯಣ ಎನ್ನುವವರು ಅಯೋಧ್ಯೆವರೆಗೆ ಬಂದಿದ್ದರು. ಸಾಕಷ್ಟು ಜನರನ್ನು ಆರಂಭದಲ್ಲೇ ಬಂದಿಸಿದ್ದರು.
