ಹೊಸದುರ್ಗ
ಝೇಂಕರಿಸಿದ ಗೋವಿಂದ…ಗೋವಿಂದ..ಜಯಘೋಷ | ಶ್ರೀ ಲಕ್ಷ್ಮಿ ಕಟ್ಟೇರಂಗನಾಥ ಸ್ವಾಮಿ ರಥೋತ್ಸವ

CHITRADURGA NEWS | 24 MARCH 2024
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಎಸ್. ನೇರಲಕೆರೆಯಲ್ಲಿ ಶ್ರೀ ಲಕ್ಷ್ಮಿ ಕಟ್ಟೇರಂಗನಾಥ ಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿತು. ಸಂಪ್ರದಾಯದಂತೆ ಪುಬ್ಬ ನಕ್ಷತ್ರದಲ್ಲಿ ಮಧ್ಯಾಹ್ನ 1.15ಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಬಿಸಿಲನ್ನು ಲೆಕ್ಕಿಸದೇ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು.
ರಥೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ದೇವರಿಗೆ ಸೂರ್ಯಮಂಡಲೋತ್ಸವ, ಶ್ರೀಕೃಷ್ಣ ಗಂಧೋತ್ಸವ ಹಾಗೂ ವಸಂತೋತ್ಸವ ಸೇವೆಗಳು ನಡೆದವು. ಶುಕ್ರವಾರ ರಾತ್ರಿ ಲಕ್ಷ್ಮಿ ಕಲ್ಯಾಣೋತ್ಸವ ನಡೆಯಿತು. ದೇವಾಲಯದ ಆವರಣದಲ್ಲಿ ಸಂಭ್ರಮ ಮನೆಮಾಡಿತ್ತು. ಸೋಬಾನೆ ಪದಗಳು, ವಾದ್ಯಗಳ ಸದ್ದು, ಲಕ್ಷ್ಮಿ ಹಾಗೂ ರಂಗನಾಥ ಸ್ವಾಮಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು.
ಕ್ಲಿಕ್ ಮಾಡಿ ಓದಿ: ತುರುವನೂರು ಚೆಕ್ ಪೋಸ್ಟ್ | ದಾಖಲೆ ಇಲ್ಲದ ರೂ.1.50 ಲಕ್ಷ ಹಣ ವಶ

ಮಧ್ಯಾಹ್ನ 1 ಗಂಟೆಯ ವೇಳೆಗೆ ಲಕ್ಷ್ಮಿ ಕಟ್ಟೇರಂಗನಾಥ ಸ್ವಾಮಿ ಉತ್ಸವ ಮೂರ್ತಿಯು ರಥವನ್ನು ಪ್ರದಕ್ಷಿಣೆ ಹಾಕಿದ ನಂತರ ರಥವೇರಿ ವಿರಾಜ ಮಾನವಾಯಿತು. ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ರಥಕ್ಕೆ ಪೂಜೆ ನೆರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ಕ್ಲಿಕ್ ಮಾಡಿ ಓದಿ: ಹೊರಕೆರೆ ದೇವರಪುರದ ರಂಗಪ್ಪನ ತೇರಿಗೆ ಜನಸಾಗರ | ವಿಜೃಂಭಣೆಯ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ
ಭಕ್ತರು ಇಷ್ಟಾರ್ಥ ಪೂರೈಸುವಂತೆ ಕೋರಿ ಬಾಳೆಹಣ್ಣು, ಮೆಣಸು, ಚಿಲ್ಲರೆಯನ್ನು ರಥಕ್ಕೆ ಅರ್ಪಿಸಿದರು. ಪ್ರತಿಯೊಬ್ಬ ಭಕ್ತರ ಬಾಯಲ್ಲೂ ‘ಗೋವಿಂದ, ಗೋವಿಂದ’ ಎಂಬ ಘೋಷಣೆ ಮೊಳಗಿತು. ಸಾವಿರಾರು ಜನರ ಮಧ್ಯೆ, ರಥ ಸಾಗಿತು.
ಶನಿವಾರ ರಾತ್ರಿ ಮಹಾರಥಾರೋಹಣ ಜರುಗಿತು. ಭಾನುವಾರ ಅಡ್ಡಪಲ್ಲಕ್ಕಿ ಉತ್ಸವ, ಮುತ್ತಿನ ಮಂಟಪೋತ್ಸವ, ಆಂದೋಳಿಕೋತ್ಸವ, ಗರುಡೋತ್ಸವ, ಪುಷ್ಪೋತ್ಸವ, ಅಶ್ವಾರೋಹಣೋತ್ಸವ, ಕನಕ ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ಹಾಗೂ ಶಯನೋತ್ಸವ ನಡೆಯಲಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಈ ರಥೋತ್ಸವದಲ್ಲಿ ಒಂದು ವಾರ ಇಲ್ಲಿಯೇ ಇರುತ್ತೇವೆ. ಇಲ್ಲೇ ಜಮೀನಿನಲ್ಲಿ ಟೆಂಟ್ ಹಾಕುತ್ತೇವೆ. ದೇವಾಲಯದ ಬಳಿ ನಿರಂತರ ಅನ್ನಸಂತರ್ಪಣೆ ಇರುತ್ತದೆ. ಯಾವುದೇ ತೊಂದರೆಯಿಲ್ಲ. ದೇವರ ದರ್ಶನ ಪಡೆಯುವುದೇ ನಮ್ಮ ಭಾಗ್ಯ. ನಮ್ಮ ಇಷ್ಟಾರ್ಥ ಪೂರೈಸಿರುವ ದೇವರಿಗೆ ಇಡೀ ಕುಟುಂಬವೇ ಇಲ್ಲಿ ಬಂದು ಸೇವೆ ಮಾಡುತ್ತೇವೆ ಎನ್ನುತ್ತಾರೆ ಭಕ್ತರು.
