ಮುಖ್ಯ ಸುದ್ದಿ
ಚಿತ್ರದುರ್ಗದಲ್ಲಿ ಶೋಷಿತರ ಶಕ್ತಿ ಪ್ರದರ್ಶನಕ್ಕೆ ಭರದ ಸಿದ್ಧತೆ | ಸುಮಾರು 150 ಎಕರೆ ಜಾಗ ಸಮತಟ್ಟು | ಜ.28ರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗೀ

CHITRADURGA NEWS | 13 JANUARY 2024
ಚಿತ್ರದುರ್ಗ: ಶೋಷಿತರ ಶಕ್ತಿ ಪ್ರದರ್ಶನಕ್ಕೆ ಮಧ್ಯ ಕರ್ನಾಟಕ ಚಿತ್ರದುರ್ಗದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಸಮಾವೇಶ ನಡೆಯುವ ಜಾಗದ ಪರಿಶೀಲನೆಯನ್ನೂ ನಡೆಸಿದ್ದಾರೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ್ ವರದಿ ಯಥಾವತ್ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಇನ್ನರ್ ವೀಲ್ ಕ್ಲಬ್‍ಗೆ ಶತಮಾನದ ಸಂಭ್ರಮ
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಹಲವು ನಾಯಕರನ್ನು ಆಹ್ವಾನಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.
ನಗರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿರುವ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಸಮಾವೇಶ ನಡೆಸಲು ಸುಮಾರು 150 ಎಕರೆ ಜಾಗವನ್ನು ಸಮತಟ್ಟು ಮಾಡಲಾಗಿದೆ.
ಇಲ್ಲಿ ಬೃಹತ್ ಪೆಂಡಾಲ್ ಹಾಕಲಿದ್ದು, ವಾಹನಗಳ ಪಾರ್ಕಿಂಗ್, ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಹೊಸದುರ್ಗಕ್ಕೆ ‘ಕ್ಲೀನ್‍ಸಿಟಿ’ ಗೌರವ
ಜನವರಿ 28ರಂದು ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದು, ಈಗಾಗಲೇ ಜಾಗ ಸಮತಟ್ಟು ಮಾಡುವ ಕಾರ್ಯ ಮುಗಿದಿದ್ದು, ಜನವರಿ 14 ಸಂಕ್ರಾಂತಿಯಿಂದ ಪೆಂಡಾಲ್ ಕೆಲಸ ಪ್ರಾಂಭವಾಗಲಿದೆ ಎಂದು ಬಿ.ಟಿ.ಜಗದೀಶ್ ಮಾಹಿತಿ ನೀಡಿದ್ದಾರೆ.
- ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಸಮಾವೇಶ
- 150 ಎಕರೆ ಜಾಗದ ಸಮತಟ್ಟು
- ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಪರಿಶೀಲನೆ
- ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು
ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.
ಈ ಸಂಬಂಧ ಬೀದರ್, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಶೋಷಿತ ಸಮುದಾಯಗಳ ಪೂರ್ವಭಾವಿ ಸಭೆ ನಡೆಸಲಾಗಿದೆ.
ಈ ಸಂಬಂಧ ಈಗಾಗಲೇ ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿ ಸಮಾವೇಶ ಕುರಿತು ಸುದ್ದಿಗೋಷ್ಠಿಯನ್ನೂ ನಡೆಸಿದ್ದು, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸಮಾವೇಶದ ಪೂರ್ಣ ವಿವರ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ರೂಬಿಗೆ ಸೀಮಂತ
ಸಮಾವೇಶದಲ್ಲಿ ಕಾಂತರಾಜು ಆಯೋಗದ ವರದಿ ಸ್ವೀಕರಿಸಿ ಜಾರಿ ಮಾಡುವುದು ಸೇರಿದಂತೆ, ಇಡಬ್ಯುಎಸ್ ಶೇ.10 ಮೀಸಲಾತಿಯನ್ನು ರದ್ದು ಮಾಡಲು ಒತ್ತಾಯ ಮಾಡಲಾಗುವುದು.
ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆ ಕೂಡಲೇ ಜಾರಿ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳ ಮೀಸಲಾತಿ ಕಲ್ಪಿಸಬೇಕು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಸಮಾವೇಶ ನಡೆಯುವ ಜಾಗದ ಪರಿಶೀಲನೆ
ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗುವುದೆಂದು ತಿಳಿಸಿದ್ದಾರೆ.
ಪಕ್ಕದ ದಾವಣಗೆರೆಯಲ್ಲಿ ಕಳೆದ ತಿಂಗಳು ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ನಡೆದಿದ್ದು, ಇಲ್ಲಿ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅದನ್ನು ಒಪ್ಪುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ. ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಶೋಷಿತರ ಸಮಾವೇಶ ನಡೆಸಿ ಅದೇ ವರದಿಯ ಜಾರಿಗೆ ಒತ್ತಾಯ ಮಾಡುತ್ತಿರುವುದು ತೀವ್ರ ಕುತೂಹಲಕಾರಿಯಾಗಿದೆ.
