
CHITRADURGA NEWS | 15 JUNE 2026
ಚಿತ್ರದುರ್ಗ: ಜಪಾನಿನ ಸಹಜ ಕೃಷಿಯ ಹರಿಕಾರ ಮಸನೊಬು ಫುಕುವೋಕ ಅವರ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಕನಿಷ್ಠ ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟದ ವಿಷಮುಕ್ತ ಆಹಾರ ಉತ್ಪಾದನೆ ಮಾಡಲು ಸಾಧ್ಯ ಎಂದು ದಾವಣಗೆರೆಯ ಐಕಾಂತಿಕ ತೋಟದ ಪ್ರಗತಿಪರ ಸಹಜ ಕೃಷಿಕ ರಾಘವ ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: ಶಾಲೆಗೆ ಆಧಾರ್ ಕಾರ್ಡ್ ತಂದು ಮತದಾನ ಮಾಡಿದ ಮಕ್ಕಳು | ಕ್ಯಾದಿಗೆರೆ ಶಾಲೆಯಲ್ಲಿ ಚುನಾವಣೆ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಐಕಾಂತಿಕ ಜಾಗತಿಕ ಪಂಗಡ ಮತ್ತು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯ ರಂಗಾಪುರದ ಋಷಿ ಗುರುಕುಲಂ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ‘ಆಸಕ್ತ ರೈತರಿಗೆ ಸಹಜ ಕೃಷಿ ಒಂದು ದಿನದ ತರಬೇತಿ ಕಾರ್ಯಾಗಾರ’ದಲ್ಲಿ ಅವರುಉಪನ್ಯಾಸ ನೀಡಿದರು.
‘ಉಳುಮೆ ಮಾಡದಿರುವುದು, ರಸಗೊಬ್ಬರ ಮತ್ತು ಪೀಡೆನಾಶಕ ಬಳಸದಿರುವುದು ಹಾಗೂ ಕಳೆ ಕೀಳದಿರುವುದು ಸಹಜ ಕೃಷಿಯ ನಾಲ್ಕು ಮುಖ್ಯ ತತ್ವಗಳಾಗಿವೆ. ರೈತರ ಅವಶ್ಯಕತೆಗಳು ತಮ್ಮ ಜಮೀನಿನಿಂದಲೇ ಪೂರೈಕೆಯಾದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಜ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ, ಎಂದ ಅವರು, ರೈತರ ಮಾರ್ಗದರ್ಶನಕ್ಕಾಗಿ ‘ಒಂದು ಹುಲ್ಲಿನ ಕ್ರಾಂತಿ’, ಅರಣ್ಯೆ ನಿನಗೆ ಶರಣು, ಸಾವಯವ ಬೇಸಾಯದ ರೀವಾಜು, ಬೀಜದ ನಂಟು, ‘ಸಜೀವ ಮಣ್ಣು’ ಸೇರಿದಂತೆ ಹಲವು ಪ್ರಮುಖ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜೂನ್ 15 | ಮೆಕ್ಕೆಜೋಳ, ಶೇಂಗಾ ರೇಟ್….
ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಪ್ರಸ್ತಾವಿಕವಾಗಿ ಮಾತನಾಡಿ, ‘ರೈತರು ಭೂಮಿಯ ಗುಣ ಅರಿಯದೆ ಅತಿಯಾಗಿ ರಾಸಾಯನಿಕ ಹಾಗೂ ರಸಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಫಲವತ್ತತೆ ಕ್ಷೀಣಿಸುತ್ತಿದೆ. ಇದು ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದನ್ನು ತಡೆಗಟ್ಟಲು ಸಹಜ ಜೀವನಶೈಲಿ ಹಾಗೂ ಸಹಜ ಕೃಷಿ ಅಳವಡಿಕೆ ಇಂದಿನ ಅನಿವಾರ್ಯತೆ’ ಎಂದರು.
ಚಿಕ್ಕಜಾಜೂರಿನ ವೀರೇಶ್ ಅವರು ಕೃಷಿ ತ್ಯಾಜ್ಯಗಳಿಂದ ಮುಚ್ಚಿಗೆ (ಮಲ್ಚಿಂಗ್) ಮಾಡುವುದು, ಕಂದಕ ಬದುಗಳ ನಿರ್ಮಾಣ ಹಾಗೂ ಹಸಿರೆಲೆ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿ ತೇವಾಂಶ ಮತ್ತು ಜೀವ ವೈವಿಧ್ಯತೆಯನ್ನು ಹೆಚ್ಚಿಸುವ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಮಲೇಬೆನ್ನೂರಿನ ಪಾಂಡುರಂಗ ಅವರು ಜೀವಂತ ಬೇಲಿಯ ಸ್ವರೂಪ ಮತ್ತು ವಿವಿಧ ಮರ-ಗಿಡಗಳ ಸಂಯೋಜನೆಯಿಂದ ತೋಟದಲ್ಲಿ ಉತ್ತಮ ಸೂಕ್ಷ್ಮ ವಾತಾವರಣ ನಿರ್ಮಿಸುವ ಕುರಿತು ವಿವರಿಸಿದರೆ, ದಾವಣಗೆರೆಯ ಅಭಿಷೇಕ್ ಅವರು ಪೌಷ್ಟಿಕ ಕೈತೋಟ ನಿರ್ಮಾಣ, ಉತ್ತಮ ಆಹಾರ ಉತ್ಪಾದನೆ ಹಾಗೂ ಮೌಲ್ಯವರ್ಧನೆ ಮೂಲಕ ವರ್ಷಪೂರ್ತಿ ನೇರ ಮಾರುಕಟ್ಟೆ ಕಂಡುಕೊಳ್ಳುವ ಮಾರ್ಗಗಳನ್ನು ವಿವರಿಸಿದರು.
ಇದನ್ನೂ ಓದಿ: ಸ್ವಯಂಕೃತ ಅಪರಾಧದಿಂದ ಚುನಾವಣೆ ಸೋತಿದ್ದೇನೆ | ಎಚ್.ಆಂಜನೇಯ
ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಡಾ.ತಿಪ್ಪಾರೆಡ್ಡಿ ಗುರೂಜೇ ಮಾತನಾಡಿ, ನಮ್ಮ ಗುರುಗಳಾದ ಪ್ರಭಾಕರ್ ಗುರೂಜಿ ಅವರು ಬಹಳ ಹಿಂದಿನಿಂದಲೇ ಸಹಜ ಕೃಷಿ ಹಾಗೂ ಸಹಜ ಜೀವನಶೈಲಿಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದ್ದು ಅದೇ ಮಾರ್ಗದಲ್ಲಿ ನಾವು ನಡೆಯುತ್ತಿದ್ದು ನಮ್ಮ ಗುರುಕುಲದಲ್ಲಿ ಮಕ್ಕಳಿಗೆ ಈಗಿನಿಂದಲೇ ಸಹಜ ಕೃಷಿ ಬಗ್ಗೆ ಜ್ಞಾನ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ ಗಾಣದ ಎಣ್ಣೆ, ವಿಷಮುಕ್ತವಾಗಿ ಬೆಳೆದ ಕೆಂಪಕ್ಕಿ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಸಾತ್ವಿಕ ಆಹಾರ, ರಾಗಿ ಅಂಬಲಿ ಹಾಗೂ ಕಷಾಯವನ್ನು ನೀಡಲಾಯಿತು.
ಇದನ್ನೂ ಓದಿ: ಚಿತ್ರದುರ್ಗ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ 44 ಕೋಟಿ ಪ್ರಸ್ತಾವನೆ | ಶಾಸಕ ವೀರೇಂದ್ರ ಪಪ್ಪಿ
ಕಾರ್ಯಕ್ರಮದಲ್ಲಿ ಪ್ರಗತಿಪರ ಸಾವಯವ ಕೃಷಿಕರಾದ ವಡೇರಹಳ್ಳಿಯ ಭೈರೇಶ್, ಬ್ಯಾಡರಹಳ್ಳಿಯ ಇಂದೂಧರ ಮತ್ತು ಪಿಲ್ಲಹಳ್ಳಿಯ ಚಿತ್ರಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________


ಸುದ್ದಿ ಶೀರ್ಷಿಕೆ ‘ವಿಷಯುಕ್ತ ‘ ಬದಲು ವಿಷಮುಕ್ತ ಆಗಬೇಕು.