CHITRADURGA NEWS | 26 APRIL 2026
ಚಿತ್ರದುರ್ಗ: ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ರಾಜಕೀಯ ಪಯಣದ ಸ್ಮರಣಾರ್ಥವಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಮೇ 9ರಂದು ಬೃಹತ್ ‘ಅಭಿಮಾನೋತ್ಸವ’ ಆಯೋಜಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಲಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲು ಬಿಜೆಪಿ ಸಜ್ಜಾಗಿದೆ.
ಇದನ್ನೂ ಓದಿ: ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ, ಗೋಧಿ ಜಪ್ತಿ
ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭೂಮಿಪೂಜೆ ನೆರವೇರಿಸಿದ ಬಳಿಕ ನಾಯಕರು ಕಾರ್ಯಕ್ರಮದ ರೂಪುರೇಷೆಗಳನ್ನು ಹಂಚಿಕೊಂಡರು.
ಹೋರಾಟದ ಹಾದಿಗೆ ಗೌರವ: ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಹೋರಾಟ ಮತ್ತು ಛಲಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ. ಅವರು ಎಂದೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ಬಡವರ ಕಣ್ಣೀರು ಒರೆಸಲು 50 ವರ್ಷಗಳ ಕಾಲ ಜೀವನವನ್ನೇ ಧಾರೆ ಎರೆದಿದ್ದಾರೆ. ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಮಿತ್ ಶಾ ಅಬ್ಬರ, ಗಾಯಕರ ಕಲರವ
ಮೇ.8ರಂದು ಸಂಜೆ 5 ಗಂಟೆಗೆ ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಪುರಪ್ರವೇಶ ಮಾಡಲಿದ್ದು, ನಗರದಾದ್ಯಂತ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ. ಮೇ 9ರಂದು ಮಧ್ಯಾಹ್ನ 2:30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, 3 ಗಂಟೆಗೆ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ. ಖ್ಯಾತ ಗಾಯಕರಾದ ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಅವರ ಸಂಗೀತ ಸುಧೆ ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ | ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಆಯೋಜನೆ
1.5 ಲಕ್ಷ ಜನರಿಗೆ ಭರ್ಜರಿ ಊಟದ ವ್ಯವಸ್ಥೆ
ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಬಂದವರಿಗೆ ಯಾವುದೇ ತೊಂದರೆಯಾಗದಂತೆ ಒಂದೂವರೆ ಲಕ್ಷ ಜನರು ಏಕಕಾಲಕ್ಕೆ ಕುಳಿತು ಊಟ ಮಾಡುವಂತಹ ಬೃಹತ್ ಸಭಾಂಗಣ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಕಾರ್ಯಕರ್ತರು ಈ ಭೋಜನದ ಉಸ್ತುವಾರಿ ವಹಿಸಿಕೊಂಡಿರುವುದು ವಿಶೇಷ.
ರಾಜಕೀಯ ದಿಕ್ಸೂಚಿ
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾಂಗ್ರೆಸ್‌ಗೆ ಶಕ್ತಿ ನೀಡಿದಂತೆ, ಚಿತ್ರದುರ್ಗದ ಈ ಅಭಿಮಾನೋತ್ಸವ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಲಿದೆ,” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಬಿ.ಶ್ರೀರಾಮುಲು, ಆರ್.ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಈ ಸಮಾರಂಭವು ರಾಜ್ಯದ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಬಣ್ಣಿಸಿದರು.
ಇದನ್ನೂ ಓದಿ: 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಬಿಜೆಪಿಯ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ವೇದಿಕೆ ಸಿದ್ಧವಾಗಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಜಿ.ಎಂ.ಸಿದ್ದೇಶ್ವರ, ಬಿ.ಸಿ.ಪಾಟೀಲ್, ಎ.ನಾರಾಯಣಸ್ವಾಮಿ, ಎನ್.ರವಿಕುಮಾರ್, ಜಿ.ಎಚ್.ತಿಪ್ಪಾರೆಡ್ಡಿ, ರೇಣುಕಾಚಾರ್ಯ, ಮುನಿರತ್ನ, ಎನ್.ಮಹೇಶ್, ಹರತಾಳು ಹಾಲಪ್ಪ, ಕೆ.ಎಸ್.ನವೀನ್, ರೂಪಾಲಿನಾಯ್ಕ್, ಸಂಜಯ್ ಪಾಟೀಲ್, ಮಂಜುಳಾ, ಎಸ್.ಕೆ.ಬಸವರಾಜನ್, ಪ್ರೀತಂ ಗೌಡ್ರು, ಹರೀಶ್ ಪೂಂಜಾ, ಎಂ.ಚಂದ್ರಪ್ಪ, ದೊಡ್ಡನಗೌಡ ಪಾಟೀಲ್, ಬಸವರಾಜ ದಡೆಸೂಗುರು, ಧನಂಜಯ ಸರ್ಜಿ, ಶಿವಯೋಗಿಸ್ವಾಮಿ, ಕೃಷ್ಣನಾಯ್ಕ್, ಕುಡಚಿ ರಾಜೀವ್, ತಮ್ಮೇಶ್ ಗೌಡ್ರು, ಲಿಂಗಮೂರ್ತಿ, ಜ್ಯೊತಿ ಗಣೇಶ್, ವೈ.ಎ.ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಹಲವು ಮುಖಂಡರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
