ಮುಖ್ಯ ಸುದ್ದಿ
Taralabalu mata sirigere: ನೀತಿವಂತರಾಗಿರುವ ರೈತರಲ್ಲಿ ಎದುರಾಗಿದೆ ಸಂಘಟನೆ ಕೊರತೆ | ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

CHITRADURGA NEWS | 23 SEPTEMBER 2024
ಚಿತ್ರದುರ್ಗ: ರೈತರು ಪರಿಶ್ರಮಜೀವಿಗಳು. ಅವರಲ್ಲಿ ಸಂಘಟನೆಯ ಕೊರತೆ ಇದೆ. ಯಾರಿಗೂ ತೊಂದರೆ ಕೊಡದೆ ನೀತಿವಂತರಾಗಿ ದುರಾಸೆಗೆ ಬಲಿಯಾಗದೆ ಬದುಕುತ್ತಿದ್ದಾರೆ ಎಂದು ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಅಂಗವಾಗಿ ಆಯೋಜಿಸಿದ್ದ ಬರಡುರಾಸು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಹಸುಗಳನ್ನು ಸಾಕುವ ರೈತರು ಅವು ನಿರುಪಯುಕ್ತ ವೆನಿಸಿದಾಗ ಕೃತಜ್ಞತೆ ಇಲ್ಲದಂತೆ ತಿರಸ್ಕರಿಸಬಾರದು’ ಎಂದರು.
‘ರೈತರು ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನೇ ಬದಲಿಸ ಬಹುದಾಂತ ಶಕ್ತಿ ಹೊಂದಿದ್ದಾರೆ. ಆದ್ದರಿಂದ ಸಂಘಟಿತರಾಗಿ ಸಾಗಬೇಕಿದೆ’ ಎಂದು ತಿಳಿಸಿದರು.
ಮುಂದಿನ ವರ್ಷದ ಪುಣ್ಯಸ್ಮರಣೆ ವೇಳೆಗೆ ಸಿರಿಗೆರೆಯ ಶಾಂತಿವನದ ಗೋಶಾಲೆಯ ವಿಶಾಲ ಜಾಗದಲ್ಲಿ ಜಾನುವಾರು ಜಾತ್ರೆ ನಡೆಸಬೇಕೆಂಬ ಬಯಕೆಯಿದೆ. ಮಠದಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಪಶು ಅಧಿಕಾರಿಗಳು, ಗ್ರಾಮಸ್ಥರು, ರೈತರು ಸಮಾಲೋಚನೆ ಮಾಡಿ ಎಂದು ಶ್ರೀಗಳು ಹೇಳಿದರು.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 23 | ಉದ್ಯೋಗದಲ್ಲಿ ಪ್ರಗತಿ,ಹಠಾತ್ ಆರ್ಥಿಕ ಲಾಭ, ಹೊಸ ವಾಹನ ಯೋಗ
‘ದೇಶ ಹೈನುಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 100 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ದಾವಣಗೆರೆಯಲ್ಲಿ ₹288 ಕೋಟಿ ವೆಚ್ಚದಲ್ಲಿ ಹಾಲಿನ ಘಟಕ ಹಾಗೂ ಚಿತ್ರದುರ್ಗದಲ್ಲಿ 1.50 ಲಕ್ಷ ಲೀಟರ್ ಸಾಮರ್ಥ್ಯದ ಡೇರಿ ನಿರ್ಮಿಸಲಾಗುವುದು’ ಎಂದು ಕೆಎಂಎಫ್ ನಿರ್ದೇಶಕ ಓಬವ್ವ ನಾಗತಿಹಳ್ಳಿ ರೇವಣಸಿದ್ದಪ್ಪ ಹೇಳಿದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಂಜೆ ಕಾರ್ಯಕ್ರಮದಲ್ಲಿ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಸೂರ್ಯ ಚಂದ್ರರು ಇರುವ ತನಕ ಉಳಿಯವಂತಹ ಕೆಲಸವನ್ನು ತರಳಬಾಳು ಶ್ರೀ ಸಾಧಿಸಿದ್ದಾರೆ. ಅವರು ಕೆರೆಗಳನ್ನು ತುಂಬಿಸಿ ರೈತರಿಗೆ ನೆರವಾಗಿರುವುದು ಮಹತ್ತರವಾದುದು. ಸಾರ್ವಜನಿಕರ ಬದುಕು ಹಸನು ಮಾಡಲು ಅವರು ಸದಾ ಮುಂದಿದ್ದಾರೆ. ಅವರು ಯಾವಾಗಲೂ ಸಮಾಜಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಶಾಸಕ ಬಸವರಾಜು ಶಿವಗಂಗಾ ಮಾತನಾಡಿ, ‘ಮಠದ ವಿಚಾರವಾಗಿ ಎದ್ದಿರುವ ಯಾವುದೇ ವಿವಾದಕ್ಕೂ ಅಂಜಬೇಡಿ, ಅಳುಕಬೇಡಿ. ಎಂತಹ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ. ಇಡೀ ಚನ್ನಗಿರಿ ಕ್ಷೇತ್ರದ ಭಕ್ತರು ತಮ್ಮ ಜೊತೆಗಿದ್ದೇವೆ. ಅದೆಂತಹ ಪರಿಸ್ಥಿತಿಯೇ ಬರಲಿ, ನಮ್ಮ ಬೆಂಬಲ ತಮಗೆ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.
‘ಸಮುದಾಯದ ಸಾಮಾನ್ಯ ಭಕ್ತರಿಂದ ನಮ್ಮ ಮಠ ಬೆಳೆದಿದೆಯೇ ಹೊರತು, ಶ್ರೀಮಂತರು ಮತ್ತು ರಾಜಕಾರಣಿಗಳ ಬೆಂಬಲದಿಂದಲ್ಲ. ಸಾಮಾನ್ಯ ಭಕ್ತರೆಲ್ಲರೂ ತಮ್ಮೊಂದಿಗೆ ಇದ್ದೇ ಇದ್ದಾರೆ. ಮಠದ ಅಭಿವೃದ್ಧಿಯಲ್ಲಿ 40 ವರ್ಷಗಳಷ್ಟು ಕಾಲ ತಾವು ಮಾಡಿರುವ ಸಾಧನೆ ಎಲ್ಲರಿಗೂ ತಿಳಿದಿದೆ. ಆ ಕೆಲಸಗಳು ಇನ್ನೂ ಮುಂದುವರಿಯಲಿ’ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ‘ತರಳಬಾಳು ಶ್ರೀ ಕೃಪೆಯಿಂದ ತುಂಗಭದ್ರೆಯೇ ಓಡೋಡಿ ಬಂದು ಜಗಳೂರು ತಾಲ್ಲೂಕಿನ 33 ಕೆರೆಗಳನ್ನು ತುಂಬಿಸಿದ್ದಾಳೆ. ತರಳಬಾಳು ಮಠಕ್ಕೆ ಎಲ್ಲ ಸಮುದಾಯಗಳನ್ನು ಅಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ಇದೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಘೋಷಣೆಯಾಯ್ತು ದಸರಾ ರಜೆ | ಯಾವಾಗಿಂದ ಆರಂಭ, ಎಷ್ಟು ದಿನ ?
ಶಿವಕುಮಾರ ಶ್ರೀಗಳ ದೂರದೃಷ್ಟಿಯ ಕುರಿತು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವೈ. ವೃಷಭೇಂದ್ರಪ್ಪ ಉಪನ್ಯಾಸ ನೀಡಿದರು. ಬಿ.ಎನ್. ಗೋವಿಂದರಾವ್ ಅವರ ಕೃತಿಯನ್ನು ಎನ್.ಎಸ್. ಸೇತುರಾಂ ಹಾಗೂ ಡಾ. ಎಂ. ಈಶ್ವರಶರ್ಮಾ ಅವರ ಕೃತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಲೋಕಾರ್ಪಣೆ ಮಾಡಿದರು.
ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ರಂಗಕರ್ಮಿ ಎನ್.ಎಸ್. ಸೇತುರಾಂ, ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ , ಎಚ್.ಎನ್.ನಾಗರಾಜ್ ಇದ್ದರು. ಸಿಂದಗಿ ಹಿಂದೂಸ್ತಾನಿ ಗಾಯಕ ಯಶವಂತ ಬಡಿಗೇರ್ ವಚನ ಗೀತೆಗಳನ್ನು ಹಾಡಿದರು.
