ಹೊಳಲ್ಕೆರೆ
ಹೊರಕೆರೆ ದೇವರಪುರದ ರಂಗಪ್ಪನ ತೇರಿಗೆ ಜನಸಾಗರ | ವಿಜೃಂಭಣೆಯ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ

CHITRADURGA NEWS | 24 MARCH 2024
ಚಿತ್ರದುರ್ಗ: ಜಿಲ್ಲೆಯ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ
ಲಕ್ಷ್ಮಿ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಜನಸಾಗರ ಸಾಕ್ಷಿಯಾಯಿತು. ‘ಲಕ್ಷ್ಮಿ ರಂಗನಾಥ ಸ್ವಾಮಿ ಪಾದಕ್ಕೆ ಗೋವಿಂದಾ, ಗೋವಿಂದ’ ಎಂದು ಭಕ್ತರು ಜಯಘೋಷ ಕೂಗಿದರು.
ಐತಿಹಾಸಿಕ ಲಕ್ಷ್ಮಿ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಥಬೀದಿಯಲ್ಲಿದ್ದ ರಥವನ್ನು ಬೃಹತ್ ಹೂವಿನ ಹಾರಗಳು, ವಿವಿಧ ಬಣ್ಣದ ಬಟ್ಟೆಗಳು, ಬಾವುಟಗಳಿಂದ ರಥವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಬಂಗಾರದ ಆಭರಣಗಳನ್ನು ತೊಡಿಸಿ, ಹೂವುಗಳಿಂದ ಅಲಂಕರಿಸಿದ್ದ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಛತ್ರಿ, ಚಾಮರ, ವಾದ್ಯ ಮೇಳಗಳು ಮೆರವಣಿಗೆಯಲ್ಲಿದ್ದವು. ಸ್ವಾಮಿಯನ್ನು ರಥದ ಮೇಲೆ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಥವೇರಿದ ರಂಗಪ್ಪನಿಗೆ ಸುತ್ತಲೂ ನೆರೆದಿದ್ದ ಭಕ್ತರು ಭಕ್ತಿಯಿಂದ ಕೈಮುಗಿದು ಆಶೀರ್ವಾದ ಪಡೆದರು. ಆಗಸದಲ್ಲಿ ಗರುಡ ಪ್ರತ್ಯಕ್ಷವಾದ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನೆರೆದಿದ್ದ ಅಪಾರ ಭಕ್ತರು ಪೂರ್ವಾಭಿಮುಖವಾಗಿ ರಥ ಎಳೆದರು.

ಕ್ಲಿಕ್ ಮಾಡಿ ಓದಿ: ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್ ಕೊಡಲು ತಾಕೀತು
ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ರಥದ ಕಳಶಕ್ಕೆ ಬಾಳೆಹಣ್ಣು ತೂರಿ ಭಕ್ತಿ ಭಾವ ಮೆರೆದರು. ರಥೋತ್ಸವದ ನಂತರ ರಥದ ಮೇಲೆ ಪ್ರತಿಷ್ಠಾಪಿತವಾಗಿದ್ದ ದೇವರಿಗೆ ಮಂಗಳಾರತಿ ಮಾಡಿಸಿ, ಇಷ್ಟಾರ್ಥ ಸಿದ್ಧಿಸುವಂತೆ ಬೇಡಿಕೊಂಡರು. ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.
ಬಯಲುಸೀಮೆಯ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹೊರಕೆರೆ ರಂಗಪ್ಪನ ತೇರಿಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮಾರ್ಗಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳು ಸಂಚರಿಸಿದವು. ಚಿತ್ರಹಳ್ಳಿ ಗೇಟ್‌ನಿಂದ ಆಟೋರಿಕ್ಷಾ, ಟೆಂಪೋ, ಲಗೇಜ್‌ಆಟೋಗಳಲ್ಲಿ ಭಕ್ತರು ತಂಡೋಪತಂಡವಾಗಿ ಜಾತ್ರೆಗೆ ಆಗಮಿಸುತ್ತಿದ್ದರು. ಯತೀಶ್ ಎಂಬ ಭಕ್ತರು ₹1.51 ಲಕ್ಷಕ್ಕೆ ಹೂವಿನ ಹಾರವನ್ನು ಹರಾಜಿನಲ್ಲಿ ಪಡೆದರು.
ಕೆಲವರು ರಥೋತ್ಸವ ಮುಗಿದ ನಂತರವೂ ಒಂದೆರಡು ದಿನ ಇಲ್ಲೇ ತಂಗಿದ್ದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಕಲ್ಯಾಣಿಯ ಪಕ್ಕದಲ್ಲಿ ಇರುವ ಮೈದಾನದಲ್ಲಿ ಅಡುಗೆ ಸಿದ್ಧಪಡಿಸಿ ದೇವರ ಹರಕೆ ತೀರಿಸುತ್ತಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ಎಸ್‌ಎಲ್‌ಎನ್‌ಎಸ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಘು ಉಪಾಹಾರ, ವಸತಿ, ಕುಡಿಯುವ ನೀರಿನ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಜಾತ್ರೆಯಲ್ಲಿ ಪಾಲ್ಗೊಂಡರು.
