ಮುಖ್ಯ ಸುದ್ದಿ
ಅಯೋಧ್ಯೆಯಲ್ಲಿ ದುರ್ಗದ ‘ಕೀರ್ತಿ’ | ಗಣಪತಿ ವಿಗ್ರಹ ಕೆತ್ತನೆಗೆ ಅವಕಾಶ

ಚಿತ್ರದುರ್ಗ ನ್ಯೂಸ್.ಕಾಂ: ಶತ ಶತಮಾನಗಳ ಹೋರಾಟ, ಕೋಟ್ಯಾಂತರ ಹಿಂದುಗಳ ಕನಸು, ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿದೆ.
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಲೇಬೇಕು ಎನ್ನುವ ಪಣತೊಟ್ಟು ಕಳೆದ ಹಲವು ದಶಕಗಳಿಂದ ಸಂಘ ಪರಿವಾರದ ನೇತೃತ್ವದಲ್ಲಿ ಕೋಟ್ಯಾಂತರ ಹಿಂದುಗಳು ಹೋರಾಡಿದ್ದಾರೆ.
ಈಗ ಈ ಹೋರಾಟಕ್ಕೆ ಸಾರ್ಥಕತೆ ಬಂದಿದೆ. ಭವ್ಯವಾದ ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣ ಆಗುತ್ತಿದೆ. ಅದನ್ನು ಕಣ್ತುಂಬಿಕೊಳ್ಳುವುದು, ಅಲ್ಲಿರುವ ಬಾಲರಾಮನ ದರ್ಶನ ಪಡೆಯುವುದು, ಶ್ರೀರಾಮ ಜನಿಸಿದ ಭೂಮಿಯ ಸ್ಪರ್ಶ ಮಾಡುವುದು ಬಹುತೇಕರ ಹೆಬ್ಬಯಕೆ.

ಇದನ್ನೂ ಓದಿ: ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆಗೆ ಚಾಲನೆ
ಎಲ್ಲವೂ ಕನಸಿನಂತೆಯೇ ಸಾಗುತ್ತಿದ್ದು, ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜನವರಿ 22ರಂದು ಮಂದಿರದ ಮೊದಲ ಮಹಡಿಯಲ್ಲಿ ಶ್ರೀರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿದೆ.
ಈ ಕಾರ್ಯಕ್ಕಾಗಿ ದೇಶಾದ್ಯಂತ ಅನೇಕ ರಾಜ್ಯಗಳಿಂದ ಶಿಲ್ಪಿಗಳು, ದೇವಸ್ಥಾನ ನಿರ್ಮಾಣ ತಂತ್ರಜ್ಞರು ಮೂರ್ನಾಲ್ಕು ವರ್ಷದಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.
ಹೀಗೆ ಮಂದಿರ ಹಾಗೂ ಇಲ್ಲಿನ ದೇವರ ವಿಗ್ರಹಗಳ ಕೆತ್ತನೆಗೆ ದೇಶದ ವಿವಿಧ ರಾಜ್ಯಗಳ ಶಿಲ್ಪಿಗಳ ಜೊತೆಗೆ ಕರ್ನಾಟಕದಿಂದಲೂ ನಾಲ್ವರು ಶಿಲ್ಪಿಗಳಿಗೆ ಆಹ್ವಾನ ಬಂದಿತ್ತು.
ಇದರಲ್ಲಿ ಚಿತ್ರದುರ್ಗದ ಯುವಕ ಕೀರ್ತಿ ನಂಜುಂಡಸ್ವಾಮಿ ಇರುವುದು ಇಡೀ ಚಿತ್ರದುರ್ಗ ಜಿಲ್ಲೆಯ ಜನತೆ ಅಭಿಮಾನಪಡುವ ಸಂಗತಿಯಾಗಿದೆ.

ಚಿತ್ರದುರ್ಗದ ಯುವಕ ಕೀರ್ತಿ ನಂಜುಂಡಸ್ವಾಮಿ
ಹೌದು, ಚಿತ್ರದುರ್ಗದ ಕೋಟೆ ಎದುರಿನಲ್ಲಿ ಸನಾತನ ಕಲಾವೈಭವ ಎನ್ನುವ ಹೆಸರಿನಲ್ಲಿ ಶಿಲ್ಪಗಳ ಕೆತ್ತನೆ ಮಾಡಿಕೊಂಡಿರುವ ಕೀರ್ತಿ ನಂಜುಂಡಸ್ವಾಮಿ ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಯುವಕ. 32 ವರ್ಷದ ಕೀರ್ತಿ ಕಳೆದ 12 ವರ್ಷಗಳಿಂದ ಶಿಲ್ಪಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರ್ಕಳದ ಕೆನರಾ ಶಿಲ್ಪಕಲಾ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಕೀರ್ತಿಗೆ ಇದೇ ಸಂಸ್ಥೆಯ ಮೂಲಕ ಅಯೋಧ್ಯೆಗೆ ಆಹ್ವಾನ ಬಂದಿದೆ. ಈ ವಿಷಯ ಕೇಳಿ ಕೀರ್ತಿ ಅವರ ತಂದೆ ಕೆ.ನಂಜುಂಡಸ್ವಾಮಿ, ತಾಯಿ ಶಾರದಮ್ಮ ಸೇರಿದಂತೆ ಇಡೀ ಕುಟುಂಬ, ಅಕ್ಕಪಕ್ಕದ ಮನೆಯವರು, ಪರಿಚಯಸ್ಥರು ಹೆಮ್ಮೆಪಡುತ್ತಿದ್ದಾರೆ.
ಇದನ್ನೂ ಓದಿ: ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಅಯೋಧ್ಯೆಗೆ ಶ್ರೀ ಮಾದಾ ಚನ್ನಯ್ಯ ಶ್ರೀಗಳಿಗೆ ಆಹ್ವಾನ
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು. ಅಲ್ಲಿ ಪ್ರತಿಷ್ಠಾಪನೆಗೊಳ್ಳುವ ಶ್ರೀರಾಮನ ದರ್ಶನ ಪಡೆದುಕೊಳ್ಳಬೇಕು ಎನ್ನುವುದು ಕೋಟ್ಯಾಂತರ ಜನರ ಬಯಕೆ. ಆದರೆ, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಯುವಕನೊಬ್ಬನಿಗೆ ಇದೇ ಮಂದಿರದಲ್ಲಿ ನೂರಾರು ಕೋಟಿ ಜನತೆ ಕೈ ಮುಗಿಯುವ ದೇವರ ಮೂರ್ತಿ ಕೆತ್ತನೆಗೆ ಅವಕಾಶ ಸಿಕ್ಕಿರುವುದು ಪುಣ್ಯದ ಫಲ ಎಂದು ಕುಟುಂಬ ಸಾರ್ಥಕ ಪಟ್ಟುಕೊಳ್ಳುತ್ತಿದೆ.
2013-14ರಲ್ಲಿ ಕಾರ್ಕಳದ ಕೆನರಾ ಸಂಸ್ಥೆಯಲ್ಲಿ ಶಿಲ್ಪ ಕಲೆ ವಿಚಾರದಲ್ಲಿ ಶಿಕ್ಷಣ ಪಡೆದಿದ್ದ ಕೀರ್ತಿ, ಆನಂತರ ಚಿತ್ರದುರ್ಗಕ್ಕೆ ಬಂದು ಶಿಲ್ಪಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಯಾರನ್ನೂ ಇಟ್ಟುಕೊಳ್ಳದೇ ಒಬ್ಬರೇ ಕೆಲಸ ಮಾಡುವುದು ಕೀರ್ತಿ ಅವರ ವಿಶೇಷತೆಯಾಗಿದೆ.
ಮಗನ ಆಸಕ್ತಿಯನ್ನು ಗುರುತಿಸಿದ್ದ ತಂದೆ:
ಕೀರ್ತಿ ಅವರಿಗೆ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇರುವುದನ್ನು ಅವರ ತಂದೆ ನಂಜುಂಡಸ್ವಾಮಿ ಗುರುತಿಸಿದ್ದಾರೆ. ಪಿಯುಸಿ ನಂತರ ಬಿಎ ಓದಲು ಆಸಕ್ತಿ ತೋರಿದ್ದ ಮಗನಿಗೆ ಬೇಡ, ಚಿತ್ರಕಲೆಗೆ ಸೇರು ಎಂದು ಸೇರಿಸಿದ್ದಾರೆ. ಆನಂತರ ಕಾರ್ಕಳದ ಸಂಸ್ಥೆಯ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಸೇರಿಸಿದ್ದಾರೆ.
ಅಯೋಧ್ಯೆಯ ಮಂದಿರದಲ್ಲಿ ಕೀರ್ತಿ ಕೆತ್ತನೆಯ ಗಣಪತಿ:
ಕರ್ನಾಟಕದಿಂದ ನಾಲ್ವರು ಶಿಲ್ಪಿಗಳು ಅಯೋಧ್ಯೆಯಲ್ಲಿ ದೇವರ ವಿಗ್ರಹಗಳ ಕೆತ್ತನೆ ಮಾಡುತ್ತಿದ್ದಾರೆ. ಅದರಲ್ಲಿ ಚಿತ್ರದುರ್ಗದ ಕೀರ್ತಿ ನಂಜುಂಡಸ್ವಾಮಿ ಅವರಿಗೆ ಗಣಪತಿಯ ವಿಗ್ರಹದ ಕೆತ್ತನೆ ಜವಾಬ್ದಾರಿ ನೀಡಲಾಗಿದೆ. ಸುಮಾರು ಮೂರು ಅಡಿ ಎತ್ತರದ ವಿಗ್ರಹ ಇದಾಗಿದೆ.
ಡಿಸೆಂಬರ್ 8 ರಂದು ಅಯೋಧ್ಯೆಗೆ ತೆರಳಿದ್ದು, ಮುಂದಿನ 10 ದಿನಗಳಲ್ಲಿ ಕೆತ್ತನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮಗ ಕೀರ್ತಿ ತಿಳಿಸಿದ್ದಾನೆ ಎಂದು ತಂದೆ ನಂಜುಂಡಸ್ವಾಮಿ ಮಾಹಿತಿ ನೀಡಿದರು.

ಕೆ.ನಂಜುಂಡಸ್ವಾಮಿ, ಕೀರ್ತಿ ಅವರ ತಂದೆ
ಇಂಥದ್ದೊಂದು ಅವಕಾಶ ನಮ್ಮ ಮಗನಿಗೆ ಬರುತ್ತದೆ ಎನ್ನುವ ನಿರೀಕ್ಷೆಯೇ ಇರಲಿಲ್ಲ. ಯಾವ ಗೌರವ ಧನವೂ ಬೇಡ. ಸುಮ್ಮನೆ ಹೋಗಿ ಕೆಲಸ ಮಾಡಿ ಬಾ. ಶ್ರದ್ಧೆಯಿಂದ ಕೆಲಸ ಮಾಡಿದರೆ ಎಲ್ಲವೂ ನಿನ್ನನ್ನು ಹರಸಿ ಬರುತ್ತದೆ ಎಂದು ಆಶೀರ್ವದಿಸಿ ಕಳಿಸಿದ್ದೇವೆ. ಕಳೆದ ಒಂದು ತಿಂಗಳಿಂದ ಕೆತ್ತನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ಒಂದು ವಾರದಲ್ಲಿ ವಿಗ್ರಹ ಕೆತ್ತನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾನೆ
| ಕೆ.ನಂಜುಂಡಸ್ವಾಮಿ, ಕೀರ್ತಿ ಅವರ ತಂದೆ.
ವಿಶೇಷ ಅಂದ್ರೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿ ನಿರ್ಮಾಣ ಆಗಬೇಕು ಎಂದು ಕೀರ್ತಿ ಅವರ ತಂದೆ ನಂಜುಂಡಸ್ವಾಮಿ ಹಾಗೂ ದೊಡ್ಡಪ್ಪ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟೈಗರ್ ತಿಪ್ಪೇಸ್ವಾಮಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಟೈಗರ್ ತಿಪ್ಪೇಸ್ವಾಮಿ 1990ರಲ್ಲಿ ಕರಸೇವೆಗೆ ತೆರಳಿದ್ದರು. ಈಗ ಅವರದ್ದೇ ಕುಟುಂಬದ ಕುಡಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರುವುದು ಪೂರ್ವಜನ್ಮದ ಪುಣ್ಯ ಎಂದೇ ಈ ಕುಟುಂಬ ಭಾವಿಸುತ್ತಿದೆ.
ಕೀರ್ತಿ ಈವರೆಗೆ ಸುಮಾರು 40 ವಿಗ್ರಹಗಳನ್ನು ಕೆತ್ತನೆ ಮಾಡಿದ್ದು, ಗಣಪತಿ, ಆಂಜನೇಯ, ನವಗ್ರಹಗಳು, ಬೀರಲಿಂಗೇಶ್ವರ, ಸಿಂಹ, ಸೇವಾಲಾಲ್, ತಿರುಪತಿ ತಿಮ್ಮಪ್ಪ, ಚೌಡಮ್ಮ, ನಾಗರ ವಿಗ್ರಹಗಳು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರ ವಿಗ್ರಹ ಸೇರಿದಂತೆ ಅನೇಕ ಶಿಲ್ಪಗಳನ್ನು ಕೆತ್ತನೆ ಮಾಡಿದ್ದಾರೆ.
ಮೈಸೂರಿನ ಎಚ್.ಡಿ.ಕೋಟೆಯಿಂದ ಕೆತ್ತನೆಗೆ ಕೃಷ್ಣಶಿಲೆ ತರಿಸಿಕೊಂಡು ಕೆತ್ತನೆ ಮಾಡುತ್ತಾರೆ.
***********
ಇದೊಂದು ಪೂರ್ವ ಜನ್ಮದ ಸುಕೃತ ಎಂದು ಭಾವಿಸುತ್ತೇವೆ. ನಾವೆಲ್ಲಾ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದೆವು. ಈಗ ನಮ್ಮ ಮಗನಿಗೆ ಅದೇ ಮಂದಿರದಲ್ಲಿ ದೇವರ ವಿಗ್ರಹ ಕೆತ್ತನೆಗೆ ಆಹ್ವಾನ ಬಂದಿದ್ದು, ಬಹಳ ಖುಷಿಯ ಸಂಗತಿ. ಮುಂದೆ ಶತ ಶತಮಾನಗಳ ಕಾಲ ಇದು ಚಿರವಾಗಿರಲಿದೆ.
| ಟೈಗರ್ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, (ಕೀರ್ತಿ ಅವರ ದೊಡ್ಡಪ್ಪ)*********
